
ತೀರ್ಥಹಳ್ಳಿ: ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಇಲ್ಲಿನ ತುಂಗಾ ನದಿಯ ಮಧ್ಯೆ ಇರುವ ರಾಮಕೊಂಡದಲ್ಲಿ ಸಾವಿರಾರು ಭಕ್ತರು ಶುಕ್ರವಾರ ಮುಂಜಾನೆ ನಸುಕಿನಿಂದಲೇ ತೀರ್ಥಸ್ನಾನ ಮಾಡಿದರು.
ಮಾರ್ಗಶಿರ ಬಹುಳ ಅಮಾವಾಸ್ಯೆಯ ಮುಂಜಾನೆಯ ಪರ್ವಕಾಲದ ಸ್ನಾನಕ್ಕೆ ಅನೇಕ ಪೌರಾಣಿಕ ಹಿನ್ನೆಲೆಯಿದೆ. ಅದರಂತೆ ತುಂಗಾ ನದಿಯಲ್ಲಿ ಚಕ್ರತೀರ್ಥ, ಶಂಖತೀರ್ಥ, ಗಧಾತೀರ್ಥ ಹಾಗೂ ಪದ್ಮತೀರ್ಥ ಎಂಬ ನಾಲ್ಕು ತೀರ್ಥಗಳ ಸಂಗಮವಿದೆ. ಇಲ್ಲಿಯ ತೀರ್ಥಸ್ನಾನ ಅತ್ಯಂತ ಪವಿತ್ರ ಮತ್ತು ಪಾಪ ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದಲ್ಲಿದೆ.
ಎಳ್ಳಮಾವಾಸ್ಯೆಯ ಬೆಳಗಿನ ಜಾವ ರಾಮೇಶ್ವರ ದೇವರ ಉತ್ಸವ ಮೂರ್ತಿಗೆ ಪೂಜೆ ಹಾಗೂ ರಾಮಕೊಂಡದಲ್ಲಿ ಪುಣ್ಯಸ್ನಾನ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ನಂತರ ಭಕ್ತರು ತೀರ್ಥಸ್ನಾನ ಮಾಡಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ತೆಪ್ಪೋತ್ಸವ ಆಚರಣಾ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಟಿ.ಎಲ್.ಸುಂದರೇಶ್, ತಹಶೀಲ್ದಾರ್ ರಂಜಿತ್ ಎಸ್. ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾತ್ರಿ ತುಂಗಾ ನದಿ ದಂಡೆಯ ಮೇಲೆ ಉದಯಕುಮಾರ್ ಶೆಟ್ಟಿ ತಂಡದಿಂದ ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಿತು. ಡಿಸೆಂಬರ್ 20ರಂದು ರಥೋತ್ಸವ, ಆರ್.ಜಿ. ಫಿಟ್ನೆಸ್ ಕ್ಲಬ್ ವತಿಯಿಂದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.
ವಿವಿಧೆಡೆ ಜಾತ್ರೆ
ಮಂಡಗದ್ದೆಯಲ್ಲಿ ಸೋಮವಾರ ಗುತ್ಯಮ್ಮ ಮತ್ತು ದುರ್ಗಮ್ಮ ಗ್ರಾಮದೇವತೆಗಳ ಜಾತ್ರೆ, ಬಾಳಗಾರಿನಲ್ಲಿ ಶ್ರೀರಾಮೇಶ್ವರ ದೇವರ ಜಾತ್ರೆ, ಕನ್ನಂಗಿ ಸಮೀಪದ ಕುಟ್ಲುಗಾರಿನಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.