ADVERTISEMENT

ಒಳಮೀಸಲಾತಿ ಬಂಜಾರ ಸಮಾಜಕ್ಕೆ ಮರಣ ಶಾಸನ: ಸೇನಾಭಗತ್ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:12 IST
Last Updated 31 ಆಗಸ್ಟ್ 2025, 6:12 IST
ಶಿಕಾರಿಪುರದಲ್ಲಿ ಶನಿವಾರ ಒಳಮೀಸಲಾತಿ ವಿರೋಧಿಸಿ ತಹಶೀಲ್ದಾರ್ ಕಚೇರಿ ಎದುರು ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು 
ಶಿಕಾರಿಪುರದಲ್ಲಿ ಶನಿವಾರ ಒಳಮೀಸಲಾತಿ ವಿರೋಧಿಸಿ ತಹಶೀಲ್ದಾರ್ ಕಚೇರಿ ಎದುರು ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದರು    

ಶಿಕಾರಿಪುರ: ‘ಒಳಮೀಸಲಾತಿ ಬಂಜಾರ ಸಮಾಜಕ್ಕೆ ಮರಣ ಶಾಸನವಾಗಿದೆ. ಈ ಹಿಂದೆ ಇದ್ದ ಮೀಸಲಾತಿ ಮುಂದುವರಿಸಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುವುದಲ್ಲದೆ ಚುನಾವಣೆ ಬಹಿಷ್ಕಾರವನ್ನೂ ಮಾಡಲಾಗುವುದು’ ಎಂದು ಸಾಲೂರು ಬಂಜಾರ ಮಠದ ಸೇನಾಭಗತ್ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಒಳಮೀಸಲಾತಿ ವಿರೋಧಿಸಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಕಾನೂನು ಬದ್ಧ ಮಾನ್ಯತೆ ಇಲ್ಲದೆ ಒಳಮೀಸಲಾತಿ ಜಾರಿಗೊಳಿಸಲಾಗುತ್ತಿದೆ. ಮೀಸಲಾತಿ ವರ್ಗೀಕರಣ ಕುರಿತು ಶಾಸನಬದ್ಧ ಅನುಮೋದನೆ ಆಗಿಲ್ಲ. ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಆದಾಗ್ಯೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಸಮಜಾಯಿಷಿ ನೀಡಿ ಬಂಜಾರ, ಕೊರಚ, ಕೊರಮ ಸಮುದಾಯಗಳಿಗೆ ದ್ರೋಹ ಎಸಗಿದೆ’ ಎಂದು ದೂರಿದರು.

ADVERTISEMENT

‘ಸ್ಪೃಶ್ಯ, ಅಸ್ಪೃಶ್ಯ ಎನ್ನುವ ಅಸಂವಿಧಾನಿಕ ಪದ ಬಳಕೆ ಮೂಲಕ ಸರ್ಕಾರ ನೇಮಿಸಿರುವ ಆಯೋಗಗಳು ಸೂಕ್ತವಾಗಿ ಕಾರ್ಯನಿರ್ವಹಿಸದೆ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಒಳಮೀಸಲಾತಿ ಜಾರಿಗೆ ತರುತ್ತಿದ್ದಾರೆ. ಎಡ ಬಲ ಸಮುದಾಯಕ್ಕೆ ಈಗಾಗಲೇ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಂದುವರಿದಿದ್ದಾರೆ. ಆದರೂ ಪುನಃ ಅವರ ಹಿತಕ್ಕಾಗಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯಕ್ಕೆ ಬರೆ ಎಳೆಯಲಾಗುತ್ತಿದೆ’ ಎಂದು ಆಕ್ಷೇಪಿಸಿದರು.

ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಮಾತನಾಡಿ, ‘ಈ ಹಿಂದೆ 101 ಜಾತಿಗೆ ಶೇ 17 ಮೀಸಲಾತಿ ಇತ್ತು. ಇದೀಗ 63 ಜಾತಿಗಳಿಗೆ ಶೇ 5 ಒಳಮೀಸಲಾತಿ ನೀಡಲಾಗಿದೆ. ಅದು ನಮ್ಮ ಸಮುದಾಯದ ಸಾಮಾಜಿಕ, ರಾಜಕೀಯ ಬೆಳವಣಿಗೆ ಮೇಲೆ ತೆರೆ ಎಳೆಯುತ್ತದೆ. ರಾಜ್ಯದ ಹಲವು ಕಡೆ ಈಗಲೂ ಬಂಜಾರ ಸಮುದಾಯ ಕೂಲಿ ಕೆಲಸಕ್ಕೆ ಬೇರೆ ರಾಜ್ಯಕ್ಕೆ ತೆರಳುತ್ತಾರೆ. ಬಡತನಕ್ಕಾಗಿ ಮಕ್ಕಳ ಮಾರಾಟದಂತಹ ಪ್ರಕರಣಗಳೂ ನಡೆದಿವೆ. ಈವರೆಗೂ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಮೀಸಲಾತಿ ಕಾರಣಕ್ಕೆ ಶಿಕ್ಷಣ, ಉದ್ಯೋಗ ಸಿಗುತ್ತಿರುವಾಗಲೇ ನಮ್ಮ ಸಮುದಾಯ ಹಿಂದಕ್ಕೆ ಎಳೆಯುವಂತ ಒಳಮೀಸಲಾತಿ ಷಡ್ಯಂತ್ರ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಹಿರಂಗ ಸಭೆಗೂ ಮುನ್ನ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ವಿಜಯನಾಯ್ಕ, ನರಸಿಂಗನಾಯ್ಕ, ಚಂದ್ರುನಾಯ್ಕ, ಮಂಜುನಾಯ್ಕ, ವಿಜಯಲಕ್ಷ್ಮಿ, ರಮೇಶ್‌ನಾಯ್ಕ, ಸವಿತಾಬಾಯಿ, ಮಲ್ಲೇಶನಾಯ್ಕ, ಜಗದೀಶ್‌ನಾಯ್ಕ, ಲೋಹಿತ್‌ನಾಯ್ಕ, ಜಯನಾಯ್ಕ, ಸುರೇಶ್‌ನಾಯ್ಕ, ಹನುಮಂತನಾಯ್ಕ ಎಲ್ಲ ತಾಂಡಗಳ ಡಾವ್, ಕಾರಬಾರಿ, ಸಮಾಜದ ಮುಖಂಡರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.