ADVERTISEMENT

BAMUL Election | ಅಣ್ಣನ ಬಲ; ತಮ್ಮನಿಗೆ ಭಾರಿ ಅಂತರದ ಗೆಲುವು

ಸುಧೀಂದ್ರ ‌ಸಿ.ಕೆ.

​ಪ್ರಜಾವಾಣಿ ವಾರ್ತೆ
Published 26 ಮೇ 2025, 4:58 IST
Last Updated 26 ಮೇ 2025, 4:58 IST
   

‌ಮಾಗಡಿ: ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮಾಗಡಿಯಿಂದ ಸ್ಪರ್ಧಿಸಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಸಹೋದರ ಎಚ್.ಎನ್. ಅಶೋಕ್ (ತಮ್ಮಾಜಿ) ಭಾರೀ ಅಂತರದೊಂದಿಗೆ ಗೆದ್ದು, ಮೊದಲ ಸಲ ಬಮೂಲ್ ನಿರ್ದೇಶಕ ಸ್ಥಾನ ಅಲಂಕರಿಸಿದ್ದಾರೆ. ಒಟ್ಟು 143 ಮತಗಳ ಪೈಕಿ ಅಶೋಕ್ ಬರೋಬ್ಬರಿ 133 ಮತಗಳನ್ನು ಪಡೆದಿದ್ದಾರೆ. ಎದುರಾಳಿ ಚಂದ್ರಮ್ಮ ಕೆಂಪೇಗೌಡ ಅವರಿಗೆ ಕೇವಲ 8 ಮತಗಳು ಬಂದಿವೆ.

ಹಾಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಒಕ್ಕಲಿಗರ ಸಂಘದ ನಿರ್ದೇಶಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಅಶೋಕ್, ಇದೀಗ ಹಾಲಿನ ರಾಜಕಾರಣಕ್ಕೆ ಭಾರೀ ಗೆಲುವಿನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಅವ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 

ಬಾಲಕೃಷ್ಣ ಭದ್ರಕೋಟೆ: ತಾಲ್ಲೂಕಿನ ಸಹಕಾರಿ ಕ್ಷೇತ್ರವು ಶಾಸಕ ಬಾಲಕೃಷ್ಣ ಅವರ ಭದ್ರಕೋಟೆಯಾಗಿದೆ. ಅದೇ ಕಾರಣಕ್ಕೆ ಸತತ 6 ಬಾರಿ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಅವರ ಬೆಂಬಲಿಗರೇ ಗೆಲ್ಲುತ್ತಿದ್ದಾರೆ. ಹಿಂದೆ 5 ಸಲ ಪೂಜಾರಿಪಾಳ್ಯ ನರಸಿಂಹಮೂರ್ತಿ ಗೆದ್ದಿದ್ದರು. ಆರನೇ ಸಲ ಎಚ್.ಎನ್. ಅಶೋಕ್ ಗೆಲುವು ಸಾಧಿಸಿದ್ದಾರೆ. ಕುದೂರಿನಿಂದ ಅವಿರೋಧವಾಗಿ ಆಯ್ಕೆಯಾಗಿರುವ ಕೆಇಬಿ ರಾಜಣ್ಣ ಸಹ ಬಾಲಕೃಷ್ಣ ಬೆಂಬಲಿಗ. ಅವರು ಸಹ 2ನೇ ಸಲ ಬಮೂಲ್ ಪ್ರವೇಶಿಸಿದ್ದಾರೆ.

ADVERTISEMENT

‘ಸಹೋದರ ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಅವರ ಸಹಕಾರ, ತಾಲ್ಲೂಕಿನ ಡೇರಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಕ್ಷಾತೀತ ಬೆಂಬಲದಿಂದಾಗಿ ಅತಿ ಹೆಚ್ಚು ಮತಗಳ ಅಂತರದ ಗೆಲುವು ಸಾಧ್ಯವಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುವೆ. ನಾನು ಕೂಡ ರೈತ ಕುಟುಂಬದಿಂದ ಬಂದಿರುವುದರಿಂದ ರೈತರ ಕಷ್ಟ–ಸುಖಗಳು ತಿಳಿದಿವೆ. ಈ ಗೆಲುವನ್ನು ನಮ್ಮ ಕಾರ್ಯಕರ್ತರಿಗೆ  ಅರ್ಪಿಸುವೆ’ ಎಂದು ಗೆಲುವಿನ ಬಳಿಕ ಎಚ್.ಎನ್. ಅಶೋಕ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ನಾಗರಾಜುಗೆ 6ನೇ ಗೆಲುವು

ರಾಮನಗರದಿಂದ ಗೆದ್ದಿರುವ ಪಿ. ನಾಗರಾಜು ಕಳೆದ 40 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿದ್ದು, ಇದೀಗ ಸತತ 6ನೇ ಸಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. 4 ಬಾರಿ ಚುನಾವಣೆ ಎದುರಿಸಿ ಹಾಗೂ 2 ಸಲ ಅವಿರೋಧವಾಗಿ ಆಯ್ಕೆಯಾಗಿರುವ ಅವರು, ಒಮ್ಮೆ ಕೆಎಂಎಫ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಸಲ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರೇಣುಕಮ್ಮ ಕೆಂಪಣ್ಣ ಎದುರು ನಾಗರಾಜು 89 ಮತಗಳನ್ನು ಪಡೆದು ಗೆದ್ದಿದ್ದಾರೆ. ಎದುರಾಳಿ ರೇಣುಕಮ್ಮ 51 ಮತಗಳನ್ನಷ್ಟೇ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.