ADVERTISEMENT

ಶಿವಮೊಗ್ಗ | ಮಳೆ, ಆನೆ ದಾಳಿಗೆ ಬೆಳೆಹಾನಿ: ಕಂಗೆಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 7:16 IST
Last Updated 16 ಡಿಸೆಂಬರ್ 2024, 7:16 IST
ಆನಂದಪುರ ಸಮೀಪದ ತಂಗಳವಾಡಿ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ತುತ್ತಾದ ರೈತ ಸಂಗಪ್ಪಗೌಡ ಅವರ ಅಡಿಕೆ ತೋಟವನ್ನು ಅಧಿಕಾರಿಗಳು ಪರಿಶೀಲಿಸಿದರು
ಆನಂದಪುರ ಸಮೀಪದ ತಂಗಳವಾಡಿ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ತುತ್ತಾದ ರೈತ ಸಂಗಪ್ಪಗೌಡ ಅವರ ಅಡಿಕೆ ತೋಟವನ್ನು ಅಧಿಕಾರಿಗಳು ಪರಿಶೀಲಿಸಿದರು   

ಶಿವಮೊಗ್ಗ: ಭಾರಿ ಮಳೆಯಿಂದ ಅಡಿಕೆಗೆ ವ್ಯಾಪಕಗೊಂಡ ಎಲೆಚುಕ್ಕಿ, ಹಳದಿ ರೋಗಗಳ ನಡುವೆಯೇ ಅಕಾಲಿಕ ಮಳೆಯಿಂದ ಕೊಯ್ಲು ಮಾಡಲಾಗದೇ ಭತ್ತ ನೀರು ಪಾಲಾಗುವುದು ಕಂಡು ಮಲೆನಾಡಿನ ರೈತರು ನೊಂದಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಕಾಡಾನೆಗಳು ಬೆಳೆದು ನಿಂತ ಪೈರು ತಿನ್ನಲು ಜಮೀನುಗಳಿಗೆ ಲಗ್ಗೆ ಇಡುತ್ತಿದ್ದು, ರೈತಾಪಿಗಳನ್ನು ಇನ್ನಷ್ಟು ಕಂಗಾಲಾಗಿಸಿದೆ.

ಅಕಾಲಿಕ ಮಳೆ ಹಾಗೂ ಆನೆ ಹಾವಳಿಯಿಂದ ಆಗಿರುವ ಬೆಳೆ ನಷ್ಟದ ಬಗ್ಗೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಇಣುಕು ನೋಟ ಬೀರಿದೆ.

ಬೆಳೆ ನಷ್ಟದ ಅತಂಕದಲ್ಲೇ ನಿತ್ಯದ ಬದುಕು

ಆನಂದಪುರ: ಗ್ರಾಮ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದರಿಂದ ರೈತರು ಬೆಳೆ ನಷ್ಟದ ಆತಂಕದಿಂದ ಜೀವನ ಸಾಗಿಸುವಂತಾಗಿದೆ.

ADVERTISEMENT

ಫೆಂಜಲ್‌ ಚಂಡಮಾರುತದಿಂದಾಗಿ ಭತ್ತ ಕಟಾವು ಮಾಡದೆ ಬಿಸಿಲಿಗಾಗಿ ಕಾಯುತ್ತಿದ್ದ ರೈತರಿಗೆ ಕಳೆದೊಂದು ವಾರದಿಂದ ಕಾಡಾನೆ ಹಾವಳಿಯಿಂದ ಪೂರ್ತಿ ಬೆಳೆ ಕಳೆದುಕೊಳ್ಳುವ ಆತಂಕ ಹೆಚ್ಚಿಸಿದೆ.

ಕತ್ತಲೆಯಾದರೆ ಸಾಕು ಕಾಡಾನೆಗಳು ಗ್ರಾಮಗಳತ್ತ ಬರುತ್ತಿವೆ. ಭತ್ತ, ಜೋಳ, ಕಬ್ಬು ಕಟಾವಿಗೆ ಬಂದಿದ್ದು, ಶೇ. 20ರಷ್ಟು ರೈತರು ಮಾತ್ರ ಕಟಾವು ಮಾಡಿದ್ದು, ಉಳಿದ ರೈತರು ಮಳೆಯ ಕಾರಣ ಮುಂದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಡಾನೆ ಹಾವಳಿ ಅವರ ನಿದ್ರೆಗೆಡಿಸಿದೆ.

ತಂಗಳವಾಡಿ ಗ್ರಾಮದ ರೈತರಾದ ಸಂಗಪ್ಪಗೌಡ, ಕನ್ನಪ್ಪ, ನಾರಾಯಣಪ್ಪ, ರಾಮಚಂದ್ರ, ಮಂಜಪ್ಪ, ಅಶೋಕ್‌ ಸೇರಿದಂತೆ ಅನೇಕ ರೈತರ ಅಡಿಕೆ ಮರ, ಭತ್ತ, ಬಾಳೆ, ಕಬ್ಬು ಕಾಡಾನೆ ಹಾವಾಳಿಗೆ ತುತ್ತಾಗಿದೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಬೆಲೆ ಇದ್ದರೂ ಇಳುವರಿ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ.

‘ಇರುವ ಒಂದು ಎಕರೆಯಲ್ಲಿ ಭತ್ತ ಬೆಳೆದಿದ್ದೆ. ಫಸಲು ಬೆಳೆದು ನಿಂತಿದೆ. ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಕಾಡಾನೆಯ ತುಳಿತಕ್ಕೆ ಭತ್ತ ಸಂಪೂರ್ಣ ಹಾನಿಗೀಡಾಗಿದೆ. ಸೂಕ್ತ ಪರಿಹಾರ ನೀಡಲು ಸರ್ಕಾರ ಗಮನ ಹರಿಸಬೇಕು’ ಎಂದು ಬೈರಾಪುರದ ರೈತ ಟೀಕಪ್ಪ ಅವಲತ್ತುಕೊಂಡರು.

ಅಕಾಲಿಕ ಮಳೆ, ಬೆಳೆ ನಷ್ಟ: ಬದುಕು ಮೂರಾಬಟ್ಟೆ

ರಿಪ್ಪನ್‌ಪೇಟೆ: ಮಲೆನಾಡಿನ ಕೆರೆಹಳ್ಳಿ ಹಾಗೂ ಹೊಂಬುಜ ಹೋಬಳಿ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಮಳೆಯಿಂದಾಗಿ ಅಡಿಕೆ, ಶುಂಠಿ ಹಾಗೂ ಮುಸುಕಿನ ಜೋಳ, ಭತ್ತದ ಫಸಲಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಈ ಬಾರಿ ಮುಂಗಾರು ಹಂಗಾಮಿನ ಅವಧಿಯಲ್ಲಿ ಮಳೆಯ ತೀವ್ರತೆಗೆ ಅಡಿಕೆ, ಶುಂಠಿ ಬೆಳೆ ಶೇ 20-30ರಷ್ಟು ಇಳುವರಿ ಕುಸಿತ ಕಂಡಿತ್ತು. ಇದೀಗ ಫಸಲು ಕೊಯ್ಲ ಕೈಗೆಟಕುವ ಸಮಯದಲ್ಲಿ ಮಳೆಗೆ ಸಿಲುಕಿ ನಷ್ಟ ಉಂಟಾಗಿದೆ. ಭತ್ತದ ನಾಟಿ ಹಾಗೂ ಅಡಿಕೆ ಗಿಡಗಳ ನೆಡುವಿಕೆ ಅಥವಾ ರೋಗ ನಿರ್ವಹಣೆಗೆ ಹೆಚ್ಚಿದ ವೆಚ್ಚ, ಕಡಿಮೆ ಉತ್ಪಾದನೆ ಹಾಗೂ ಆದಾಯದ ಕೊರತೆಯಿಂದ ರೈತ ಸಮುದಾಯ ತತ್ತರಿಸಿದೆ.

ಅತಿವೃಷ್ಟಿಯಿಂದ ಅಡಿಕೆ ಕಾಯಿ ಕಟ್ಟುವ ಹಂತದಲ್ಲಿ ಹೂವು ಉದುರುವಿಕೆ, ಜೋಳ, ಶುಂಠಿಗೆ ಕೊಳೆ ರೋಗ ಆವರಿಸಿ ರೈತರನ್ನು ಹೈರಾಣಾಗಿಸಿತ್ತು . ಇದೀಗ ಜೋಳದ ಕುಂಡಿಗೆಯಲ್ಲಿ ಮಳೆ ನೀರು ಸೇರಿ ಶೇಕಡ 50ಕ್ಕೂ ಅಧಿಕ ಬೆಳೆ ನಷ್ಟವಾಗಿದೆ ಎಂದು ಅರಸಾಳು ಗ್ರಾಮ ಪಂಚಾಯಿತಿಯ ಕೊಳವಂಕ ಗ್ರಾಮದ ಕಂಬತ್ತ ಮನೆ ನಿವಾಸಿ ರೈತ ಜಗದೀಶ ನಾಯ್ಕ ಹೇಳುತ್ತಾರೆ.

ಚಿಕ್ಕಜೇನಿ ಗ್ರಾಮ ಪಂಚಾಯ್ತಿಯ ಕಾಳಿಗುಂಡಿ ನಿವಾಸಿ ಮೇಘರಾಜ ಗೌಡ ಒಂದೂವರೆ ಎಕರೆಯಲ್ಲಿ ಬೆಳೆದ ಭತ್ತದ ಬೆಳೆ ಬೆಂಕಿ ರೋಗದಿಂದ ಅರ್ಧ ಭಾಗ ಹಾಳಾಗಿತ್ತು. ಇದೀಗ ಅಕಾಲಿಕ ಮಳೆಗೆ ಸಿಲುಕಿ ಸಂಪೂರ್ಣ ಹಾಳಾಗಿದೆ. ಇರುವ ನಾಲ್ಕು ದನಗಳಿಗೂ ಮೇವು ಖರೀದಿಸುವಂತಾಗಿದೆ.

ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದಲ್ಲಿ ಭತ್ತದ ಫಸಲು ನೀರಿನಲ್ಲಿ ಒದ್ದೆಯಾಗಿರುವುದು
ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮಲಾಪುರದಲ್ಲಿ ಮಳೆಯಿಂದ ಹಾನಿಗೊಳಗಾದ ಅಡಿಕೆಯನ್ನು ರೈತ ಕುಟುಂಬದವರು ಹಸನು ಮಾಡಿದ್ದು ಹೀಗೆ
ಕಾಡಾನೆಗಳು ಅರಸಾಳು ಅರಣ್ಯ ವಲಯದಿಂದ ಬಂದು ತಂಗಳವಾಡಿ ಕಣ್ಣೂರು ಗ್ರಾಮಗಳಲ್ಲಿ ಬೆಳೆ ಹಾನಿ ಮಾಡಿವೆ. ಆನೆಗಳನ್ನು ಹಿಮ್ಮೆಟ್ಟಿಸಲು 2 ತಂಡ ರಚಿಸಲಾಗಿದೆ. ಪರಿಹಾರಕ್ಕಾಗಿ ರೈತರು ಪಹಣಿ ಪತ್ರ ನೀಡಬೇಕು.
ರವಿಕುಮಾರ್‌ ಆನಂದಪುರ ವಲಯ ಅರಣ್ಯಾಧಿಕಾರಿ
ಕಾಡಾನೆ ಹಾವಳಿಯಿಂದ ಅನೇಕ ರೈತರ ಭತ್ತ ಕಬ್ಬು ಅಡಿಕೆ ಬಾಳೆ ನಷ್ಟವಾಗಿದೆ. ಖಾತೆದಾರರನ್ನಷ್ಟೇ ಪರಿಗಣಿಸದೆ ಕಂದಾಯ ಇಲಾಖೆ ಮೂಲಕ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ಆದಷ್ಟು ಬೇಗ ಓಡಿಸಬೇಕು
ಕನ್ನಪ್ಪ ರೈತ
ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿಗೆ ರೈತರಿಗೆ ಸೂಕ್ತ ಪರಿಹಾರ ನೀಡಲು ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು.
ವಾಟಗೋಡು ಸುರೇಶ್‌ ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್‌ ಅಧ್ಯಕ್ಷ
ಪರಿಹಾರ ಪಡೆಯಲು ಪಹಣಿ ಇಲ್ಲ..!
ಸಾಗರ ತಾಲ್ಲೂಕಿನಲ್ಲಿ ಬಹಳಷ್ಟು ರೈತರು ಬಗರ್‌ ಹುಕುಂ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಕಾಡಾನೆ ದಾಳಿಯಿಂದ ಬೆಳೆ ನಷ್ವವಾದರೆ ಪರಿಹಾರ ಕೊಡಲು ಅರಣ್ಯ ಇಲಾಖೆಯವರು ಪಹಣಿ ಕೇಳುತ್ತಾರೆ. ಪಹಣಿ  ಇಲ್ಲದಿದ್ದರೆ ತಾಂತ್ರಿಕ ತೊಂದರೆಯ ನೆಪವೊಡ್ಡಿ ಪರಿಹಾರ ನಿರಾಕರಿಸುತ್ತಿದ್ದಾರೆ. ಹೀಗಾದರೆ ನಷ್ಟ ತುಂಬಿಕೊಳ್ಳಲು ಏನು ಮಾಡಬೇಕು? ಎಂಬುದು ರೈತರ ಪ್ರಶ್ನೆಯಾಗಿದೆ. ಸರ್ಕಾರವೇ ಇದಕ್ಕೆ ಉತ್ತರ ಕೊಡಲಿ. ಕಂದಾಯ ಇಲಾಖೆ ಮೂಲಕವಾದರೂ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.