ADVERTISEMENT

ರೇಷ್ಮೆನಗರಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಪಾದಯಾತ್ರೆಗೆ ಕ್ಷಣಗಣನೆ

ರೇಷ್ಮೆನಗರಿಯಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ: 50 ಸಾವಿರ ಮಂದಿ ಭಾಗಿ ನಿರೀಕ್ಷೆ

ಆರ್.ಜಿತೇಂದ್ರ
Published 26 ಫೆಬ್ರುವರಿ 2022, 20:50 IST
Last Updated 26 ಫೆಬ್ರುವರಿ 2022, 20:50 IST
ರಾಮನಗರದ ಟಿ.ಆರ್. ಮಿಲ್‌ ಮೈದಾನದಲ್ಲಿ ಶನಿವಾರ ವೇದಿಕೆ ಹಾಗೂ ಆಸನಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿತ್ತು
ರಾಮನಗರದ ಟಿ.ಆರ್. ಮಿಲ್‌ ಮೈದಾನದಲ್ಲಿ ಶನಿವಾರ ವೇದಿಕೆ ಹಾಗೂ ಆಸನಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿತ್ತು   

ರಾಮನಗರ: ಮೇಕೆದಾಟು ಪಾದಯಾತ್ರೆಗೆ ಅಲ್ಪ ವಿರಾಮ ಹಾಕಿದ್ದ ಕಾಂಗ್ರೆಸ್‌ ಅದೇ ಉತ್ಸಾಹದಲ್ಲಿ ಮತ್ತೆ ಹೆಜ್ಜೆ ಇಡಲು ಸಿದ್ಧವಾಗಿದ್ದು, ಇಲ್ಲಿನ ಟಿ.ಆರ್. ಮಿಲ್‌ ಮೈದಾನದಲ್ಲಿ ಭಾನುವಾರ ಎರಡನೇ ಹಂತದ ‘ನೀರಿಗಾಗಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಕಳೆದ ಜನವರಿ 9ರಂದು ಕನಕಪುರ ತಾಲ್ಲೂಕಿನ ಸಂಗಮದ ಕಾವೇರಿ ನದಿ ತಟದಿಂದ ಆರಂಭಗೊಂಡ ಮೇಕೆದಾಟು ಪಾದಯಾತ್ರೆಯು ನಾಲ್ಕು ದಿನ ಪೂರೈಸುವಷ್ಟರಲ್ಲೇ ಕೋವಿಡ್ ವಿಘ್ನ ಎದುರಾದ ಕಾರಣ ಅರ್ಧಕ್ಕೆ ಮೊಟಕುಗೊಂಡಿತ್ತು. ಇದೀಗ ರಾಜ್ಯದಲ್ಲಿ ಕೋವಿಡ್‌ ಅಲೆ ಕ್ಷೀಣವಾಗಿದ್ದು, ರಾಮನಗರದ ಅದಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಐದು ದಿನಗಳ ಈ ನಡಿಗೆ ನಿರ್ವಿಘ್ನವಾಗಲಿ ಎಂದು ಕಾಂಗ್ರೆಸ್ ನಾಯಕರು ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿ ನಡೆದಿರುವ ಪಾದಯಾತ್ರೆಯು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದ್ದು, ಜೆಡಿಎಸ್ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹಿಂದಿಗಿಂತ ಅಪರಿಮಿತ ಉತ್ಸಾಹ ಹಾಗೂ ಜನಬೆಂಬಲದೊಂದಿಗೆ ಕಾರ್ಯಕ್ರಮ ಸಂಘಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾದಯಾತ್ರೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಉರಿದುಬಿದ್ದಿದ್ದು, ಟೀಕಾಪ್ರಹಾರ ಮುಂದುವರಿದಿದೆ.

ADVERTISEMENT

ಈ ಬಾರಿ ರಾಜ್ಯ ಕಾಂಗ್ರೆಸ್ ನಾಯಕರೊಟ್ಟಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೇವಾಲ ಪಾಲ್ಗೊಳ್ಳಲಿದ್ದು, ಅವರೇ ಪಾದಯಾತ್ರೆ ಮುಂದುವರಿಕೆಗೆ ಹಸಿರು ನಿಶಾನೆ ತೋರಲಿದ್ದಾರೆ. ಅವರೊಟ್ಟಿಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಆದಿಯಾಗಿ ಇಡೀ ಕೈ ಪಾಳಯವೇ ರಾಮನಗರಕ್ಕೆ ಬಂದು ಸೇರಿದೆ.

ಭಾನುವಾರ ಆರಂಭವಾಗಲಿರುವ ನಡಿಗೆಯು ರಾಜ್ಯ ಬಜೆಟ್‌ನ ಮುನ್ನಾ ದಿನವಾದ ಮಾರ್ಚ್‌ 3ರಂದು ಬೆಂಗಳೂರಿನಲ್ಲಿ ಮುಕ್ತಾಯ ಆಗಲಿದೆ. ಬಜೆಟ್‌ ಕಾರಣಕ್ಕೇ ಈ ಬಾರಿ ನಡಿಗೆ ಅವಧಿಯನ್ನು ಎರಡು ದಿನ ಕಡಿತ ಮಾಡಲಾಗಿದೆ. ಮೊದಲ ದಿನದಂದು ನೆರೆಯ ಮಂಡ್ಯ ಜಿಲ್ಲೆಯ ಕಾರ್ಯಕರ್ತರ ಜೊತೆಗೆ ರಾಜ್ಯದಾದ್ಯಂತ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಅವರಿಗೆ ಬೇಕಾದ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ.

ಹಬ್ಬದ ಸಿಂಗಾರ: ಪಾದಯಾತ್ರೆಗೆಂದು ರಾಮನಗರವನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ಊರ ತುಂಬೆಲ್ಲ ಕಾಂಗ್ರೆಸ್ ಧ್ವಜ, ಕೈ ನಾಯಕರ ಫ್ಲೆಕ್ಸ್‌ ರಾರಾಜಿಸುತ್ತಿವೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ.

ಅನುಮತಿ ಇಲ್ಲ: ಪಾದಯಾತ್ರೆಗೆ ಅನುಮತಿ ಕೋರಿ ರಾಮನಗರ ಕಾಂಗ್ರೆಸ್ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಆದರೆ ಇದೇ 28ರವರೆಗೆ ರಾಜ್ಯದಲ್ಲಿ ಕೋವಿಡ್‌ ಮಾರ್ಗಸೂಚಿ ಜಾರಿಯಲ್ಲಿರುವ ಕಾರಣ ಅನುಮತಿ ಸಾಧ್ಯವಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ತಿಳಿಸಿದ್ದಾರೆ.

ಕ್ರಮಿಸುವ ದೂರ ಕಡಿತ

ಈ ಮೊದಲು 11 ದಿನಗಳ ಕಾಲ 169 ಕಿ.ಮೀ ನಡಿಗೆಗೆ ಉದ್ದೇಶಿಸಲಾಗಿತ್ತು. ಇದರಲ್ಲಿ ಸಂಗಮದಿಂದ ರಾಮನಗರದವರೆಗೆ 60.6 ಕಿ.ಮೀ ನಡಿಗೆ ಪೂರ್ಣಗೊಂಡಿದ್ದು, ಇನ್ನೂ 109 ಕಿ.ಮೀ ಬಾಕಿ ಇತ್ತು. ಆದರೆ ಪರಿಷ್ಕೃತ ಮಾರ್ಗದಂತೆ ಈಗ 5 ದಿನದಲ್ಲಿ 80 ಕಿ.ಮೀ ಉದ್ದಕ್ಕೆ ಪಾದಯಾತ್ರೆ ಸಂಚರಿಸಲಿದೆ.

ಎರಡನೇ ಹಂತದ ಪಾದಯಾತ್ರೆ ಮಾರ್ಗ

ಫೆ. 27 (ಮೊದಲ ದಿನ): ರಾಮನಗರದಿಂದ ಬಿಡದಿ (15.ಕಿ.ಮೀ)
ಫೆ. 28: (ಎರಡನೇ ದಿನ): ಬಿಡದಿಯಿಂದ ಕೆಂಗೇರಿ (20.5 ಕಿ.ಮೀ)
ಮಾ. 1: ಕೆಂಗೇರಿಯಿಂದ ಅದ್ವೈತ ಪೆಟ್ರೋಲ್ ಬಂಕ್‌ (ಹೊರವರ್ತುಲ ರಸ್ತೆ) (15.8 ಕಿ.ಮೀ)
ಮಾ. 2: ಅದ್ವೈತ್‌ ಪೆಟ್ರೋಲ್‌ ಬಂಕ್ ಇಂದ ಮೇಕ್ರಿ ವೃತ್ತ (16.7 ಕಿ.ಮೀ)
ಮಾ. 3: ಮೇಕ್ರಿ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನ (11.8 ಕಿ.ಮೀ)

ವಾಹನ ಸಂಚಾರದ ಮಾರ್ಗ ಬದಲು

ಪಾದಯಾತ್ರೆಯು ಮೊದಲ ಮೂರು ದಿನಗಳು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಾಗಲಿದೆ. ಹೀಗಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಮಂಡ್ಯ ಕಡೆಯಿಂದ ಬರುವವರು ಮದ್ದೂರಿನಿಂದ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಬಹುದು. ಮೈಸೂರು, ಮಡಿಕೇರಿ ಭಾಗದಿಂದ ಬರುವವರು ಹಾಸನ ಹೆದ್ದಾರಿ ಇಲ್ಲವೇ ಮದ್ದೂರಿನಿಂದ ಕನಕಪುರ ಮಾರ್ಗವಾಗಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಬಹುದು.

ಬಿಗಿ ಪೊಲೀಸ್ ಭದ್ರತೆ: ಪಾದಯಾತ್ರೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಐಜಿಪಿ ಜೊತೆಗೆ ರಾಮನಗರ ಎಸ್‌.ಪಿ‌ ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಎಎಸ್‌ಪಿಗಳು ಭದ್ರತೆ ನೇತೃತ್ವ ವಹಿಸಿದ್ದಾರೆ. 14 ಕೆಎಸ್‌ಆರ್‌ಪಿ ಹಾಗೂ 1200 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

* ಸಿದ್ದರಾಮಯ್ಯ ಅವರಿಗೆ ತಮ್ಮ ಶಕ್ತಿ ಏನೆಂದು ತೋರಿಸಲು ಡಿ.ಕೆ.ಶಿವಕುಮಾರ್‌ ಅವರು ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ನಡೆಸುತ್ತಿರುವ ‘ಡ್ರಾಮಾ ಪಾರ್ಟ್–2’

-ಬಿ.ಸಿ. ಪಾಟೀಲ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.