ADVERTISEMENT

ಹಾರೋಬೆಲೆ ಜಲಾಶಯದ ಹಿನ್ನೀರು ದಾಟುವಾಗ ಅವಘಡ: ಕಳೆಯಲ್ಲಿ ಸಿಲುಕಿ ಎರಡು ಆನೆ ಸಾವು

ಸಾತನೂರು ವಲಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 23:56 IST
Last Updated 9 ನವೆಂಬರ್ 2025, 23:56 IST
ಕನಕಪುರ ತಾಲ್ಲೂಕಿನ ಸಾತನೂರು ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುವಾಗ ಮುಳುಗಿ ಮೃತಪಟ್ಟ ಕಾಡಾನೆ
ಕನಕಪುರ ತಾಲ್ಲೂಕಿನ ಸಾತನೂರು ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುವಾಗ ಮುಳುಗಿ ಮೃತಪಟ್ಟ ಕಾಡಾನೆ   

ಕನಕಪುರ (ಬೆಂಗಳೂರು ದಕ್ಷಿಣ): ತಾಲ್ಲೂಕಿನ ಸಾತನೂರು ಅರಣ್ಯ ವಲಯದ ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುತ್ತಿದ್ದ ಎರಡು ಕಾಡಾನೆಗಳು ನೀರಿನಲ್ಲಿ ಬೆಳೆದಿದ್ದ ಕಳೆಗೆ ಸಿಲುಕಿದ್ದು, ಮುಳುಗಿ ಮೃತಪಟ್ಟಿವೆ.

ಹಿನ್ನೀರು ದಾಟಿ ಬನ್ನೇರುಘಟ್ಟ ಅರಣ್ಯದತ್ತ ಹೋಗುತ್ತಿದ್ದ ಆನೆಗಳ ಕಾಲುಗಳಿಗೆ ಕಳೆ(ಸತ್ತೆ) ಸುತ್ತಿಕೊಂಡಿದೆ. ಇದರಿಂದ ಚಲಿಸಲಾಗದೆ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿವೆ. ಮೃತಪಟ್ಟ ಎರಡೂ ಗಂಡಾನೆಗಳು. ಒಂದಕ್ಕೆ 20 ವರ್ಷ, ಮತ್ತೊಂದಕ್ಕೆ 15 ವರ್ಷ ವಯಸ್ಸಾಗಿದೆ. 

ತಿಂಗಳ ಹಿಂದೆಯಷ್ಟೇ ಚನ್ನಪಟ್ಟಣ ತಾಲ್ಲೂಕಿನಲ್ಲಿ ವಿದ್ಯುತ್ ಪ್ರವಹಿಸಿ ಕಾಡಾನೆಯೊಂದು ಜೀವ ಕಳೆದುಕೊಂಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಅವಘಡ ಸಂಭವಿಸಿದೆ.

ADVERTISEMENT

ಏಳು ಆನೆಗಳಿದ್ದವು: ‘ಬನ್ನೇರುಘಟ್ಟ ಅರಣ್ಯದಿಂದ ತೆಂಗಿನಕಲ್ಲು ಅರಣ್ಯಕ್ಕೆ ಏಳು ಆನೆಗಳ ಹಿಂಡು ಬಂದಿತ್ತು. ಮತ್ತೆ ಬನ್ನೇರುಘಟ್ಟಕ್ಕೆ ಓಡಿಸಲು ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆಗಳ ಹಿಂಡು ಹಿನ್ನೀರು ದಾಟಲು ಮುಂದಾಗಿತ್ತು. ಐದು ಆನೆಗಳು ದಾಟಿದ್ದವು. ಎರಡು ನೀರಿನಲ್ಲಿ ಸಿಲುಕಿದ್ದವು. ಅವುಗಳಿಗಾಗಿ ಹುಡುಕಾಟ ನಡೆದಿತ್ತು’ ಎಂದು ಹೇಳಿದರು.

ಹಿನ್ನೀರಿನಲ್ಲಿ ಆನೆಗಳ ಕಳೇಬರ ಗಮನಿಸಿದ ಸ್ಥಳೀಯರು ಗಮನಕ್ಕೆ ತಂದಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿಸಿದರು. 

ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿರುವ ಕಳೆ ಸಂಪೂರ್ಣವಾಗಿ ಹಿನ್ನೀರನ್ನು ಆವರಿಸಿಕೊಂಡಿದೆ. ನೆಲದಿಂದ ನೀರಿನ ಮೇಲ್ಮೈವರೆಗೆ ಜಾಲದಂತೆ ಒತ್ತೊತ್ತಾಗಿ ಹಬ್ಬಿರುವ ಕಳೆ ಆನೆಗಳ ಕಾಲಿಗೆ ಸುತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸ್ಥಳಕ್ಕೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಶಿವಶಂಕರ್,  ಡಿಸಿಎಫ್‌ ರಾಮಕೃಷ್ಣಪ್ಪ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.