ರಾಮನಗರ: ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಬೆಳೆಹಾನಿಗೆ ಜಿಲ್ಲೆಯ ರೈತರು ಬೇಸತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ಉಪಟಳಕ್ಕೆ ಅರಣ್ಯದಂಚಿನ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಬದುಕಿಗೆ ಆಧಾರವಾಗಿದ್ದ ಜಮೀನನ್ನು ಕಾಡಾನೆ ಕಾಟದಿಂದಾಗಿ ಪಾಳುಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಜಿಲ್ಲೆಯಲ್ಲಿ 2012ರಿಂದ ಕಾಡಾನೆಗಳಿಂದ ಆಗುತ್ತಿರುವ ಬೆಳೆಹಾನಿ ಏರುಗತಿಯಲ್ಲೇ ಸಾಗುತ್ತಿದೆ. ಕಳೆದ 13 ವರ್ಷದಲ್ಲಿ 31,485 ಬೆಳೆಹಾನಿ ಪ್ರಕರಣಗಳು ವರದಿಯಾಗಿವೆ. 2012–13ನೇ ಸಾಲಿನಲ್ಲಿ 3,728 ಪ್ರಕರಣಗಳು ವರದಿಯಾಗಿದ್ದರೆ, 2023–24ನೇ ಸಾಲಿನಲ್ಲಿ 5,144 ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಬೆಳೆ ಹಾನಿಯಾದ ವರ್ಷವಿದು. ಇನ್ನು 2024–25ರಲ್ಲಿ 2,586 ವರದಿಯಾಗಿವೆ.
1,520 ಬೆಳೆ ನಷ್ಟ ಪ್ರಕರಣ: ‘ಕಾಡಾನೆಗಳು ಮಾಡುವ ಆಸ್ತಿ ನಷ್ಟಕ್ಕೆ ಇಲಾಖೆಯು 2020ನೇ ಸಾಲಿನಿಂದ ಪರಿಹಾರ ನೀಡುತ್ತಿದ್ದು, 2020–21ನೇ ಸಾಲಿನಿಂದ 2024–25ರವರೆಗೆ 1,520 ಪ್ರಕರಣಗಳು ದಾಖಲಾಗಿವೆ’ ಎಂದು ಅರಣ್ಯ ಇಲಾಖೆಯ ರಾಮನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಂಪೌಂಡ್, ಗೇಟ್, ಬೋರ್‌ವೆಲ್, ಪೈಪ್‌ಲೈನ್, ಡ್ರಿಪ್‌ಲೈನ್, ಶೆಡ್ ಸೇರಿದಂತೆ ಇತರ ಆಸ್ತಿ ನಷ್ಟಗಳು ಪರಿಹಾರ ವ್ಯಾಪ್ತಿಗೆ ಬರಲಿವೆ. ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ಹಿಂದೆ ಗರಿಷ್ಠ ₹10 ಸಾವಿರದವರೆಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು 2022ರಲ್ಲಿ ₹20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ₹74.61 ಲಕ್ಷ ಪರಿಹಾರ ಪಾವತಿಸಲಾಗಿದೆ’ ಎಂದು ಹೇಳಿದರು.
ಪರಿಹಾರ ವ್ಯಾಪ್ತಿಗೆ 61 ಬೆಳೆ: ಅರಣ್ಯ ಇಲಾಖೆಯು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ 61 ಬೆಳೆಗಳನ್ನು ಬೆಳೆಹಾನಿ ಪರಿಹಾರ ವ್ಯಾಪ್ತಿಗೆ ಸೇರಿಸಿದೆ. ಆನೆಹಾವಳಿ ಪ್ರದೇಶಕ್ಕೆ ಅನುಗುಣವಾಗಿ ಬೆಳೆಗಳನ್ನು ಸೇರಿಸಲಾಗಿದೆ. ಕೆಲ ವರ್ಷಗಳ ಹಿಂದೆ ಮಾವು ಸೇರಿದಂತೆ 7 ತೋಟಗಾರಿಕೆ ಬೆಳೆಗಳು ಹಾನಿ ವ್ಯಾಪ್ತಿಗೆ ಬಂದಿವೆ. ಬೆಳೆಗಳಿಗೆ 2016ರಲ್ಲಿದ್ದ ಪರಿಹಾರದ ಮೊತ್ತವನ್ನು 2022ರಲ್ಲಿ ಪರಿಷ್ಕರಿಸಿ ದ್ವಿಗುಣಗೊಳಿಸಲಾಗಿದೆ.
ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ರಾಗಿ, ತೊಗರಿ, ಹೆಸರು, ಉದ್ದು, ಕಬ್ಬು, ಹತ್ತಿ, ಶೇಂಗಾ, ಸೂರ್ಯಕಾಂತಿ, ಸೋಯಾ, ಎಳ್ಳು, ಹುಚ್ಚೆಳ್ಳು, ಕಂಬು, ಬಟಾಣಿ, ಹಲಸಂದೆ, ಅವರೆಕಾಯಿ, ಹಾಗಲಕಾಯಿ, ಬದನೆಕಾಯಿ, ನುಗ್ಗೆಕಾಯಿ, ಗೆಡ್ಡೆಕೋಸು, ಬೆಂಡೆಕಾಯಿ, ಮೂಲಂಗಿ, ಹೀರೆಕಾಯಿ, ಪಡವಲಕಾಯಿ, ತೊಂಡೆಕಾಯಿ, ಹೂಕೋಸು, ಬೀಟ್‌ರೂಟ್, ಈರುಳ್ಳಿ, ಟೊಮ್ಯಾಟೊ, ಆಲೂಗೆಡ್ಡೆ, ಬೀನ್ಸ್, ಕ್ಯಾರೆಟ್, ಅರಿಶಿನ, ಕಲ್ಲಂಗಡಿ, ಹಸಿ ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ, ಶುಂಠಿ, ನವಣೆ, ಎಲೆಕೋಸು, ಕೊತಂಬರಿ, ಏಲಕ್ಕಿ, ಮೆಣಸು, ಹರಳು, ಮೆಂತ್ಯ ಸೊಪ್ಪು, ನಿಂಬೆ, ಚೆಂಡು ಮಲ್ಲಿಗೆ, ಕಾಕಡ ಹೂವು, ಕನಕಾಂಬರ, ಸೇವಂತಿ, ತೆಂಗು, ಅಡಿಕೆ, ಮಾವು, ಸಪೋಟ, ಸೀಬೆ, ಹಲಸು, ದಾಳಿಂಬೆ, ಸೀತಾಫಲ, ಹಿಪ್ಪುನೇರಳೆ, ಕಾಫಿ ಬೆಳೆಗಳು ಪರಿಹಾರದ ವ್ಯಾಪ್ತಿಗೆ ಬರಲಿವೆ.
ಕಾಡಾನೆಯಿಂದ ಆಗುತ್ತಿರುವ ಜೀವಹಾನಿ, ಬೆಳೆಹಾನಿ ಹಾಗೂ ಆಸ್ತಿ ನಷ್ಟ ಖಂಡಿಸಿ ರೈತರು ಹಾಗೂ ರೈತ ಸಂಘಟನೆಗಳು ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತಲೇ ಇವೆ. ಅಸಹಾಯಕ ಅಧಿಕಾರಿಗಳು ಸಹ ಭರವಸೆ ನೀಡುತ್ತಲೇ ಇದ್ದಾರೆ. ಆದರೆ, ಈ ಸಮಸ್ಯೆ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ.
‘ಪರಿಹಾರದ ಮಾನದಂಡ ಬದಲಾಗಲಿ’ ‘ಬೆಳೆಹಾನಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರ ಅವೈಜ್ಞಾನಿಕವಾಗಿದ್ದು ಮಾನದಂಡ ಬದಲಾಗಬೇಕಿದೆ. ಸರ್ಕಾರ ಇತರ ಅಭಿವೃದ್ಧಿ ಯೋಜನೆಗಳಿಗೆ ಭೂ ಸ್ವಾಧೀನ ಮಾಡುವಾಗ ನೀಡುವ ಪರಿಹಾರದ ಮಾನದಂಡವನ್ನೇ ಬೆಳೆಹಾನಿಗೂ ಅನುಸರಿಸಬೇಕು. ಬೆಳೆಗಳ ಜೀವಿತಾವಧಿ ಫಸಲು ಹಾಗೂ ಬೆಳೆಯ ಪ್ರಸಕ್ತ ಮಾರುಕಟ್ಟೆ ದರ ಅಂದಾಜಿಸಿ ಪರಿಹಾರ ಕೊಡಬೇಕು’ಸಿ. ಪುಟ್ಟಸ್ವಾಮಿ ರೈತ ಮುಖಂಡ ಚನ್ನಪಟ್ಟಣ ತಾಲ್ಲೂಕು
‘ಪಾಳು ಬಿದ್ದ ಜಮೀನು ಗುತ್ತಿಗೆ ಪಡೆಯಲಿ’ ‘ಕಾಡಾನೆಗಳಿಂದಾಗಿ ಅರಣ್ಯದಂಚಿನಲ್ಲಿರುವ ರೈತರು ಜಮೀನಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ಇದೆ. ನಿರಂತರ ದಾಳಿಯಿಂದ ಬೇಸತ್ತ ರೈತರು ತಮ್ಮ ಜಮೀನು ಪಾಳು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯವರು ಆನೆಬಾಧಿತ ಪ್ರದೇಶದ ರೈತರ ಜಮೀನನ್ನು ಗುತ್ತಿಗೆ ಪಡೆದು ವಾರ್ಷಿಕ ಇಂತಿಷ್ಟು ಮೊತ್ತ ಕೊಡಲಿ. ಇದರಿಂದ ರೈತರ ಬದುಕಿಗೂ ಆಸರೆಯಾಗುತ್ತದೆ’.ಶ್ರೀನಿವಾಸ್ ನಲ್ಲಹಳ್ಳಿ ರೈತ ಮುಖಂಡ ಕನಕಪುರ ತಾಲ್ಲೂಕು
‘ಪ್ರತಿಭಟನೆ–ಸಭೆಗಳಿಗೆ ಲೆಕ್ಕವಿಲ್ಲ’ ‘ಜಿಲ್ಲೆಯಲ್ಲಿ ಕಾಡಾನೆಯಿಂದ ಬಾಧಿತರಾಗಿರುವ ರೈತರು ನಡೆಸಿದ ಪ್ರತಿಭಟನೆಗಳಿಗೆ ಲೆಕ್ಕವಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ನಮ್ಮೊಂದಿಗೆ ಸಭೆ ನಡೆಸಿ ಆನೆ ನಿಯಂತ್ರಿಸುವ ಭರವಸೆ ನೀಡುತ್ತಲೇ ಇದ್ದಾರೆ. ವರ್ಷದಿಂದ ವರ್ಷಕ್ಕೆ ಹಾವಳಿ ಹೆಚ್ಚುತ್ತಿದೆಯೇ ಹೊರತು ತಗ್ಗುತ್ತಿಲ್ಲ. ಸರ್ಕಾರ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹೊರತು ಪರಿಹಾರ ಸಿಗದು’.ಪುಟ್ಟಲಿಂಗೇಗೌಡ ರೈತ ಮುಖಂಡ ಅಂಕನಹಳ್ಳಿ ರಾಮನಗರ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.