ADVERTISEMENT

ರಾಜಕಾರಣ ಆಪರೇಷನ್ ಮಾಡಿದ ಹಾಗಲ್ಲ: ಮಂಜುನಾಥ್‌ ಸ್ಪರ್ಧೆ ಬಗ್ಗೆ ಬಾಲಕೃಷ್ಣ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 4:39 IST
Last Updated 1 ಮಾರ್ಚ್ 2024, 4:39 IST
ಎಚ್‌.ಸಿ. ಬಾಲಕೃಷ್ಣ, ಶಾಸಕ
ಎಚ್‌.ಸಿ. ಬಾಲಕೃಷ್ಣ, ಶಾಸಕ   

ಮಾಗಡಿ (ರಾಮನಗರ): ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿರುವ ಜೆಡಿಎಸ್‌ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಎಚ್‌.ಡಿ. ದೇವೇಗೌಡ ತಮ್ಮ ಮನೆ ಅಳಿಯನನ್ನು ಹರಕೆ ಕುರಿ ಮಾಡಲು ಹೊರಟಿದ್ದಾರೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.

ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಈಗಾಗಲೇ ದೇವೇಗೌಡರು ಒಮ್ಮೆ ಮತ್ತು ಕುಮಾರಸ್ವಾಮಿ ಅವರು ಎರಡು ಸಲ ಗೆದ್ದಿದ್ದರೂ, ಮಂಜುನಾಥ್ ಅವರನ್ನು ತಮ್ಮ ಪಕ್ಷದಿಂದಲೇ ನಿಲ್ಲಿಸಲು ಅವರಿಗೆ ಧೈರ್ಯವಿಲ್ಲವಾಗಿದೆ. ಜೆಡಿಎಸ್‌ ಎಷ್ಟೊಂದು ದುರ್ಬಲವಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಆಪರೇಷನ್ ಮಾಡಿದ ಹಾಗಲ್ಲ:

‘ವೈದ್ಯರಾದ ಮಂಜುನಾಥ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ರಾಜಕಾರಣ ಆಪರೇಷನ್ ಮಾಡಿದ ಹಾಗಲ್ಲ. ಯಾರು ಯಾವ ಕಸುಬು ಮಾಡಬೇಕೊ ಅದನ್ನು ಮಾಡಿದರೆ ಮಾತ್ರ ಗೌರವ. ಅದು ಬಿಟ್ಟು ಬೇರೆ ಕೆಲಸ ಮಾಡಲು ಬಂದರೆ ಯಶಸ್ಸು ಸಿಗುವುದಿಲ್ಲ’ ಎಂದು ಹೇಳಿದರು.

‘ನಮಗೆ ಬಲಿಷ್ಠ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ಇದ್ದಾರೆ. ಅವರನ್ನು ಎದುರಿಸಲಾಗದೆ ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಓಡಿ ಹೋಗಲು ಸಿದ್ಧತೆ ನಡೆಸಿದ್ದಾರೆ. ಸಿ.ಪಿ‌. ಯೋಗೇಶ್ವರ್ ಕೂಡ ಸ್ಪರ್ಧಿಸಲು ಹೆದರುತ್ತಿದ್ದಾರೆ. ಅವರು ಇವರನ್ನು ಮತ್ತು ಇವರು ಅವರನ್ನು ಮುಂದಕ್ಕೆ ತಳ್ಳುತ್ತಾ ಕೊನೆಗೆ ಮಂಜುನಾಥ್ ಅವರನ್ನು ಹಳ್ಳಕ್ಕೆ ನೂಕಲು ಮುಂದಾಗಿರುವ ಇವರಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

‘ಬಿಜೆಪಿಯನ್ನು ಬೀದಿಗೆ ತಂದ ಎಚ್‌ಡಿಕೆ’
‘ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಚುನಾವಣೆಯಲ್ಲಿ ಸಂಖ್ಯೆ ಆಧಾರದ ಮೇಲೆ ಕಾಂಗ್ರೆಸ್‌ ಮೂರು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತವಾಗಿತ್ತು. ಹೀಗಿದ್ದರೂ ಕೇವಲ 19 ಶಾಸಕರನ್ನು ಇಟ್ಟುಕೊಂಡಿರುವ ಕುಮಾರಸ್ವಾಮಿ ಅವರು ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಾರೆಂದರೆ ಏನೆನ್ನಬೇಕೊ? ಚುನಾವಣೆಯಲ್ಲಿ ಬಿಜೆಪಿಯವರು ಅಡ್ಡಮತ ಹಾಕಿದರೆಂದು ದೇಶದಲ್ಲಿ ಚರ್ಚೆಯಾಯಿತು. ಕುಮಾರಸ್ವಾಮಿ ಅವರಿಂದಾಗಿ ಬಿಜೆಪಿಯವರು ಮುಖಭಂಗ ಅನುಭವಿಸುವಂತಾಯಿತು’ ಎಂದು ಬಾಲಕೃಷ್ಣ ಹೇಳಿದರು. ‘ಎಚ್‌ಡಿಕೆ ಎಂದಿಗೂ ಮೈತ್ರಿಯಲ್ಲಿ ಇರುವುದಿಲ್ಲ. ಅವರ ಗರಡಿಯಲ್ಲಿ ಪಳಗಿರುವ ನಮಗಿದು ಚೆನ್ನಾಗಿ ಗೊತ್ತು. ಒಂದು ಕಡೆ ನೆಲೆ ನಿಲ್ಲದ ಅವರು ಅವರನ್ನು ಬಿಟ್ಟು ಇವರ‍್ಯಾರು ಎಂದು ಬೇರೆ ಬೇರೆ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.