
ಸ್ಮಶಾನದಲ್ಲಿ ಸ್ವಚ್ಛತೆ ಇಲ್ಲದಿರುವುದು
ಸ್ಮಶಾನಕ್ಕೆ ಹೋಗುವ ರಸ್ತೆ ದುಃಸ್ಥಿತಿಕನಕಪುರ: ಮನುಷ್ಯ ಜಂಜಾಟದಿಂದ ಶಾಶ್ವತವಾದ ನೆಮ್ಮದಿ ಪಡೆಯುವುದು ಸತ್ತು ಮಣ್ಣು ಸೇರಿದಾಗ ಮಾತ್ರ. ಸ್ಮಶಾನ ಮನುಷ್ಯನ ನಿಜವಾದ ಮುಕ್ತಿಧಾಮ ಎಂಬ ನಂಬಿಕೆ ಇದೆ. ಆ ಜಾಗವನ್ನು ಶುದ್ಧ ಮತ್ತು ಶ್ರೇಷ್ಠತೆಯಿಂದ ಇಟ್ಟುಕೊಳ್ಳಬೇಕು. ಜನರು ನೆಮ್ಮದಿಯಿಂದ ಅಂತ್ಯಕ್ರಿಯೆ ನೆರವೇರಿಸಬೇಕು. ಅಂತಹ ಪೂರಕವಾದ ವಾತಾವರಣ ಇರಬೇಕು.
ಸಣ್ಣಪುಟ್ಟ ಗ್ರಾಮಗಳಲ್ಲಿಯೂ ರುದ್ರಭೂಮಿ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಆದರೆ, ಕನಕಪುರದ ದೇಗುಲಮಠ ರುದ್ರಭೂಮಿ ಗಿಡಗಂಟಿಗಳಿಂದ ಕೂಡಿದೆ. ಅಭಿವೃದ್ಧಿ ಕಾಣದೆ ಪಾಳು ಬಿದ್ದಿದೆ. ಜನರು ಅಂತ್ಯಸಂಸ್ಕಾರ ಮಾಡಲು ಪರದಾಡುವಂತಾಗಿದೆ. ಕನಕಪುರ ನಗರಸಭೆ ಉತ್ತರ ಭಾಗದ 15ಕ್ಕೂ ಹೆಚ್ಚು ವಾರ್ಡ್‌ಗಳ ಎಲ್ಲ ಜಾತಿ ಹಾಗೂ ಬಡವರು, ಶ್ರೀಮಂತರು ಎಲ್ಲರೂ ದೇಗುಲ ಮಠದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಆದರೆ, ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ಮೂಲ ಸೌಕರ್ಯ ಇಲ್ಲದೆ ಜನರು ಕಷ್ಟಪಡುತ್ತಿದ್ದಾರೆ.
ಮಳೆ ಬಂದರೆ ನಿಲ್ಲಲು ಜಾಗವಿಲ್ಲ. ಕುಡಿಯಲು ನೀರು ಇಲ್ಲ. ವಿಶ್ರಾಂತಿಗೆ ಜಾಗ ಇಲ್ಲ. ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಯಾಗದೆ ವಿಪರೀತ ದೂಳಿನಿಂದ ಕೂಡಿದೆ. ಸ್ಮಶಾನ ಅಭಿವೃದ್ಧಿಪಡಿಸುವಂತೆ ನಾಗರಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕುರುಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಕನಕಪುರ ನಗರಸಭೆ ದಕ್ಷಿಣ ಭಾಗದ 15 ವಾರ್ಡ್‌ಗಳ ಜನರು ಶವ ಸಂಸ್ಕಾರ ನೆರವೇರಿಸುತ್ತಾರೆ. ನಗರಸಭೆ ಈ ಸ್ಮಶಾನವನ್ನು ಅಭಿವೃದ್ಧಿಪಡಿಸಿದೆ.
ಶವ ಸುಡಲು ವ್ಯವಸ್ಥೆ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸ್ಮಶಾನ ಅಭಿವೃದ್ಧಿ ಆಗದಿದ್ದರೂ ಜನರು ಯಾವುದೇ ತೊಂದರೆ ಇಲ್ಲದೆ ಅಂತ್ಯಕ್ರಿಯೆ ನಡೆಸಬಹುದಾಗಿದೆ.
ಶವ ಹೂಳಲು, ಸುಡಲು ವ್ಯವಸ್ಥೆ ಕಲ್ಪಿಸದಿರುವುದರ ವಿರುದ್ಧ ನಾಗರಿಕರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ದೇಗುಲ ಮಠದ ರುದ್ರಭೂಮಿಯನ್ನು ಇಂದಿನ ಅವಶ್ಯಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಬೇಕು. ಜನರಿಗೆ ಅನುಕೂಲವಾಗುವಂತೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.
ದೇಗುಲಮಠದ ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ಕಳೆದ ಐದು ವರ್ಷಗಳಿಂದ ನಗರಸಭೆ ಸದಸ್ಯನಾಗಿ ಒತ್ತಾಯ ಮಾಡುತ್ತಾ ಬಂದಿದ್ದೇನೆ. ನಗರಸಭೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋದರೆ ಅಲ್ಲಿ ಕುಡಿಯುವ ನೀರಾಗಲಿ, ಕುಳಿತುಕೊಳ್ಳಲು ನೆರಳಾಗಲಿ ಇಲ್ಲ. ಗಿಡಗಂಟಿ ಎತ್ತರವಾಗಿ ಬೆಳೆದು ಆವರಿಸಿಕೊಂಡಿದೆ. ನಗರಸಭೆಯು ವೈಜ್ಞಾನಿಕವಾಗಿ ಸ್ಮಶಾನವನ್ನು ಹೈಟೆಕ್ ರೂಪದಲ್ಲಿ ಅಭಿವೃದ್ಧಿಪಡಿಸಬೇಕು.–ಸ್ಟುಡಿಯೊ ಚಂದ್ರು, ನಗರಸಭೆ ಸದಸ್ಯ
ಸಣ್ಣಪುಟ್ಟ ಹಳ್ಳಿಗಳಲ್ಲೂ ಸ್ಮಶಾನ ಅಭಿವೃದ್ಧಿಪಡಿಸಿ ಶವ ಸುಡಲು, ಹೂಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಹೋದವರು ಅಂತ್ಯಕ್ರಿಯೆ ಮುಗಿಸಿ ವಿಶ್ರಾಂತಿ ಪಡೆದು ಬರುವ ವ್ಯವಸ್ಥೆಯನ್ನು ಪಂಚಾಯಿತಿ ಮಟ್ಟದಲ್ಲಿ ಮಾಡಲಾಗಿದೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರದಲ್ಲಿ ವ್ಯವಸ್ಥಿತ ಸ್ಮಶಾನ ಇಲ್ಲದಿರುವುದು ಬೇಸರದ ಸಂಗತಿ.–ವೆಂಕಟೇಶ್, ನಾಗರಿಕ, ಕನಕಪುರ
ದೇಗುಲ ಮಠದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ನರಕ ಯಾತನೆ. ಒಳಗೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲ. ದೂಳಿನಿಂದ ಕೂಡಿದೆ.ಸ್ಮಶಾನ ಗಿಡಗಂಟಿಗಳಿಂದ ಆವೃತವಾಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಿಸಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲಿರುವ ರುದ್ರಭೂಮಿ ಅಭಿವೃದ್ಧಿಪಡಿಸುವಂತೆ ನಗರಸಭೆಗೆ ಮನವಿ ಸಲ್ಲಿಸಿದರೂ ಗಮನಹರಿಸುತ್ತಿಲ್ಲ. ಸ್ಮಶಾನಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಇದೆ.–ಕನ್ನಡ ಭಾಸ್ಕರ್, ಸಾಮಾಜಿಕ ಹೋರಾಟಗಾರ, ಕನಕಪುರ
ಸ್ಮಶಾನದಲ್ಲಿ ಗಿಡಗಂಟಿ ಬೆಳೆದುಕೊಂಡಿರುವುದು
ಸ್ಮಶಾನಕ್ಕೆ ಹೋಗುವ ರಸ್ತೆ ದುಃಸ್ಥಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.