
ಸಾಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲಕರ್ಮಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
60 ವರ್ಷ ಮೇಲ್ಪಟ್ಟ ನೊಂದಾಯಿತ ಕರಕಶಲಕರ್ಮಿಗಳಿಗೆ ಮಾಸಾಶನ ನೀಡಬೇಕು, ಈ ಹಿಂದೆ ಇದ್ದ ವಿಮಾ ಯೋಜನೆಯನ್ನು ಸರ್ಕಾರ ಮರು ಜಾರಿಗೊಳಿಸಬೇಕು, ಮೃತರಾದ ನೊಂದಾಯಿತ ಕುಶಲಕರ್ಮಿಗಳ ಗುರುತಿನ ಪತ್ರವನ್ನು ಮೃತರ ವಾರಸುದಾರರ ಹೆಸರಿಗೆ ವರ್ಗಾಯಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಹಿಂದೆ ಅಪಾರ ಪ್ರಮಾಣದಲ್ಲಿ ಶ್ರೀಗಂಧ ಲಭ್ಯವಿದ್ದ ಕಾಲದಲ್ಲಿ ಕುಶಲಕರ್ಮಿಗಳು ಉತ್ತಮ ಸ್ಥಿತಿಯಲ್ಲಿದ್ದರು. ಈಗ ಶ್ರೀಗಂಧದ ಲಭ್ಯತೆ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದ ಅವರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಶ್ವ 1, ವಿಶ್ವ 2 ಹಾಗೂ ಪಶ್ಚಿಮಘಟ್ಟ ಡಿಸಿಎಚ್ ವಸತಿ ಯೋಜನೆಯಡಿ ಕುಶಲಕರ್ಮಿಗಳು, ಸರ್ಕಾರ ಜಂಟಿಯಾಗಿ ಮನೆ ನಿರ್ಮಿಸುವ ಯೋಜನೆ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಈ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರವನ್ನು ಸರ್ಕಾರ ಕುಶಲಕರ್ಮಿಗಳಿಗೆ ನೀಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕುಶಲಕರ್ಮಿಗಳನ್ನು ಕಲಾವಿದರು ಎಂಬ ಪಟ್ಟಿಗೆ ಸೇರಿಸಿರುವುದರಿಂದ ಅವರಿಗೆ ಅನೇಕ ಸೌಲಭ್ಯಗಳು ದೊರಕುತ್ತಿಲ್ಲ. ಕುಶಲಕರ್ಮಿಗಳನ್ನು ಕಾರ್ಮಿಕರ ಪಟ್ಟಿಗೆ ಸೇರಿಸುವ ಸಂಬಂಧ ಸಚಿವ ಸಂತೋಷ್ ಲಾಡ್ ಅವರ ಜೊತೆ ಮಾತುಕತೆ ನಡೆಸುವುದಾಗಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸರ್ಕಾರದ ಯೋಜನೆಯಡಿ ನಿರ್ಮಿಸಿದ ಮನೆಗಳ ಹಕ್ಕುಪತ್ರವನ್ನು ಕರಕುಶಲಕರ್ಮಿಗಳ ಹೆಸರಿಗೆ ನೀಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಕರಕುಶಲಕರ್ಮಿಗಳ ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್ ಕುಮಾರ್, ಪ್ರಮುಖರಾದ ಅಣ್ಣಪ್ಪ, ದೀಪಕ್ , ನಾಗರಾಜ್, ಶಿವಾನಂದ್, ತಿರುಮಲೇಶ್, ನಾಗೇಶ್ ಶಿರಸಿ, ಗುರುಪ್ರಸಾದ್, ದಿವಾಕರ, ಧರ್ಮರಾಜ್, ಮೀನಾಕ್ಷಿ ರಾಮಚಂದ್ರ, ಆಶಾ ಎಂ.ಎನ್. ಶಕುಂತಲಾ, ಜಯಂತಿ, ಸವಿತಾ, ವಿನಾಯಕ ಗುಡಿಗಾರ್, ಲಕ್ಷ್ಮಣ, ಅಣ್ಣಪ್ಪ ಕೆ.ಜಿ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.