
ರಾಮನಗರ ಗ್ರಾಮಾಂತರ ಠಾಣೆ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಬ್ಬರು ಕಳ್ಳರಿಂದ ವಶಪಡಿಸಿಕೊಂಡಿರುವ ವಾಹನಗಳು ಹಾಗೂ ನಗದನ್ನು ಪ್ರದರ್ಶಿಸಲಾಯಿತು.
ರಾಮನಗರ: ಇಬ್ಬರು ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಿಂದ ದ್ವಿಚಕ್ರ ವಾಹನ, ಕಾರು, ಮಿನಿ ಗೂಡ್ಸ್ ವಾಹನ ಸೇರಿದಂತೆ 13 ವಾಹನಗಳು ಹಾಗೂ ₹4 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಠಾಣೆ ಆವರಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ‘ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಶಾಹಿದ್ ಅಹಮದ್ (27) ಮತ್ತು ತುಮಕೂರಿನ ಕ್ಯಾತಸಂದ್ರದ ಮಾರುತಿನ ನಗರದ ಅಪ್ಸರ್ ಅಹಮದ್ (40) ಬಂಧಿತರು. ಈ ಪೈಕಿ, ಶಾಹಿದ್ ವಾಹನಗಳನ್ನು ಕಳವು ಮಾಡುತ್ತಿದ್ದ. ಅಪ್ಸರ್ ಕದ್ದ ವಾಹನಗಳಿಗೆ ಸುಳ್ಳು ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ’ ಎಂದು ಹೇಳಿದರು.
‘ಇಬ್ಬರ ಬಂಧನದಿಂದಾಗಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ 2 ಕಳ್ಳತನ ಪ್ರಕರಣ ಸೇರಿದಂತೆ ರಾಮನಗರ ಟೌನ್, ಬಿಡದಿ, ಮಂಡ್ಯ ಪಶ್ಚಿಮ, ಮದ್ದೂರು, ತುಮಕೂರು ಹೊಸ ಬಡಾವಣೆ, ಯಶವಂತಪುರ, ಸೋಲದೇವನಹಳ್ಳಿ, ಕೋಲಾರ ಟೌನ್, ಬಳ್ಳಾರಿ ಎಪಿಎಂಸಿ, ಹುಬ್ಬಳ್ಳಿ ಗ್ರಾಮಾಂತರ ಹಾಗೂ ಮಹಾರಾಷ್ಟ್ರದ ಶಿರೋಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದೊಂದು ವಾಹನ ಕಳ್ಳತನ ಸೇರಿ 13 ಪ್ರಕರಣಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.
‘ಆರೋಪಿಗಳಿಂದ ಸುಮಾರು ₹50 ಲಕ್ಷ ಮೌಲ್ಯದ 2 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 3 ಕಾರು, 10 ದ್ವಿಚಕ್ರ ವಾಹನಗಳು ಹಾಗೂ ₹4 ಲಕ್ಷ ನಗದು ಜಪ್ತಿ ಮಾಡಲಾಗಿದೆ. ವಾಹನ ಡೀಲರ್ ಎಂದು ಹೇಳಿಕೊಂಡಿದ್ದ ಅಪ್ಸರ್, ಕದ್ದ ವಾಹನಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು’ ಎಂದರು.
ಮತ್ತೆ ಬಂದಾಗ ಸೆರೆ: ‘ನಗರದ ವಡೇರಹಳ್ಳಿ ಗ್ರಾಮದ ದರ್ಗಾದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಜೊತೆಗೆ ಖಚಿತ ಮಾಹಿತಿ ಮೇರೆಗೆ ಕಳ್ಳರ ಜಾಡು ಹಿಡಿದು ಹೊರಟ ತನಿಖಾ ತಂಡಕ್ಕೆ ಆರೋಪಿಗಳು ಮತ್ತೆ ನಗರಕ್ಕೆ ಬರುವ ಸುಳಿವು ಸಿಕ್ಕಿತ್ತು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಶಾಹಿದ್ ತಾನು ಕದ್ದಿದ್ದ ಬೈಕ್ ಅನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿಗೆ ಬಂದಿರುವುದು ಗೊತ್ತಾಯಿತು. ಆಗ, ಸಿಬ್ಬಂದಿ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿ ಬಂಧಿಸಿದರು. ಮತ್ತೊಬ್ಬ ಆರೋಪಿಗೆ ನೋಟಿಸ್ ಕೊಟ್ಟರೂ ಠಾಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಗ್ರಾಹಕರೊಬ್ಬರ ಭೇಟಿಗಾಗಿ ಕೆಂಪೇಗೌಡನದೊಡ್ಡಿಗೆ ಬಂದಿದ್ದ ಆತನನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಚಂದ್ರಯ್ಯ ಎನ್.ಎಚ್, ರಾಜೇಂದ್ರ, ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್, ರಾಮನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮುರಳಿ, ರಾಮನಗರ ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಪಿ. ರಮೇಶ್, ಗ್ರಾಮಾಂತರ ಎಸ್‌ಐಗಳಾದ ಮಹಮದ್ ಅಲ್ಲಾವುದೀನ್, ನರಸಿಂಹಯ್ಯ, ಸಿದ್ದರಾಜು, ಐಜೂರು ಠಾಣೆ ಎಸ್ಐ ಜಾರ್ಜ್ ಪ್ರಕಾಶ್ ಹಾಗೂ ಸಿಬ್ಬಂದಿ ಇದ್ದರು.
ದುಬಾರಿ ಮಾದಕವಸ್ತು ಮಾರಾಟಕ್ಕೆ ಯತ್ನಿಸಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ವಿದ್ಯಾರ್ಥಿಗಳು ಉದ್ಯಮಿಗಳು ಸೇರಿದಂತೆ ಉನ್ನತ ವರ್ಗದ ವ್ಯಕ್ತಿಗಳೇ ಗ್ರಾಹಕರಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ– ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕುಖ್ಯಾತ ಇಬ್ಬರು ವಾಹನ ಕಳ್ಳರನ್ನು ಬಂಧಿಸಿ 13 ಪ್ರಕರಣಗಳ ಪತ್ತೆಗೆ ಕಾರಣವಾಗಿರುವ ರಾಮನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮುರಳಿ ನೇತೃತ್ವದ ತಂಡಕ್ಕೆ ಹಾಗೂ ₹75 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿರುವ ಐಜೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ಜಾರ್ಜ್ ಪ್ರಕಾಶ್ ನೇತೃತ್ವದ ತಂಡಕ್ಕೆ ತಲಾ ₹10 ಸಾವಿರ ಬಹುಮಾನ ನೀಡಲಾಗುವುದು ಎಂದು ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ತಿಳಿಸಿದರು.
ಐಜೂರು ಪೊಲಿಸ್ ಠಾಣೆ ವ್ಯಾಪ್ತಿಯ ಮಾದಕವಸ್ತು ಪ್ರಕರಣದಲ್ಲಿ ಬಂಧಿಸಿರುವ 37 ವರ್ಷದ ಉಗಾಂಡಾದ ನಾನಾ ಜಾನ್ಸನ್ ಎರಡು ವರ್ಷಗಳಿಂದ ನಕಲಿ ಪಾಸ್‌ಪೋರ್ಟ್‌ನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ. ಈ ಕುರಿತು ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಡ್ರಗ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ದೆಹಲಿಯಿಂದ ದುಬಾರಿ ಮಾದಕವಸ್ತುಗಳನ್ನು ಬೆಂಗಳೂರಿಗೆ ತರುತ್ತಿದ್ದ. ಉಳಿದ ಆರೋಪಿಗಳಾದ ಬೆಂಗಳೂರಿನ ಫಾರುಕ್ ನಗರದ ಸಾಕೀಲ್ ಪಾಷ ಅಲಿಯಾಸ್ ಸಲ್ಮಾನ್ ಖಾನ್ (32) ಮತ್ತು ಜಿಗಣಿಯ ಸಾಧಿಕ್ ಖಾನ್ (32) ಮೂಲಕ ಗ್ರಾಹಕರಿಗೆ ಮಾದಕವಸ್ತು ತಲುಪಿಸಿ ಹಣ ಸಂಗ್ರಹಿಸುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.