
ರಾಮನಗರ: ‘ದುಂದುಬೆಚ್ಚಕ್ಕೆ ಕಡಿವಾಣ ಹಾಕುವ ಸರಳ ಹಾಗೂ ಸಾಮೂಹಿಕ ವಿವಾಹಗಳು ಆದರ್ಶ ಸಮಾಜಕ್ಕೆ ಬುನಾದಿಯಾಗಿವೆ. ಇದರಿಂದ ವೈವಾಹಿಕ ಜೀವನವೂ ಆದರ್ಶಮಯವಾಗಿರುತ್ತದೆ. ಹಾಗಾಗಿ, ಇಂತಹ ಮದುವೆಗಳು ಹೆಚ್ಚಾಗಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕಿವಿಮಾತು ಹೇಳಿದರು.
ಇಲ್ಲಿನ ಯಾರಬ್ ನಗರದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಡೆದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ನವ ದಂಪತಿಗಳು ಅನ್ನೋನ್ಯವಾಗಿ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಬೇಕು. ಪ್ರತಿ ಮನೆಯಲ್ಲಿಯೂ ತಂದೆ-ತಾಯಿಗಳ ದೊಡ್ಡ ಕನಸು ಅವರ ಮಗ-ಮಗಳು ಸಂತೋಷದಿಂದ ದಾಂಪತ್ಯ ಜೀವನ ನಡೆಸುವುದಾಗಿದೆ. ಶಾಸಕ ಇಕ್ಬಾಲ್ ಹುಸೇನ್ ಅವರು ಸಾಮೂಹಿಕ ವಿವಾಹ ನಡೆಸುವ ಮೂಲಕ ಅಂತಹ ಕುಟುಂಬಗಳಿಗೆ ಆಸರೆಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ‘ವಿವಾಹಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿವೆ. ಒಂದು ಮದುವೆ ಮಾಡುವುದೂ ಕಷ್ಟವಾಗಿದೆ. ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುದುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ಆರ್ಥಿಕ ದುರ್ಬಲರು, ಗ್ರಾಮೀಣ ಪ್ರದೇಶಗಳ ಬಡವರಿಗೆ ಸಾಮೂಹಿಕ ವಿವಾಹಗಳು ನೆರವಾಗುತ್ತವೆ’ ಎಂದು ಹೇಳಿದರು.
‘ವರದಕ್ಷಿಣೆಯು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ವರದಕ್ಷಿಣೆಯೂ ಹೆಚ್ಚಾಗುತ್ತಿದೆ. ವರದಕ್ಷಿಣೆ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವವರ ಸುದ್ದಿಯನ್ನು ಓದುತ್ತಲೇ ಇರುತ್ತೇವೆ. ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಪಡೆಯಬೇಕೆಂದು ಎಲ್ಲೂ ಹೇಳಿಲ್ಲ. ಸಮುದಾಯದವರು ವರದಕ್ಷಿಣೆ ಪಿಡುಗಿಗೆ ಕೊನೆ ಹಾಡಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕಿನ ಮುಸ್ಲಿಂ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು-ವರರ ಕುಟುಂಬಸ್ಥರು, ಸಂಬಂಧಿಕರು ಮಾತ್ರವಲ್ಲದೆ ನೂರಾರು ಜನರು ಸಾಮೂಹಿಕ ವಿವಾಹ ಕಾರ್ಯಕ್ಕೆ ಸಾಕ್ಷಿಯಾದರು.
ಮೌಲ್ವಿ ಮೌಲಾನ ಹಜರತ್ ಅಲಿ ಖಾನ್ ಅವರು ಮದುವೆ ನಡೆಸಿ ಕೊಟ್ಟರು. ಸಾಮೂಹಿಕ ವಿವಾಹವಾದ ನವ ದಂಪತಿಗೆ ಶಾಸಕ ಹುಸೇಣ್ ಅವರಿಂದ ತಲಾ ನಾಲ್ಕು ಜೊತೆ ಸೀರೆ, ಕಾಲುಚೈನ್, ವರರಿಗೆ ಜುಬ್ಬಾ, ಪೈಜಾಮ, ಜಾಕೆಟ್, ಟೋಪಿ, ವಾಚ್, ಹೊದಿಕೆ, ದಿನಬಳಕೆಯ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಲಾಯಿತು. ಭರ್ಜರಿ ಮಾಂಸಾಹಾರ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಸೇರಿದಂತೆ ಗಣ್ಯರು, ಧರ್ಮಗುರುಗಳು, ಹಿರಿಯರು ನವ ವಧು– ವರರಿಗೆ ಆಶೀರ್ವದಿಸಿದರು.
ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹವು ಸಮಾಜದಲ್ಲಿ ಸರಳ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ಹೊಸ ಜೀವನಕ್ಕೆ ಕಾಲಿಟ್ಟಿರುವ 100ಕ್ಕೂ ಹೆಚ್ಚು ಜೋಡಿಗಳಿಗೆ ಪ್ರೋತ್ಸಾಹಧನ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.