ಕನಕಪುರ: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಒಂದು ಕಡೆ ರಸ್ತೆಯಲ್ಲಿ ದ್ವಿಮುಖ ಸಂಚಾರದಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಕನಕಪುರದ ಎಂ.ಜಿ.ರಸ್ತೆಗೆ ಕಾಂಕ್ರೀಟ್ ಹಾಕುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರಿಗೆ ಕಿರಿಯಾಗುತ್ತಿದೆ. ನಗರದ ನಾರಾಯಣಪ್ಪನ ಕೆರೆಯಿಂದ ತುಂಗಣಿ ಬೈಪಾಸ್ ಜಂಕ್ಷನ್‌ವರೆಗೆ ಸುಮಾರು ₹36 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಒಂದು ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಂದು ಭಾಗಕ್ಕೆ ಕಾಂಕ್ರೀಟ್ ಹಾಕಿದ್ದು, ಇನ್ನೊಂದು ಕಡೆ ದ್ವಿಮುಖ ಸಂಚಾರದಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು ಜನ ಬೇಸತ್ತಿದ್ದಾರೆ.
ರಸ್ತೆ ಕಾಮಗಾರಿ ಆರಂಭಿಸುವುದಕ್ಕೂ ಮುನ್ನಾ ಪರ್ಯಾಯ ವ್ಯವಸ್ಥೆ ಮಾಡದೆ ಕಾಮಗಾರಿ ಪ್ರಾರಂಭಿಸಿದ್ದು, ವಾಹನ ದಟ್ಟಣೆಯಿಂದ ಜನ ಹಿಡಿಶಾಪ ಹಾಕುತ್ತಿದ್ದಾರೆ. ಜೊತೆಗೆ ಅಂಗಡಿ, ಹೋಟೆಲ್ ಮುಂಭಾಗ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ವಾಹನ ದಟ್ಟಣೆಯಿಂದ ಜನ ಒದ್ದಾಡುತ್ತಿದ್ದರೂ ನಗರಾಡಳಿತ, ತಾಲ್ಲೂಕು ಆಡಳಿತವಾಗಲಿ ಕ್ರಮ ವಹಿಸದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಬೇಕು. ಅಂಗಡಿ, ಹೋಟೆಲ್ ಮುಂದೆ ನಿಲ್ಲಿಸುವ ವಾಹನಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಲಾಗುವುದು
ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲಾ ವಾಹನಗಳು ಒಂದೇ ರಸ್ತೆಯಲ್ಲಿ ಹೋಗಬೇಕಿದೆ. ಅದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆಯವರು ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ವಾಹನ ದಟ್ಟಣೆ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಮುಖ್ಯಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.ಎಂ.ಎಸ್.ಮಹದೇವ್ ನಗರಸಭೆ ಪೌರಾಯುಕ್ತರು ಕನಕಪುರ
ಸುಗಮ ಸಂಚಾರಕ್ಕೆ ಸಾರ್ವಜನಿಕರು ಸಹಕರಿಸಿ
ರಸ್ತೆ ಕಾಮಗಾರಿಯಿಂದ ಒಂದೇ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರು ಸಂಚರಿಸಬೇಕಿದೆ. ಹಾಗಾಗಿ ಅಂಗಡಿ ಹೋಟೆಲ್‌ಗಳ ಮುಂಭಾಗ ವಾಹನಗಳನ್ನು ನಿಲ್ಲಿಸದೆ ಸುಗಮ ಸಂಚಾರಕ್ಕೆ ಸಾರ್ವಜನಿಕರು ಸಹಕರಿಸಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದು ವಾಹನ ದಟ್ಟಣೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.ಅನಂತ್‌ರಾಮ್ ಸರ್ಕಲ್ ಇನ್‌ಸ್ಪೆಕ್ಟರ್ ನಗರ ವಿಭಾಗ ಕನಕಪುರ
ಬೃಹತ್ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ರಸ್ತೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ. ಲಾರಿ ಸೇರಿದಂತೆ ಬೃಹತ್ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಬಿಡಬೇಕು. ಅಂಗಡಿ ಹೋಟೆಲ್‌ಗಳ ಮುಂದೆ ವಾಹನ ನಿಲ್ಲಿಸದಂತೆ ಕ್ರಮವಹಿಸುವ ಮೂಲಕ ಸಂಚಾರ ವ್ಯವಸ್ಥೆ ಸರಿಪಡಿಸಬೇಕು.ವೆಂಕಟೇಶ್ ಕನಕಪುರ ನಾಗರಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.