ADVERTISEMENT

ಸಮಸ್ಯೆಗೆ ಸ್ಪಂದಿಸಿ: ಅಧಿಕಾರಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ತಾಕೀತು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 12:32 IST
Last Updated 6 ಜೂನ್ 2019, 12:32 IST
ಶಾಸಕರ ಭವನಕ್ಕೆ ಬಂದ ಅನಿತಾ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖಂಡರು ಸ್ವಾಗತಿಸಿದರು
ಶಾಸಕರ ಭವನಕ್ಕೆ ಬಂದ ಅನಿತಾ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖಂಡರು ಸ್ವಾಗತಿಸಿದರು   

ರಾಮನಗರ: ಇಲ್ಲಿನ ಶಾಸಕರ ಭವನದಲ್ಲಿ ಗುರುವಾರ ಶಾಸಕಿ ಅನಿತಾ ಕುಮಾರಸ್ವಾಮಿ ಸಾರ್ವಜನಿಕರ ಅಹವಾಲು ಆಲಿಸಿದರು. ಉತ್ಸಾಹದಿಂದ ಕೆಲಸ ಮಾಡದ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು.

ಅಧಿಕಾರಿಗಳ ವಿಳಂಬ ಧೋರಣೆ ಬಗ್ಗೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ದೂರುಗಳು ಕೇಳಿಬಂದವು. ‘ಸರ್ಕಾರಿ ಕೆಲಸದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಆಡಳಿತ ವ್ಯವಸ್ಥೆ ವಿರುದ್ಧ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಕೆಲಸ ಮಾಡಲು ಇಷ್ಟವಿಲ್ಲದವರು ಇಲ್ಲಿಂದ ತೆರಳಬೇಕು’ ಎಂದು ತಾಕೀತು ಮಾಡಿದರು.

ಜೆಡಿಎಸ್ ಮುಖಂಡ ಹನುಮಂತೇಗೌಡ ಮಾತನಾಡಿ ‘ಮಿನಿ ವಿಧಾನಸೌದದಲ್ಲಿರುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಅಲ್ಲಿನ ನೆಲಮಹಡಿಯಲ್ಲಿ ನೀರು ತುಂಬಿಕೊಂಡು ಜನರಿಗೆ ತೊಂದರೆ ಆಗುತ್ತಿದೆ. ಅಂಬೇಡ್ಕರ್ ಭವನದ ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಗುರುತಿಸಲಾದ ಜಾಗದಲ್ಲೂ ಅಂಗಡಿ ನಿರ್ಮಿಸಿ, ಬಾಡಿಗೆಗೆ ನೀಡಲಾಗಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಈ ಬಗ್ಗೆ ತಾ.ಪಂ. ಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ADVERTISEMENT

‘ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಉಲ್ಬಣಿಸಿದೆ. ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ವಿಫಲವಾಗಿದೆ. ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಸಾರ್ವಜನಿಕರು ದೂರಿದರು.

7 ಮತ್ತು 8ನೇ ವಾರ್ಡಿನಲ್ಲಿ ಕೊಳವೆ ಬಾವಿ ಕೊರೆಯಿಸುವಂತೆ ಸ್ಥಳೀಯರು ಮನವಿ ಮಾಡಿದರು. ಅಗತ್ಯ ಕ್ರಮ ಜರುಗಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸುವುದಾಗಿ ಶಾಸಕರು ತಿಳಿಸಿದರು.

ಮುಖಂಡರ ಗದ್ದಲವೇ ಹೆಚ್ಚು: ಸಾರ್ವಜನಿಕರ ಅಹವಾಲು ಸಭೆಯಲ್ಲಿ ಜೆಡಿಎಸ್ ಮುಖಂಡರ ಗದ್ದಲವೇ ಹೆಚ್ಚಾಗಿತ್ತು. ಶಾಸಕರ ಸುತ್ತ ಅವರೇ ತುಂಬಿಕೊಂಡ ಕಾರಣ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡಿದರು. ಮುಖಂಡರು ಬರೀ ತಮ್ಮ ಕಷ್ಟಗಳನ್ನೇ ಶಾಸಕರ ಮುಂದೆ ಇಡುತ್ತಿದ್ದರು.

ದೃಶ್ಯ ಮಾಧ್ಯಮಗಳ ವಿರುದ್ಧ ಕಿಡಿ
ಶಾಸಕಿ ಅನಿತಾ ದೃಶ್ಯ ಮಾಧ್ಯಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ನಿಮ್ಮ ಹತ್ತಿರ ಮಾತನಾಡುವುದು ಏನಿಲ್ಲ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಮಾಧ್ಯಮದವರು ತುಂಬಾ ಹಾಳಾಗಿದ್ದೀರಿ. ತಲೆಹರಟೆ ಪ್ರಶ್ನೆ ಕೇಳುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಇಷ್ಟು ದಿನ ನೀತಿಸಂಹಿತೆ ಇದ್ದ ಕಾರಣ ಬರಲಾಗಲಿಲ್ಲ. ಎಲ್ಲಿ ಏನು ಸಮಸ್ಯೆ ಇದೆ ಎಂಬುದು ಗೊತ್ತಿದೆ. ಎಲ್ಲವನ್ನೂ ಒಟ್ಟಿಗೆ ಬಗೆಹರಿಸಲು ಆಗದು. ಸುಮ್ಮನೆ ಟೀಕೆ ಮಾಡುವುದಲ್ಲ. ನಿಮ್ಮಲ್ಲೇ ಯಾರಾದರೂ ಗ್ರಾ.ಪಂ. ಚುನಾವಣೆಗೆ ನಿಂತು ಗೆದ್ದು ಕೆಲಸ ಮಾಡಿ ತೋರಿಸಿ’ ಎಂದು ಸವಾಲು ಹಾಕಿದರು.

‘ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಒಳ್ಳೆಯ ನಿರ್ಧಾರ. ರಾಮನಗರ ಅವರದ್ದೇ ಕ್ಷೇತ್ರ. ಇಲ್ಲಿಯೂ ವಾಸ್ತವ್ಯ ಮಾಡುವಂತೆ ಮನವಿ ಮಾಡುತ್ತೇವೆ’ ಎಂದರು.

ಹೃದಯ ಶಸ್ತ್ರಚಿಕಿತ್ಸೆಗೆ ನೆರವಿಗೆ ಕೋರಿಕೆ
ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ತೊಂದರೆಗಳನ್ನು ಶಾಸಕರ ಬಳಿ ಹೇಳಿಕೊಳ್ಳಲು ಕೆಲವರು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು.
ಬಾಲಗೇರಿಯ ಮಧುಸೂದನ ಎಂಬ ಹುಡುಗನಿಗೆ ಚಿಕ್ಕ ವಯಸ್ಸಿನಿಂದಲೂ ಹೃದಯ ಸಂಬಂಧಿ ಕಾಯಿಲೆ ಇದೆ. ಅದರ ಶಸ್ತ್ರಚಿಕಿತ್ಸೆಗೆ ₹80 ಸಾವಿರ ಅಗತ್ಯ ಇದ್ದು, ಹಣದ ನೆರವು ಕೇಳಲು ತನ್ನ ಪೋಷಕರ ಜೊತೆ ಬಂದಿದ್ದ. ಆದರೆ ಆತನ ಅಹವಾಲು ಆಲಿಸಲಿಲ್ಲ. ‘ಇನ್ನೊಮ್ಮೆ ದಾಖಲೆ ಸಮೇತ ಬನ್ನಿ ಎಂದು ಹೊರಗೆ ಕಳುಹಿಸಿದರು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

***
ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿವು ಇದೆ. ಎಲ್ಲಕ್ಕೂ ಒಮ್ಮೆಯೇ ಪರಿಹಾರ ನೀಡಲು ಆಗದು. ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು.
–ಅನಿತಾ ಕುಮಾರಸ್ವಾಮಿ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.