
ರಾಮನಗರ: ‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ₹5 ಸಾವಿರ ದಂಡ ವಿಧಿಸಲಾಗುವುದು. ನ. 10ರಿಂದ ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಸತತವಾಗಿ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಜನರು ಇದಕ್ಕೆ ಅವಕಾಶ ನೀಡದೆ ಮನೆ ಬಾಗಿಲಿಗೆ ಬರುವ ನಗರಸಭೆಯ ವಾಹನಗಳಿಗೇ ಕಸ ನೀಡಬೇಕು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.
‘ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕುವುದಕ್ಕಾಗಿ ಆಯ್ದ 50 ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ನಗರಸಭೆ ಸಿಬ್ಬಂದಿ ಮತ್ತು ಸಮುದಾಯ ಸಂಘಟಕರೊಬ್ಬರನ್ನು ನಿಯೋಜಿಸಲಾಗಿದೆ. ಕಸ ತಂದು ಎಸೆಯುವವರಿಗೆ ಇಬ್ಬರೂ ಎಚ್ಚರಿಕೆ ನೀಡಲಿದ್ದಾರೆ’ ಎಂದು ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಿಬ್ಬಂದಿಯ ಎಚ್ಚರಿಕೆ ಮೀರಿ ಮತ್ತೆ ಕಸ ತಂದು ಎಸೆದರೆ ದಂಡ ವಿಧಿಸಲಾಗುವುದು. ಸತತ ಮೂರನೇ ಸಲ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್ ದಾಖಲಿಸಲಾಗುವುದು. ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ ನಗರಸಭೆಯೊಂದಿಗೆ ಕೈ ಜೋಡಿಸಬೇಕು. ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಬೇಕು’ ಎಂದು ಮನವಿ ಮಾಡಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆ ಹಾಗೂ ಸಂಘಟನೆಗಳು, ವ್ಯಕ್ತಿಗಳು ನಗರಸಭೆಯ ಅನುಮತಿ ಪಡೆಯದೆ ಅನಧಿಕೃತವಾಗಿ ಫ್ಲೆಕ್ಸ್‌ಗಳನ್ನು ಹಾಕುತ್ತಿದ್ದಾರೆ. ಅಂತಹ ಫ್ಲೆಕ್ಸ್‌ಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಪ್ರಚಾರ ಜಾಹೀರಾತು ನಗರಸಭೆಯ ಆದಾಯ ಮೂಲವಾಗಿದೆ. ಹಾಗಾಗಿ, ಎಲ್ಲರೂ ಅನುಮತಿ ಪಡೆದುಕೊಂಡೇ ಫ್ಲೆಕ್ಸ್ ಅಳವಡಿಸಬೇಕು’ ಎಂದರು.
ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ನಗರದಲ್ಲಿ ಸದ್ಯ 52 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಬಹುತೇಕ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗುತ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಿಸುವುದಕ್ಕಾಗಿ 28 ಆಟೊ ಟಿಪ್ಪರ್‌ಗಳಿವೆ. ಬೆಳಿಗ್ಗೆ ಮನೆಗಳಲ್ಲಿ ಕಸ ಸಂಗ್ರಹಿಸುವ ಪೌರ ಕಾರ್ಮಿಕರು, ಸಂಜೆ ಮತ್ತು ಬೆಳಿಗ್ಗೆ ಹೋಟೆಲ್ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಕಸ ಸಂಗ್ರಹಿಸಲಿದ್ದಾರೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಗೆ ಮುಂಚೆ, ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಕಸ ಹಾಕುವ ಜನರಿಗೆ ನಗರಸಭೆ ಸಿಬ್ಬಂದಿ ಎಚ್ಚರಿಕೆ ನೀಡುತ್ತಿರುವ ವಿಡಿಯೊಗಳನ್ನು ಪ್ರದರ್ಶಿಸಲಾಯಿತು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ಪರಿಸರ ಎಂಜಿನಿಯರ್ ಸುಬ್ರಮಣ್ಯ, ಕಂದಾಯ ನಿರೀಕ್ಷಕ ಆರ್. ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.