ADVERTISEMENT

ಕೆಂಗಲ್ ಹನುಮಂತಯ್ಯ ಸಮಾಧಿ, ವಿಶ್ರಾಂತಿ ಗೃಹ ನಿರ್ಲಕ್ಷ್ಯ

ಜಿಲ್ಲೆಯ ಮಾಜಿ ಮುಖ್ಯಮಂತ್ರಿ, ವಿಧಾನಸೌಧ ನಿರ್ಮಾತೃ ಸ್ಮಾರಕ ಸ್ಥಳಗಳ ಕಡೆಗಣನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 12:53 IST
Last Updated 14 ಫೆಬ್ರುವರಿ 2026, 12:53 IST
ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಸ್ಥಳ
ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಸ್ಥಳ   

ಚನ್ನಪಟ್ಟಣ: ರಾಜ್ಯದ ಎರಡನೇ ಮುಖ್ಯಮಂತ್ರಿ ಹಾಗೂ ಭವ್ಯವಾದ ವಿಧಾನಸೌಧವನ್ನು ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಸ್ಥಳ ಹಾಗೂ ಅವರು ಕಟ್ಟಿಸಿದ ವಿಶ್ರಾಂತಿಗೃಹ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಂತಿವೆ. ಇದು ಕನ್ನಡಪರ, ರೈತಪರ ಹೋರಾಟಗಾರರು ಹಾಗೂ ಹನುಮಂತಯ್ಯ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಹನುಮಂತಯ್ಯ ಅವರ ಸಮಾಧಿ ಸ್ಥಳ, ತಾಲ್ಲೂಕಿನ ಚಂದ್ರಗಿರಿದೊಡ್ಡಿ ಬಳಿಯ ಗುಡ್ಡದ ಮೇಲೆ ಹನುಮಂತಯ್ಯ ಅವರು ಕಟ್ಟಿಸಿದ ವಿಶ್ರಾಂತಿ ಗೃಹವನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕಡೆಗಣಿಸಿದೆ ಎಂಬು ಟೀಕೆ ವ್ಯಕ್ತವಾಗಿದೆ.

ಫೆ. 14ರಂದು ಕೆಂಗಲ್ ಹನುಮಂತಯ್ಯ ಅವರ ಜನ್ಮದಿನ. ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆ ಹನುಮಂತಯ್ಯ ಅವರನ್ನು ಸ್ಮರಿಸುವ ಕೆಲಸವಾಗುತ್ತಿದ್ದರೂ, ಅವರ ಸಮಾಧಿ ಸ್ಥಳ ಹಾಗೂ ಅವರ ವಿಶ್ರಾಂತಿ ಗೃಹ ಕಡೆಗಣನೆಗೆ ಒಳಗಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡೆಯ ಮೇಲೆ ಪಾಳು ಬಿದ್ದಿರುವ ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿದ್ದ ವಿಶ್ರಾಂತಿ ಗೃಹ

ಪ್ರತಿ ವರ್ಷ ಅವರ ಜನ್ಮದಿನ ಮತ್ತು ಪುಣ್ಯತಿಥಿ ವೇಳೆ ಅವರ ಕುಟುಂಬಸ್ಥರು ಬಂದು ಪೂಜೆ ಸಲ್ಲಿಸಿ ಹೋಗುವುದು, ದೇವಸ್ಥಾನ ಅಭಿವೃದ್ಧಿ ಸಮಿತಿ ಸಮಾಧಿ ಸ್ಥಳವನ್ನು ಸಿಂಗರಿಸಿ ಪೂಜೆ ಮಾಡುವುದು ಬಿಟ್ಟರೆ, ಸಮಾಧಿ ಸ್ಥಳವನ್ನು ಸ್ಮಾರಕವಾಗಿಸುವ ಯಾವುದೇ ಕಾರ್ಯಗಳು ನಡೆದಿಲ್ಲ ಎಂಬುದು ಕೆಂಗಲ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ಜನಿಸಿದ ಹನುಮಂತಯ್ಯ ಅವರು, ತಮ್ಮ ಮನೆದೇವರು ಕೆಂಗಲ್ ಆಂಜನೇಯಸ್ವಾಮಿ ಅವರ ಪರಮಭಕ್ತರಾಗಿ ಕೆಂಗಲ್ ಹನುಮಂತಯ್ಯ ಎಂದೇ ಪ್ರಸಿದ್ಧಿ ಪಡೆದವರು.

1908 ಫೆ. 14ರಲ್ಲಿ ಜನಿಸಿದ ಹನುಮಂತಯ್ಯ ಅವರು 1980 ಡಿ. 1ರಂದು ಕೊನೆಯುಸಿರೆಳೆದರು. ಅವರ ಮೃತದೇಹವನ್ನು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾಧಿ ಮಾಡಿ, ಅಲ್ಲೇ ಕಿರು ಉದ್ಯಾನ ಸಹ ನಿರ್ಮಿಸಲಾಗಿದೆ.

ಹಾಗೆಯೆ ಚಂದ್ರಗಿರಿದೊಡ್ಡಿಯಲ್ಲಿ ಹನುಮಂತಯ್ಯ ಅವರು ನಿರ್ಮಿಸಿರುವ ವಿಶ್ರಾಂತಿಗೃಹ ಇದೆ. 1975ರಲ್ಲಿ ಹನುಮಂತ್ಯಯ ಅವರು ಇದನ್ನು ನಿರ್ಮಿಸಿದ್ದರು. ಅವರು ಕೆಂಗಲ್ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಈ  ಗೃಹದಲ್ಲಿ ತಂಗುತ್ತಿದ್ದರು. ಆದರೆ ಈಗ, ವಿಶ್ರಾಂತಿ ಗೃಹ ಪಾಳು ಬಿದ್ದಿದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿದೆ. ಜೊತೆಗೆ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕಿಟಕಿ, ಬಾಗಿಲುಗಳು ನಾಪತ್ತೆಯಾಗಿವೆ.

ಹನುಮಂತಯ್ಯ ಅವರನ್ನು ನೆನಪಿಸಿಕೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಅವರಿಗೆ ಸಲ್ಲಬೇಕಾದ ಗೌರವ ನೀಡದಿರುವುದು ವಿಪರ್ಯಾಸ. ಈ ಸ್ಥಳಗಳನ್ನು ಸ್ಮಾರಕ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿ, ಹನುಮಂತಯ್ಯ ಅವರು ಮಾಡಿರುವ ಕೆಲಸ ಕಾರ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂಬುದು ಕೆಂಗಲ್ ಅಭಿಮಾನಿಗಳ ಒತ್ತಾಯವಾಗಿದೆ.

ಸ್ಮಾರಕ ನಿರ್ಮಾಣಕ್ಕೆ ಆಗ್ರಹ

ಜಿಲ್ಲಾಡಳಿತ ಹನುಮಂತ್ಯನವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇಂತಹ ಮಹನೀಯರ ಸಮಾಧಿ ಸ್ಥಳ ಹಾಗೂ ವಿಶ್ರಾಂತಿಗೃಹವನ್ನು ಸ್ಮಾರಕವನ್ನಾಗಿ ಮಾಡಲು ಮುಂದಾಗದಿರುವುದು ನಿಜಕ್ಕೂ ನಾಚಿಕೆಗೇಡು.

ಜಿಲ್ಲೆಯ ಹೆಮ್ಮೆಯ ರಾಜಕಾರಣಿಯಾದ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಸ್ಥಳವನ್ನು ಸ್ಮಾರಕವಾಗಿಸುವುದರ ಜೊತೆಗೆ ಅವಸಾನದ ಅಂಚಿಗೆ ತಲುಪಿರುವ ವಿಶ್ರಾಂತಿ ಗೃಹವನ್ನು ದುರಸ್ತಿಗೊಳಿಸಬೇಕು. 

ತಿಂಗಳೊಳಗೆ ಈ ಕುರಿತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಮಾರಕಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಜಯ ಕರ್ನಾಟಕ ಜನಪರ ಸಂಘನೆಯ ಕುಮಾರಸ್ವಾಮಿ ಮತ್ತು ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ ಎಚ್ಚರಿಕೆ ನೀಡಿದರು.

ಕೆಂಗಲ್ ಹನುಮಂತಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.