ADVERTISEMENT

ರಾಮನಗರ | ಲಂಚಕ್ಕೆ ಬೇಡಿಕೆ: ಆರ್‌ಟಿಒ ವರ್ಗಾವಣೆ

ವಿಎಲ್‌ಟಿಡಿ ಅನುಮೋದನೆಗೆ ₹1 ಸಾವಿರ ಲಂಚ ಕೇಳಿದ ಕೃಷ್ಣೇಗೌಡ; ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 16:05 IST
Last Updated 5 ನವೆಂಬರ್ 2025, 16:05 IST
<div class="paragraphs"><p>ಸಿ.ಎಂ. ಕೃಷ್ಣೇಗೌಡ</p></div>

ಸಿ.ಎಂ. ಕೃಷ್ಣೇಗೌಡ

   

ರಾಮನಗರ: ಶಾಲಾ ಬಸ್‌ವೊಂದಕ್ಕೆ ವಿಎಲ್‌ಟಿಡಿ (ವಾಹನದ ಸ್ಥಳ ಟ್ರ್ಯಾಕಿಂಗ್ ಸಾಧನ) ಅನುಮೋದನೆ ನೀಡಲು ₹1 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಮೇರೆಗೆ, ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಂ. ಕೃಷ್ಣೇಗೌಡ ಅವರನ್ನು ಮಂಡ್ಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಬುಧವಾರ ವರ್ಗಾವಣೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಸ್ತುವಾರಿಯಾಗಿರುವ ಜಿಲ್ಲೆಯಲ್ಲೇ ಇಂತಹದ್ದೊಂದು ಪ್ರಕರಣ ನಡೆದಿದೆ.

ಶಾಲೆಯೊಂದರ ಸಿಬ್ಬಂದಿ ತಮ್ಮ ಬಸ್‌ನ ವಿಎಲ್‌ಟಿಡಿಗೆ ಅನುಮೋದನೆ ಪಡೆಯುವುದಕ್ಕಾಗಿ ಆರ್‌ಟಿಒ ಕೃಷ್ಣೇಗೌಡ ಅವರನ್ನು ಮಂಗಳವಾರ ಭೇಟಿ ಮಾಡಿದ್ದರು. ಆಗ ಕೃಷ್ಣೇಗೌಡ ಅವರು ತಲಾ ₹500ರಂತೆ ಮಾಮೂಲಿ ₹1 ಸಾವಿರ ಕೊಟ್ಟರೆ, ನಿಮ್ಮ ಕೆಲಸ ಬೇಗನೆ ಆಗುತ್ತದೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು.

ADVERTISEMENT

ಸಿಬ್ಬಂದಿ ಜೊತೆಗೆ ಬಂದಿದ್ದ ವ್ಯಕ್ತಿಯೊಬ್ಬರು ಆರ್‌ಟಿಒ ಲಂಚ ಕೇಳಿದ್ದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದರು. ಜಿಪಿಎಸ್‌ ಆಧಾರಿತ ಮೂರು ಸೆಕೆಂಡಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು, ಪರಿಶೀಲಿಸಿ ವರದಿ ನೀಡುವಂತೆ ಸಾರಿಗೆ ಇಲಾಖೆಯ ಆಯುಕ್ತರು ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಆಯುಕ್ತರಿಗೆ ಸೂಚಿಸಿದ್ದರು.

ಮೇಲ್ನೋಟಕ್ಕೆ ಅಧಿಕಾರಿ ಲಂಚ ಕೇಳಿರುವುದು ಸಾಬೀತಾಗಿರುವುದರಿಂದ ಪಕ್ಕದ ಮಂಡ್ಯ ಜಿಲ್ಲೆಗೆ ಅವರನ್ನು ವರ್ಗಾವಣೆ ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇಲ್ಲಿನ ಆರ್‌ಟಿಒ ಕಚೇರಿಯಲ್ಲಿ ಟ್ರಾಕ್ಟರ್‌ಗಳನ್ನು ಅಕ್ರಮವಾಗಿ ನೋಂದಣಿ ಮಾಡುವ ಜಾಲ ಸಕ್ರಿಯವಾಗಿತ್ತು.

ಆ ಮೇರೆಗೆ, ಕಳೆದ ವರ್ಷ ಕಚೇರಿ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಹಿಂದಿನ ಆರ್‌ಟಿಒ ಶಿವಕುಮಾರ್ ಮತ್ತು ಏಜೆಂಟ್ ಸತೀಶ್ ಎಂಬಾತನನ್ನು ಬಂಧಿಸಿದ್ದರು. ಅಂದಿನಿಂದ ಭ್ರಷ್ಟಾಚಾರ ಆರೋಪದ ಮೇಲೆ ಕಚೇರಿ ಮೇಲೆ ಎರಡ್ಮೂರು ಸಲ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದರೂ, ಕಚೇರಿಯಲ್ಲಿ ಭ್ರಷ್ಟಾಚಾರ ಮಾತ್ರ ನಿಂತಿಲ್ಲ.

ನಾನು ಲಂಚ ಕೇಳಿಲ್ಲ. ವಿಎಲ್‌ಟಿಡಿ ಅನುಮೋದನೆಗೆ ಮಾಮೂಲಿ ₹1 ಸಾವಿರ ಶುಲ್ಕ ತುಂಬುವಂತೆ ಸೂಚಿಸಿದ್ದೇನೆ. ಅದನ್ನೇ ವಿಡಿಯೊ ಮಾಡಿಕೊಂಡಿರುವ ಜೊತೆಗಿದ್ದ ವ್ಯಕ್ತಿಯೊಬ್ಬ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ
ಸಿ.ಎಂ. ಕೃಷ್ಣೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.