ADVERTISEMENT

‘ಬಿಗ್ ಬಾಸ್’ ಮನೆ ಮುಂದೆ ಹೈಡ್ರಾಮಾ!

ರಾತ್ರೋರಾತ್ರಿ ಬೀಗ ತೆಗೆದು ಷೋ ನಡೆಸಲು ಅನುವು: ಕನ್ನಡಪರ ಕಾರ್ಯಕರ್ತರು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:53 IST
Last Updated 10 ಅಕ್ಟೋಬರ್ 2025, 1:53 IST
DEFAULT CAPTION
DEFAULT CAPTION   

ರಾಮನಗರ: ಜನಪ್ರಿಯ ‘ಬಿಗ್ ಬಾಸ್’ ರಿಯಾಲಿಟಿ ಷೋ ಮನೆ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೊಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಹಾಕಿದ್ದ ಬೀಗಮುದ್ರೆಯನ್ನು ರಾತ್ರೋರಾತ್ರಿ ತೆರವುಗೊಳಿಸಿ, ಷೋ ನಡೆಯಲು ಅನುವು ಮಾಡಿಕೊಟ್ಟಿರುವುದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಜಾಲಿವುಡ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕೆಲ ಮುಖಂಡರು ಘೋಷಣೆ ಕೂಗುತ್ತಾ ಏಕಾಏಕಿ ಜಾಲಿವುಡ್ ಒಳಕ್ಕೆ ಪ್ರವೇಶಿಸಿದರು. ಕೆಲ ಮಹಿಳೆಯರು ಗೇಟ್ ಹತ್ತಿದರು. ಆಗ ಪೊಲೀಸರು ಮುಖಂಡರು ಹಾಗೂ ಮಹಿಳೆಯರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು.

ನಿಯಮ ಲೆಕ್ಕಕ್ಕಿಲ್ಲ:

ವಿವಿಧ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬೀಗಮುದ್ರೆ ಹಾಕುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಆದೇಶದ ಮೇರೆಗೆ, ಜಾಲಿವುಡ್ ಪಾರ್ಕ್‌ಗೆ ಬೀಗಮುದ್ರೆ ಹಾಕಿಸಿದ್ದ ಜಿಲ್ಲಾಧಿಕಾರಿ, ಇದೀಗ ಉಪ ಮುಖ್ಯಮಂತ್ರಿ ಮಾತಿಗೆ ಮಣಿದು ರಾತ್ರೋರಾತ್ರಿ ಬೀಗ ತೆಗೆಯುವ ಮೂಲಕ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರಿ ರಜಾ ದಿನವನ್ನೂ ಲೆಕ್ಕಿಸದೆ ಜಾಲಿವುಡ್‌ಗೆ ಬೀಗ ಜಡಿದು ಬಿಗ್‌ ಬಾಸ್ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸಿದ್ದ ಜಿಲ್ಲಾಧಿಕಾರಿ, ಡಿಸಿಎಂ ಸೂಚನೆ ನೀಡಿದರೆಂದು ರಾತ್ರಿ 2.30ರ ಸುಮಾರಿಗೆ ಪೊಲೀಸರೊಂದಿಗೆ ಬಂದು ಸ್ಟುಡಿಯೊ ಬೀಗ ತೆರವುಗೊಳಿಸುವಂತಹ ತುರ್ತು ಪರಿಸ್ಥಿತಿ ಏನಿತ್ತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಮಂಡಳಿಯು ಈಗಾಗಲೇ 150 ಕಾರ್ಖಾನೆಗಳನ್ನು ನಿಯಮ ಉಲ್ಲಂಘನೆಗಾಗಿ ಬೀಗ ಹಾಕಲಾಗಿದೆ. ಅವುಗಳ ಬೀಗ ಸಹ ತೆಗೆದು ಕಾರ್ಯಾಚರಣೆ ಅವಕಾಶ ನೀಡಬೇಕು. ಬಿಗ್‌ ಬಾಸ್ ಶೂಟಿಂಗ್ ಕೇವಲ ಮೂರು ತಿಂಗಳು ನಡೆಯಲಿದೆ. ಆದರೆ, ಮುಚ್ಚಿರುವ ಕಾರ್ಖಾನೆಗಳು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದವು. ಜಾಲಿವುಡ್‌ಗೆ ಒಂದು ನ್ಯಾಯ, ಕಾರ್ಖಾನೆಗಳಿಗೆ ಮತ್ತೊಂದು ನ್ಯಾಯವಾದರೆ ಹೇಗೆ ಎಂದು ಆಕ್ರೋಶ ಹೊರಹಾಕಿದರು.

ಕಸ್ತೂರಿ ಕನ್ನಡಪರ ಸಂಘಟನೆಯ ನೀಲೇಶ್ ಗೌಡ, ಮುಖಂಡ ನರಸಿಂಹಮೂರ್ತಿ ಸೇರಿದಂತೆ ಕಾರ್ಯಕರ್ತರು ಇದ್ದರು.

ತಮಿಳುನಾಡು ಸಿ.ಎಂ ಕರೆಗೆ ಮಣಿದ ಡಿಸಿಎಂ

ಜಾಲಿವುಡ್ ಪಾರ್ಕ್ ತಮಿಳುನಾಡು ಮೂಲದ ವೇಲ್ಸ್ ಸ್ಟುಡಿಯೊಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್‌ ಒಡೆತನಕ್ಕೆ ಸೇರಿದೆ. ಮಂಡಳಿಯು ಪಾರ್ಕ್‌ಗೆ ಬೀಗ ಹಾಕುತ್ತಿದ್ದಂತೆ, ಪಾರ್ಕ್‌ನವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮೊರೆ ಹೋಗಿದ್ದಾರೆ. ಸ್ಟಾಲಿನ್ ಕರೆ ಮಾಡಿದ ತಕ್ಷಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೀಗ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನಿಡಿದ್ದಾರೆ ಎಂದು ಕನ್ನಡಪರ ಹೋರಾಟಗಾರ ನರಸಿಂಹಮೂರ್ತಿ ಆರೋಪಿಸಿದರು.

ಮನರಂಜನಾ ಉದ್ಯಮ ಬೆಂಬಲಿಸಲು ಬದ್ಧ: ಡಿಕೆಶಿ

‘ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಿಕೊಳ್ಳಲು ಸ್ಟುಡಿಯೊಗೆ ಕಾಲಾವಕಾಶ ನೀಡಲಾಗುವುದು. ಪರಿಸರ ಸಂರಕ್ಷಣೆ ಕಡೆಗೆ ನಮ್ಮ ಜವಾಬ್ದಾರಿ ಎತ್ತಿ ಹಿಡಿಯುವುದರ ಜೊತೆಗೆ, ಕನ್ನಡ ಮನರಂಜನಾ ಉದ್ಯಮ ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ’ ಎಂದು ಡಿಸಿಎಂ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಟ್ಟು, ಬೋಲ್ಟು ಚರ್ಚೆ

ಇದರ ನಡುವೆಯೇ ಡಿಸಿಎಂ ಅವರ, ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವ ಹೇ‌ಳಿಕೆ ಮುನ್ನೆಲೆಗೆ ಬಂದಿತ್ತು. ಅದೇ ಕಾರಣಕ್ಕೆ ‘ಬಿಗ್‌ ಬಾಸ್’ ಗುರಿಯಾಗಿಸಿಕೊಂಡು ಜಾಲಿವುಡ್‌ಗೆ ಬೀಗ ಹಾಕಲಾಗಿದೆ ಎಂಬ ಚರ್ಚೆ ಶುರುವಾಗಿತ್ತು. ಜೆಡಿಎಸ್ ಸಹ ಡಿಸಿಎಂ ಹೇಳಿಕೆ ನೆನಪಿಸಿ ಟೀಕಿಸಿತ್ತು.

ಕಾವೇರದ ಚರ್ಚೆಯು ತಮ್ಮ ಗಮನಕ್ಕೆ ಬರುತ್ತಿದ್ದಂತೆ, ಜಾಲಿವುಡ್‌ಗೆ ಕಾಲಾವಕಾಶ ನೀಡುವುದಾಗಿ ಡಿಸಿಎಂ ಹೇಳಿದ್ದರು. ಡಿಸಿಎಂ ಮಾತಿಗೆ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಇದರ ನಡುವೆ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಸ್ಟುಡಿಯೊ ಬೀಗ ತೆಗೆಸಿ, ಷೋ ನಡೆಯಲು ಅನುವು ಮಾಡಿಕೊಡುವಂತೆ ಕೋರಿದ್ದರು.

ಡಿಸಿಎಂಗೆ ಸುದೀಪ್ ಧನ್ಯವಾದ

ಸ್ಟುಡಿಯೊ ಬೀಗ ತೆರವಿಗೆ ಸೂಚನೆ ನೀಡಿದ ಬೆನ್ನಲ್ಲೇ,, ಷೋ ನಿರೂಪಕ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂಗೆ ಧನ್ಯವಾದ ಸಲ್ಲಿಸಿದ್ದಾರೆ. ‘ನನ್ನ ಕರೆಗೆ ಸ್ಪಂದಿಸಿದ ಗೌರವಾನ್ವಿತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಬಿಗ್ ಬಾಸ್ ಈ ಗೊಂದಲದಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ನಲಪಾಡ್ ಅವರಿಗೂ ಧನ್ಯವಾದ’ ಎಂದು ತಮ್ಮ ‘ಎಕ್ಸ್‌’ ಖಾತೆಯಲ್ಲಿ ರಾತ್ರಿ 11.42ಕ್ಕೆ ಪೋಸ್ಟ್ ಹಾಕಿದ್ದಾರೆ.

ಬಿಗ್‌ಬಾಸ್‌ ಜ್ಯೋತಿ ಆರಲು ಅಸಾಧ್ಯ: ಮನೆಗೆ ಮರಳಿದ ಸ್ಪರ್ಧಿಗಳು

ಬೆಂಗಳೂರು: ಕನ್ನಡದ ರಿಯಾಲಿಟಿ ಷೋ ಬಿಗ್‌ಬಾಸ್‌ 12ನೇ ಆವೃತ್ತಿ ಎಂದಿನಂತೆ ಗುರುವಾರ ಮತ್ತೆ ಶುರುವಾಗಿದೆ. ಎರಡು ದಿನ ಪೂರ್ತಿಯಾಗಿ ಖಾಲಿಯಾಗಿದ್ದ ಮನೆ ಈಗ ಸ್ಪರ್ಧಿಗಳಿಂದ ಭರ್ತಿಯಾಗಿದೆ.

ಹೊಸ ಹುರುಪಿನೊಂದಿಗೆ ಸ್ಪರ್ಧಿಗಳನ್ನು ಮನೆ ಒಳಗೆ ಬಿಗ್‌ಬಾಸ್‌  ಬರಮಾಡಿಕೊಳ್ಳುವ ಪ್ರೊಮೊವೊಂದನ್ನು ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.  

ಬಿಗ್‌ಬಾಸ್‌ ಹೊಸ ಪ್ರೊಮೋದಲ್ಲಿ ಏನಿದೆ?

‘ಇದು ಬಿಗ್‌ಬಾಸ್‌ ಮನೆ ಮಾತ್ರವಲ್ಲ, ಕನ್ನಡಿಗರ ಹೆಮ್ಮೆ. ಕನ್ನಡಿಗರೆಲ್ಲಾ ಹಚ್ಚಿ ಸಂಭ್ರಮಿಸೊ ಈ ಜ್ಯೋತಿ ಆರಲು ಅಸಾಧ್ಯ. ನಿಮ್ಮ ಆಟಕ್ಕೆ ನೀಡಿದ್ದ ಅಲ್ಪ ವಿರಾಮ ಮುಗಿದಿದೆ. ಹೊಸ ಹುರುಪು ಹಾಗೂ ಇನ್ನಷ್ಟು ಛಲದೊಂದಿಗೆ ಆಟ ಮುಂದುವರೆಸಿ’ ಎಂದು ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಹುರುಪು ನೀಡಿದ್ದಾರೆ.

ಬಿಗ್‌ಬಾಸ್‌ ಧ್ವನಿ ಕೇಳುತ್ತಿದ್ದಂತೆ ಮನೆಮಂದಿ ಮುಖದಲ್ಲಿ ನಗು ಅರಳಿದೆ. ಹೊಸ ಹುರುಪಿನೊಂದಿಗೆ ಬಿಗ್‌ಬಾಸ್‌ ಮನೆ ಒಳಗಡೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.