ADVERTISEMENT

120 ವಿದ್ಯಾರ್ಥಿನಿಯರಿಗೆ ಸೈಕಲ್ ಭಾಗ್ಯ

ರೋಟರಿ ಸಹಯೋಗದಲ್ಲಿ ಆಕ್ವಿಟಿ ಸಲ್ಯೂಷನ್ ಸಂಸ್ಥೆಯಿಂದ ಉಚಿತ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 7:55 IST
Last Updated 10 ಜನವರಿ 2024, 7:55 IST
ರಾಮನಗರದ ಗುರುಭವನದಲ್ಲಿ ನಡೆದ ‘ಗರ್ಲ್ಸ್ ಆನ್ ವೀಲ್ಸ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ರೋಟರಿ ಸಮರ್ಪಣೆ, ರಾಮನಗರ ರೋಟರಿ ಸಿಲ್ಕ್ ಸಿಟಿ ಹಾಗೂ ಆಕ್ವಿಟಿ ಸಲ್ಯೂಷನ್ ಕಂಪನಿ ಸಹಯೋಗದಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಯಿತು
ರಾಮನಗರದ ಗುರುಭವನದಲ್ಲಿ ನಡೆದ ‘ಗರ್ಲ್ಸ್ ಆನ್ ವೀಲ್ಸ್’ ಕಾರ್ಯಕ್ರಮದಲ್ಲಿ ಬೆಂಗಳೂರಿನ ರೋಟರಿ ಸಮರ್ಪಣೆ, ರಾಮನಗರ ರೋಟರಿ ಸಿಲ್ಕ್ ಸಿಟಿ ಹಾಗೂ ಆಕ್ವಿಟಿ ಸಲ್ಯೂಷನ್ ಕಂಪನಿ ಸಹಯೋಗದಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಯಿತು   

ರಾಮನಗರ: ಬೆಂಗಳೂರಿನ ರೋಟರಿ ಸಮರ್ಪಣೆ, ರಾಮನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಹಾಗೂ ಆಕ್ವಿಟಿ ಸಲ್ಯೂಷನ್ ಕಂಪನಿ ಸಹಯೋಗದಲ್ಲಿ ಗ್ರಾಮೀಣ ಭಾಗದ ಶಾಲೆಗಳ 120 ಬಡ ವಿದ್ಯಾರ್ಥಿನಿಯರಿಗೆ ಸೋಮವಾರ ಉಚಿತವಾಗಿ ಸೈಕಲ್ ವಿತರಿಸಲಾಯಿತು. ನಗರದ ಗುರುಭವನದಲ್ಲಿ ನಡೆದ ‘ಗರ್ಲ್ಸ್ ಆನ್ ವ್ಹೀಲ್ಸ್‌’ ಕಾರ್ಯಕ್ರಮದಲ್ಲಿ ಗಣ್ಯರು ಸೈಕಲ್‌ಗಳನ್ನು ವಿತರಣೆ ಮಾಡಿದರು.

ಈ ವೇಳೆ ಮಾತನಾಡಿದ ಕಂಪನಿಯ ಡಾ. ಮಿತುಲ್ ತಕ್ಕೇರ್, ‘ಗ್ರಾಮೀಣ ಭಾಗದಿಂದ ಶಾಲೆಗೆ ಬರುವಂತಹ ಹೆಣ್ಣು ಮಕ್ಕಳಿಗೆ ಓಡಾಡಲು ಯಾವುದೇ ವ್ಯವಸ್ಥೆ ಇಲ್ಲ. ಇದರಿಂದಾಗಿ, ಅವರು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ. ಅದನ್ನ ತಪ್ಪಿಸಲು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಕಂಪನಿಯು ರಾಜ್ಯದಾದ್ಯಂತ 1,760 ಸೈಕಲ್‌ಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದೆ’ ಎಂದರು.

‘ಆ ಪೈಕಿ, ರಾಮನಗರ ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯ 3191 ಮತ್ತು 3192 ಡಿಸ್ಟ್ರಿಕ್ಟ್ ಜೊತೆಗೂಡಿ 120 ಸೈಕಲ್‌ಗಳನ್ನು ವಿತರಿಸಿದ್ದೇವೆ. ಸೈಕಲ್‌ಗಳನ್ನು ಪಡೆದ ವಿದ್ಯಾರ್ಥಿನಿಯರ ಮಕ್ಕಳ ಮುಖದಲ್ಲಿರುವ ಆನಂದವು ನಿಜಕ್ಕೂ ಖುಷಿ ತಂದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರೆ ಮಾತ್ರ ದೇಶವು ಅಭಿವೃದ್ಧಿಯತ್ತ ಸಾಗಲು ಸಾಧ್ಯ’ ಎಂದು ಹೇಳಿದರು.

ADVERTISEMENT

ರೋಟರಿ ಸಂಸ್ಥೆಯ 3191ನ ಜಿಲ್ಲಾ ಪಾಲಕ ಉದಯಕುಮಾರ ಭಾಸ್ಕರ್ ಮಾತನಾಡಿ, ‘ಸಿಎಸ್‌ಆರ್‌ ಅನುದಾಡಿ ಸುಮಾರು ₹6 ಸಾವಿರ ಬೆಲೆಯ ಸೈಕಲ್‌ಗಳನ್ನು ರೋಟರಿ ಸಂಸ್ಥೆಯ ಜೊತೆಗೂಡಿ, ಕೇವಲ ₹2,100ಕ್ಕೆ ಕಂಪನಿಯವರು ನೀಡುತ್ತಿದ್ದಾರೆ. ಈ ಹಣವನ್ನು ರೋಟರಿ ಭರಿಸುತ್ತಿದೆ. ಕಂಪನಿ ಜೊತೆಗೂಡಿ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಮಾಡುತ್ತಿದೆ’ ಎಂದು ತಿಳಿಸಿದರು.

ಕಂಪನಿ ನಿರ್ದೇಶಕ ಆನಂದ ಸಂಜೀವ್ ಮತ್ತು ರೋಟರಿ ಸಂಸ್ಥೆಯ 3192ನ ಜಿಲ್ಲಾ ಪಾಲಕ ಶ್ರೀನಿವಾಸ್ ಮೂರ್ತಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಸಹಾಯಕ ಯೋಜನಾ ಸಮನ್ವಯಾಧಿ ಸುರೇಶ್ ಜೆ.ಸಿ, ರಾಮನಗರ ರೋಟರಿ ಸಿಲ್ಕ್ ಸಿಟಿ ಸಂಸ್ಥೆ ಅಧ್ಯಕ್ಷ ಇಶಾಂತ್, ವಲಯ ಗವರ್ನರ್ ಗೋಪಾಲ್, ಶ್ರೀನಿವಾಸ್ ವೆಂಕಟಾಚಲಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.