ADVERTISEMENT

ಸಹಾಯವಾಣಿ ಮುಖೇನ ಸಹಾಯಹಸ್ತ

ಈವರೆಗೆ 419 ಕರೆ ಸ್ವೀಕಾರ: ಅಧಿಕಾರಿಗಳಿಂದ ತುರ್ತು ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:28 IST
Last Updated 19 ಏಪ್ರಿಲ್ 2020, 15:28 IST
ಸಹಾಯವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ
ಸಹಾಯವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ   

ರಾಮನಗರ: ಸರ್‌ ನಮ್ಮನೆಯಲ್ಲಿ ರೇಷನ್‌ ಖಾಲಿ ಆಗಿದೆ. ದಯವಿಟ್ಟು ಕಳುಹಿಸಿ ಕೊಡುತ್ತೀರಾ? ನಾಳೆ ಅರ್ಜೆಂಟಾಗಿ ಬೆಂಗಳೂರಿಗೆ ಹೋಗಬೇಕು. ಪಾಸ್‌ ಕೊಡಿಸ್ತೀರಾ ಪ್ಲೀಸ್‌? ನಮ್ಮಜ್ಜಿನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಪೊಲೀಸರಿಗೆ ಹೇಳಿ ಸರ್‌!

ಇದು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಕೋವಿಡ್‌-19 ಸಂಬಂಧ ಸ್ಥಾಪಿಸಿರುವ ಸಹಾಯವಾಣಿಗೆ ಬರುವ ಕರೆಗಳ ಕೆಲವು ಝಲಕ್‌. ಲಾಕ್‌ಡೌನ್‌ ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಜನರ ತುರ್ತು ಸಹಾಯಕ್ಕೆಂದು ಕಳೆದ ಮಾರ್ಚ್‌ 27ರಿಂದ ಈ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ತಾಸೂ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಇದಕ್ಕೆಂದೇ ನಾಲ್ಕು ಪ್ರತ್ಯೇಕ ಲೈನ್‌ಗಳ ವ್ಯವಸ್ಥೆ ಇದೆ. ನಾಲ್ವರು ಸಿಬ್ಬಂದಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ಸಹಾಯವಾಣಿಗೆ ನಿತ್ಯ ಸರಾಸರಿ 25-35ಕರೆಗಳು ಬರುತ್ತಿವೆ. ಆದರೆ ಇವುಗಳಲ್ಲಿ ನಿಜವಾಗಿ ಸಹಾಯ ಬೇಡಿ ಬರುವ ಕರೆಗಳಿಗಿಂತ ಬೇಡದ ಕರೆಗಳೇ ಹೆಚ್ಚಾಗಿವೆ. ರೇಷನ್ ಕೋರಿ ಬರುತ್ತಿರುವ ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಕೆಲವರು ಪಡಿತರ ಮನೆ ಬಾಗಿಲಿಗೇ ತಲುಪಿಸಲು ಮನವಿ ಮಾಡಿದ್ದಾರೆ. ಮನೆಗೆ ತರಕಾರಿ ಬೇಕು ಕಳುಹಿಸಿ ಕೊಡುತ್ತೀರಾ ಎಂದು ಸಿಬ್ಬಂದಿ ಪ್ರಶ್ನಿಸಿದವರೂ ಇದ್ದಾರೆ.

ADVERTISEMENT

ಪ್ರಯಾಣಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ದಯವಿಟ್ಟು ನಮಗೊಂದು ಪಾಸ್ ಕೊಡಿಸಿ ಎಂದು ದುಂಬಾಲು ಬಿದ್ದ ಅನೇಕರು ಇದ್ದಾರೆ. ಕೆಲವರು ತಮ್ಮನೆ ಅಕ್ಕಪಕ್ಕದಲ್ಲಿ ಇರುವ ವಲಸೆ ಕಾರ್ಮಿಕರ ಮಾಹಿತಿ ನೀಡಿದ್ದಾರೆ. ಕೋವಿ‌ಡ್‌ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಗಳ ವಿವರಗಳನ್ನೂ ನೀಡಿದ್ದಾರೆ. ಅನೇಕ ಮಂದಿ ಆಹಾರಕ್ಕೆ ಬೇಡಿಕೆ ಇಟ್ಟಿದ್ದು, ಅಂತಹವರಿಗೆ ಅಗತ್ಯ ಸಾಮಗ್ರಿ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ.

ಒಮ್ಮೆ ದೂರು ಬಂದ ಬಳಿಕ ಸಹಾಯವಾಣಿ ಸಿಬ್ಬಂದಿ ಅದನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಅವರು ದೂರಿಗೆ ಸ್ಪಂದಿಸಿ ಅದನ್ನು ಇತ್ಯರ್ಥಗೊಳಿಸಿ ಅದನ್ನು ಮತ್ತೆ ಜಿ.ಪಂ.ಗೆ ಮಾಹಿತಿ ನೀಡುತ್ತಾರೆ. ಹೀಗೆ ಪ್ರತಿ ದಿನ ಎಷ್ಟು ದೂರು ಬಂದಿತು. ಅದಕ್ಕೆ ಕೈಗೊಂಡ ಕ್ರಮಗಳೇನು ಎಂಬುದನ್ನು ಆಯಾ ದಿನವೇ ಸಿಬ್ಬಂದಿ ಜಿ.ಪಂ. ಸಿಇಒ ಅವರ ಗಮನಕ್ಕೆ ತರುತ್ತಿದ್ದಾರೆ. ಯಾವುದೇ ವಿಳಂಬ ಮಾಡದಂತೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

"ಸಹಾಯವಾಣಿಗೆ ಬಂದ ಕರೆಗಳಿಗೆ ಶೇ 100ರಷ್ಟು ಪರಿಹಾರ ಒದಗಿಸಲಾಗಿದೆ. ಹುಸಿ ಕರೆಗಳನ್ನು ಹೊರತುಪಡಿಸಿ ಉಳಿದೆಲ್ಲ ದೂರು-ದುಮ್ಮಾನಗಳಿಗೆ ನಮ್ಮ ಸಿಬ್ಬಂದಿ ಸಕಾಲಕ್ಕೆ ಸ್ಪಂದಿಸುತ್ತಿದ್ದಾರೆ. ಸದ್ಯ ಯಾವ ದೂರು ಇತ್ಯರ್ಥವಾಗದೇ ಉಳಿದಿಲ್ಲ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಕ್ರಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.