ADVERTISEMENT

ದಲಿತ ಮುಖಂಡನ ಮೇಲೆ ಶಾಸಕ ಇಕ್ಬಾಲ್ ಹುಸೇನ್ ಬೆಂಬಲಿಗರಿಂದ ಹಲ್ಲೆ ಆರೋಪ: ದೂರು

​ಪ್ರಜಾವಾಣಿ ವಾರ್ತೆ
Published 2 ಮೇ 2025, 17:15 IST
Last Updated 2 ಮೇ 2025, 17:15 IST
<div class="paragraphs"><p>ಹಲ್ಲೆಯಿಂದಾಗಿ ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಮುಖಂಡ ಕೊತ್ತಿಪುರ ಗೋವಿಂದರಾಜು ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಹಾಗೂ ಇತರರು ಭೇಟಿ ಮಾಡಿದರು.</p></div>

ಹಲ್ಲೆಯಿಂದಾಗಿ ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಿತ ಮುಖಂಡ ಕೊತ್ತಿಪುರ ಗೋವಿಂದರಾಜು ಅವರನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಹಾಗೂ ಇತರರು ಭೇಟಿ ಮಾಡಿದರು.

   

ರಾಮನಗರ: ‘ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ವಿರುದ್ಧ ಮಾತನಾಡುತ್ತೀಯಾ?’ ಎಂದು ಅವರ ಬೆಂಬಲಿಗರ ಗುಂಪೊಂದು ದಲಿತ ಮುಖಂಡ ಕೊತ್ತಿಪುರ ಗೋವಿಂದರಾಜು ಮೇಲೆ ಶುಕ್ರವಾರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಗೋವಿಂದರಾಜು ರಾಮಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತನ್ನ ಮೇಲೆ ನಡೆದಿರುವ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಗೋವಿಂದರಾಜು ಅವರು ಶಾಸಕ ಹುಸೇನ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಅನಿಲ್‌ ಜೋಗಿಂದರ್, ಮದರ್‌ಸಾಬರದೊಡ್ಡಿಯ ರವಿಕುಮಾರ್ ಹಾಗೂ ಇತರ 6 ಮಂದಿ ವಿರುದ್ಧ ಐಜೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಆದರೆ, ಪ್ರಕರಣ ಇನ್ನೂ ದಾಖಲಾಗಿಲ್ಲ.

ADVERTISEMENT

ದೂರಿನಲ್ಲೇನಿದೆ?: ನಗರದ ಬಿ.ಎಂ. ರಸ್ತೆಯಲ್ಲಿರುವ ರಾಮಕೃಷ್ಣ ಆಸ್ಪತ್ರೆ ಬಳಿಯ ಬ್ಯಾಂಕ್‌ಗೆ ಮಧ್ಯಾಹ್ನ ಹೋಗಿ ಬರುವಾಗ ಏಕಾಏಕಿ 6 ಜನ ನನ್ನನ್ನು ಸುತ್ತುವರಿದರು. ‘ಶಾಸಕರ ವಿರುದ್ಧ ಮಾತಾಡ್ತಿಯಾ? ಅವರ ವಿರುದ್ಧ ಪತ್ರಿಕಾ ಹೇಳಿಕೆ ಕೊಡ್ತಿಯಾ?’ ಎಂದು ಜಾತಿ ನಿಂದನೆ ಮಾಡಿ, ಧಮಕಿ ಹಾಕಿ ಹಲ್ಲೆ ನಡೆಸಿದರು’ ಎಂದು ಗೋವಿಂದರಾಜು ದೂರಿನಲ್ಲಿ ಆರೋಪಿಸಿದ್ದಾರೆ.

ಶಾಸಕರ ನೇತೃತ್ವದಲ್ಲಿ ನಗರದಲ್ಲಿ ನಡೆದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೆ ವಿರುದ್ಧವಾಗಿ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ನಾನು ಭಾಗವಹಿಸಿದ್ದೆ. ಇತ್ತೀಚಿನ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿನ ಅವ್ಯವಸ್ಥೆಯಿಂದ ಮಹಿಳೆ ಕೈ ಮುರಿದುಕೊಂಡಿದ್ದರ ಕುರಿತು ಸುದ್ದಿಗೋಷ್ಠಿ ನಡೆಸಿದ್ದೆ. ಕ್ಷೇತ್ರದಲ್ಲಿನ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ಜಾರಿ ನಿರ್ದೇಶನಾಲಯ ಹಾಗೂ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಹೇಳಿದ್ದೆ. ಇದರಿಂದಾಗಿ, ನನ್ನ ಮೇಲೆ ದ್ವೇಷ ಸಾಧಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ಗೋವಿಂದರಾಜು ಮೇಲೆ ಹಲ್ಲೆ ನಡೆದಿರುವ ವಿಷಯ ಗೊತ್ತಾಗುತ್ತಿದ್ದಂತೆ, ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಎ. ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಸಬ್ಬಕರೆ ಶಿವಲಿಂಗಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಹಾಗೂ ಇತರ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ನಿಮ್ಮ ಬೆಂಬಲಕ್ಕೆ ಇದ್ದೇವೆ. ನ್ಯಾಯ ಸಿಗುವವರೆಗೆ ಹೋರಾಡೋಣ ಎಂದು ಧೈರ್ಯ ತುಂಬಿದರು. ಅದಕ್ಕೂ ಮುಂಚೆ ದಲಿತ ಸಂಘಟನೆಗಳ ಒಕ್ಕೂಟದ ಶಿವಕುಮಾರಸ್ವಾಮಿ ಸೇರಿದಂತೆ ಇತರರು ಸಹ ಭೇಟಿ ಮಾಡಿದ್ದರು.

ಪೂರ್ವ ತನಿಖೆ ಬಳಿಕ ಎಫ್‌ಐಆರ್

ಘಟನೆ ಕುರಿತು ಗೋವಿಂದರಾಜು ಅವರು ಶಾಸಕರು ಸೇರಿದಂತೆ ಇತರರ ವಿರುದ್ಧ ದೂರು ಕೊಟ್ಟಿರುವುದರಿಂದ ಪೊಲೀಸರು ತಕ್ಷಣ ಎಫ್‌ಐಆರ್‌ ದಾಖಲಿಸಿಲ್ಲ. ದೂರುದಾರರ ಆರೋಪದಲ್ಲಿ ಸತ್ಯಾಂಶವಿದೆಯೇ ಎಂಬುದರ ಕುರಿತು ಮೊದಲು ಪೂರ್ವ ತನಿಖೆ ನಡೆಸಲಾಗುವುದು. ಮೇಲ್ನೋಟಕ್ಕೆ ಆರೋಪ ನಿಜವಾಗಿದ್ದರೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.