ADVERTISEMENT

ಶಿಕಾರಿಪುರ: ಬಾಯಾರಿಕೆ ತಣಿಸಲು ಬರುತ್ತಿಗೆ ಜೆಜೆಎಂ ನೀರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:06 IST
Last Updated 7 ಆಗಸ್ಟ್ 2025, 7:06 IST
ಶಿಕಾರಿಪುರ ತಾಲ್ಲೂಕು ಕಲ್ಮನೆ ಗ್ರಾಮದ ಸಮೀಪ ಬಹುಗ್ರಾಮ ಕುಡಿಯುವ ನೀರು ಯೋಜನೆಯ ನಿರ್ಮಾಣ ಹಂತದಲ್ಲಿರುವ ಮೇಲುಸ್ತರದ ನೀರಿನ ಟ್ಯಾಂಕ್
ಶಿಕಾರಿಪುರ ತಾಲ್ಲೂಕು ಕಲ್ಮನೆ ಗ್ರಾಮದ ಸಮೀಪ ಬಹುಗ್ರಾಮ ಕುಡಿಯುವ ನೀರು ಯೋಜನೆಯ ನಿರ್ಮಾಣ ಹಂತದಲ್ಲಿರುವ ಮೇಲುಸ್ತರದ ನೀರಿನ ಟ್ಯಾಂಕ್   

ಶಿಕಾರಿಪುರ: ಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಹೊಸ ಕೊಳವೆಬಾವಿ ಕೊರೆಯಿಸುವುದು ತಾಲ್ಲೂಕಿನಲ್ಲಿ ಸಾಮಾನ್ಯವಾಗಿತ್ತು. ಮುಕ್ತಾಯ ಹಂತಕ್ಕೆ ತಲುಪಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಕೊಳವೆಬಾವಿ ಕೊರೆಯಿಸುವ ಗೋಜು ಇನ್ನುಮುಂದೆ ಇರುವುದಿಲ್ಲ.

ಜಲಜೀವನ್ ಮಿಷನ್‌ ಯೋಜನೆ ಅಡಿಯಲ್ಲಿ ಅಂಜನಾಪುರ ಜಲಾಶಯದಿಂದ ತಾಲ್ಲೂಕಿನ 43 ಗ್ರಾಮ ಪಂಚಾಯಿತಿ ವ್ಯಾಪ್ತಿಯ 178 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯು 2024ರಲ್ಲಿ ಆರಂಭಗೊಂಡಿದೆ. ₹ 313 ಕೋಟಿ ವೆಚ್ಚದ ಈ ಯೋಜನೆ ಪೂರ್ಣಗೊಂಡರೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ಅಂಜನಾಪುರ ಜಲಾಶಯದಿಂದ ಈಗಾಗಲೇ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ವರ್ಷಕ್ಕೆ 0.29 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಬಹುಗ್ರಾಮ ಕುಡಿಯುವ ನೀರಿಗೆ 0.277 ಟಿಎಂಸಿ ಅಡಿ ನೀರು ಅಗತ್ಯವಿದೆ. ಜಲಾಶಯದ ನೀರಿನ ಸಾಮರ್ಥ್ಯ 1.82 ಟಿಎಂಸಿ ಅಡಿ ಇದ್ದು, ಅದರಲ್ಲಿ 0.43 ಟಿಎಂಸಿ ಅಡಿ ಡೆಡ್ ಸ್ಟೋರೆಜ್ ಆಗಿದ್ದು, ಅದನ್ನು ಬಳಸಿಕೊಂಡು ತಾಲ್ಲೂಕಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಅಲ್ಲದೆ ಕಳೆದ ವರ್ಷದಿಂದ ಅಂಜನಾಪುರ ಜಲಾಶಯಕ್ಕೆ ತುಂಗಾ ನೀರು ಪೂರೈಕೆಯಾಗುತ್ತಿದ್ದು, 0.40 ಟಿಎಂಸಿ ಅಡಿ ನೀರು ಒದಗಿಸುತ್ತದೆ.

ADVERTISEMENT

ನೀರು ಹಾದಿಯ ನೀಲನಕ್ಷೆ: ಅಂಜನಾಪುರ ಜಲಾಶಯದ ನೀರನ್ನು ಮೇಲಕ್ಕೆತ್ತಿ ಜಲಾಶಯದಿಂದ 1.9 ಕಿ.ಮೀ. ದೂರದ ಗುಡ್ಡಕ್ಕೆ ಸಾಗಿಸಲಾಗುವುದು. ಅಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಿ ಅಲ್ಲಿಂದ ಕಲ್ಮನೆ, ಚಿಕ್ಕಸಾಲೂರು, ಮಲ್ಲಾಪುರ, ಕೊಟ್ಟ, ಕೆಂಗಟ್ಟೆ, ದೋಣನಗುಡ್ಡೆ, ಕೌಲಿ ಗ್ರಾಮಗಳಲ್ಲಿ ನಿರ್ಮಿಸಲಿರುವ ಮೇಲುಸ್ತರದ ನೀರಿನ ಟ್ಯಾಂಕ್‌ಗೆ ಗುರುತ್ವಾಕರ್ಷಣೆ ಬಲದ ಮೇಲೆ ನೀರು ಹರಿಸಿ ಗ್ರಾಮದ ಸಣ್ಣ ಸಂಗ್ರಹ, ನಲ್ಲಿಗಳಿಗೆ ನೀರು ಒದಗಿಸಲಾಗುವುದು. ಇನ್ನುಳಿದ 14 ಗ್ರಾಮಕ್ಕೆ ಪಂಪ್ ಮೂಲಕ ಪುನಃ ನೀರನ್ನು ಮೇಲೆತ್ತಿ ಪೂರೈಕೆ ಮಾಡಲಾಗುವುದು.

ಯೋಜನೆ ಪ್ರಗತಿ: ‘ಯೋಜನೆಯಲ್ಲಿ ಒಟ್ಟು 18 ಮೇಲುಸ್ತರದ ಟ್ಯಾಂಕ್ ನಿರ್ಮಿಸಬೇಕಿದ್ದು, ಅದರಲ್ಲಿ 3 ಟ್ಯಾಂಕ್‌ಗಳ ಕಾಮಗಾರಿ ಪೂರ್ಣಗೊಂಡಿವೆ, 10ರ ಕಾಮಗಾರಿಪ್ರಗತಿಯಲ್ಲಿವೆ. ಪ್ರಸಕ್ತ ವರ್ಷ ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಗೊಳ್ಳುತ್ತವೆ. ಪೈಪ್‌ಲೈನ್ ಅಳವಡಿಕೆಯ ಶೇ 60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಳೆಗಾಲದ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದ್ದು ಆದಷ್ಟು ಬೇಗ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಜಲಸಂಪನ್ಮೂಲ ಇಲಾಖೆ ಎಇಇ ನಾಗೇಶ್ ಹೇಳಿದ್ದಾರೆ.

ಅರಣ್ಯ ಸಂಕಷ್ಟ: ಬಹುಗ್ರಾಮ ಕುಡಿಯುವ ನೀರು ಯೋಜನೆಯ ₹ 13.8 ಲಕ್ಷ ಲೀಟರ್ ಸಾಮರ್ಥ್ಯದ ಪ್ರಮುಖ ಶುದ್ಧೀಕರಣ ಘಟಕ ಕೊಪ್ಪದಕೆರೆ ಸಮೀಪ ನಿರ್ಮಾಣವಾಗಲಿದೆ. ಅಲ್ಲಿ 5ರಿಂದ 6 ಎಕರೆ ಭೂಮಿಯ ಅಗತ್ಯವಿದ್ದು, ಆ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಅಲ್ಲದೆ 5 ಮೇಲುಸ್ತರದ ನೀರಿನ ಟ್ಯಾಂಕ್‌ಗಳನ್ನೂ ಅರಣ್ಯ ಪ್ರದೇಶದಲ್ಲೇ ನಿರ್ಮಾಣ ಮಾಡಬೇಕಿದೆ. ಅರಣ್ಯ ಇಲಾಖೆಯಿಂದ ಭೂಮಿ ಪಡೆಯುವುದಕ್ಕಾಗಿ ಬದಲಿ ಭೂಮಿ ಗುರುತಿಸಿದ್ದು, ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಶಿಕಾರಿಪುರ ತಾಲ್ಲೂಕು ಕಲ್ಮನೆ ಗ್ರಾಮದ ಸಮೀಪ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಂಗ್ರಹಿಸಿರುವ ಪೈಪ್‌ಗಳು
ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಜಾರಿಯಲ್ಲಿದ್ದು ಬೇಗನೆ ಪೂರ್ಣಗೊಳ್ಳಲಿ
ಶಶಿಧರ ಚುರ್ಚಿಗುಂಡಿ ಟಿಎಪಿಸಿಎಂಎಸ್ ನಿರ್ದೇಶಕ
ಜಲಜೀವನ್ ಮಿಷನ್ ಯೋಜನೆ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ 
ಬಿ.ವೈ. ರಾಘವೇಂದ್ರ ಸಂಸದ

ಜಲಜೀವನ್ ಮಿಷನ್ ಅಡಿಯಲ್ಲಿ ಯೋಜನೆ

ಜಲಜೀವನ್ ಮಿಷನ್ ಅಡಿಯಲ್ಲಿ ಯೋಜನೆ ಜಾರಿಗೊಳ್ಳುತ್ತಿದ್ದು ಅದಕ್ಕೆ ಶೇ 50ರಷ್ಟು ರಾಜ್ಯ ಶೇ 50ರಷ್ಟು ಕೇಂದ್ರ ಸರ್ಕಾರಗಳು ಅನುದಾನ ನೀಡಲಿವೆ. ಯೋಜನೆ ಅಡಿ ಜಿಲ್ಲೆಗೆ ಒದಗಿಸಿದ್ದ 2023ರ ಅನುದಾನ ವಾಪಸ್ ಹೋಗುವ ಹಂತದಲ್ಲಿದ್ದಾಗ ರಾಜ್ಯ ಸರ್ಕಾರ ಯೋಜನೆ ರೂಪಿಸಿ ಮಂಜೂರಾತಿ ನೀಡಿತ್ತು. ಭೂಮಿ ಹಸ್ತಾಂತರ ಆಗದ ಕಾರಣಕ್ಕೆ ಯೋಜನೆ ಆರಂಭಗೊಂಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.