ADVERTISEMENT

ಕಾರ್ಗಲ್: ರಾಜ್ಯಪಾಲ ಗೆಹಲೋತ್‌ಗಾಗಿ ಲಿಂಗನಮಕ್ಕಿ ಜಲಾಶಯದ ನೀರು ಪೋಲು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:30 IST
Last Updated 26 ನವೆಂಬರ್ 2021, 2:30 IST
ಜೋಗ ಜಲಪಾತ ವೀಕ್ಷಿಸಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌
ಜೋಗ ಜಲಪಾತ ವೀಕ್ಷಿಸಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌   

ಕಾರ್ಗಲ್: ಜೋಗ ಜಲಪಾತದ ಜಲಸಿರಿಯ ವೈಭವವನ್ನು ಕಂಡು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಮಾರುಹೋದರು.

ಇಲ್ಲಿಗೆ ಸಮೀಪದ ಮುಂಬಯಿ ಬಂಗಲೆಯಲ್ಲಿ ತಂಗಿದ್ದ ಅವರು ಜಲಸಿರಿಯ ವೈಭವ ಕಂಡು ಬೆರಗಾದರು.

ರಾಜಾ, ರೋರರ್, ರಾಕೆಟ್, ರಾಣಿಯ ವೈಭವದ ಬಗ್ಗೆ ಅಧಿಕಾರಿಗಳಿಂದ ಕೇಳಿ ತಿಳಿದ ಅವರು, ಇದು ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದು ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಈ ಬಾರಿಯ ಮಳೆಯಿಂದ ಭರ್ತಿಯಾಗಿದ್ದ ಲಿಂಗನಮಕ್ಕಿ ಜಲಾಶಯದ ನೀರನ್ನು ಕೆಪಿಸಿ ಅಧಿಕಾರಿಗಳು ಪೋಲಾಗದಂತೆ ಅತ್ಯಂತ ಜಾಣ್ಮೆಯಿಂದ ನಿರ್ವಹಣೆ ಮಾಡಿದ್ದರು. ಅಣೆಕಟ್ಟೆಯ ಒಳಹರಿವು ಮತ್ತು ಹೊರಹರಿವನ್ನು ತೂಗಿ ಅಳೆದು ರೇಡಿಯಲ್ ಗೇಟಿನ ಮೂಲಕ ನೀರನ್ನು ಹೊರಹಾಯಿಸದಂತೆ ನೋಡಿಕೊಂಡಿದ್ದರು. ಆದರೆ, ಜೋಗದಲ್ಲಿ ವಾಸ್ತವ್ಯಕ್ಕೆ ಆಗಮಿಸಿದ್ದ ರಾಜ್ಯಪಾಲರನ್ನು ಖುಷಿಪಡಿಸುವ ಉದ್ದೇಶದಿಂದ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ಕೆಪಿಸಿ ಅಧಿಕಾರಿಗಳು ಜಲಾಶಯದ ರೇಡಿಯಲ್ ಗೇಟಿನ ಮೂಲಕ ಮುಂಜಾನೆಯಾಗುತ್ತಿದ್ದಂತೆ ಅಂದಾಜು 800 ಕ್ಯಸೆಕ್ ನೀರನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹೊರ ಹಾಯಿಸಿ ಪೋಲು ಮಾಡಿದ ಘಟನೆ ಜರುಗಿತು.

ದಿಢೀರ್ ಹರಿದ ನೀರಿನಿಂದ ತೀರದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ: ಗುರುವಾರ ಬೆಳಿಗ್ಗೆ ಶರಾವತಿ ಕೆಳದಂಡೆ ತೀರದ ಪ್ರದೇಶಗಳಾದ ಕಾರ್ಗಲ್ ಮರಳುಕೋರೆ ಮತ್ತು ಅಂಬುಗಳಲೆ ತೀರದ ವಾಸಿಗಳಿಗೆ ಆತಂಕ ಎದುರಾಗಿತ್ತು. ಮಳೆ ಇಲ್ಲದಿದ್ದರೂ ದಿಢೀರನೆ ಕಾರ್ಗಲ್ ಅಣೆಕಟ್ಟೆಯ ಕೋಡಿ ಹರಿದು ನೀರು ಹೊರಹಾಯುವ ದೃಶ್ಯವನ್ನು ಕಾಣುವಂತಾಗಿತ್ತು. ಜಲಾಶಯದಿಂದ ದಿಢೀರ್‌ ನೀರು ಹೊರ ಹಾಯಲು ಕಾರಣವೇನು ಎಂಬ ಪ್ರಶ್ನೆ ಜನರಲ್ಲಿ ಮೂಡಿತು. ರೈತಾಪಿಗಳು ಜಾನುವಾರು ಹೊರಬಿಡಲು ಆಲೋಚಿಸುವ ಸ್ಥಿತಿ ನಿರ್ಮಾಣವಾಗಿತ್ತು. ಕೂಲಿ ಕಾರ್ಮಿಕರು ಈ ಘಟನೆಯಿಂದ ಕೆಲ ಕ್ಷಣ ದಿಗ್ಭ್ರಮೆಗೊಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.