ADVERTISEMENT

ಹಿಂದುಳಿದ ಸಮುದಾಯಗಳಿಗೆ ಶೇ 75ರಷ್ಟು ಮೀಸಲಾತಿಗೆ ಒತ್ತಾಯ: ಸಂತೋಷ್ ಲಾಡ್

ಬಂಗಾರಧಾಮದಲ್ಲಿ ‘ಬಂಗಾರ‘ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್ ಅವರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್ ಅವರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಶಿವಮೊಗ್ಗ: ‘ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯ ವರದಿ ಆಧರಿಸಿ ಹಿಂದುಳಿದ ವರ್ಗಗಳ ಎಲ್ಲ ಜಾತಿ ಸಮುದಾಯಗಳಿಗೂ ರಾಜ್ಯದಲ್ಲಿ ಶೇ 75ರಷ್ಟು ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಿದ್ದೇವೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಲ್ಲಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಎಸ್.ಬಂಗಾರಪ್ಪ ಫೌಂಡೇಷನ್ ಹಾಗೂ ಎಸ್.ಬಂಗಾರಪ್ಪ ವಿಚಾರ ವೇದಿಕೆಯಿಂದ ಸೊರಬದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮಿಳುನಾಡಿನಲ್ಲಿ ಈಗಾಗಲೇ ಹಿಂದುಳಿದ ವರ್ಗದವರಿಗೆ ಶೇ 69ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಆಶಯದಲ್ಲಿ ಅದೇ ಮಾದರಿಯನ್ನು ಇಲ್ಲಿಯೂ ಅಳವಡಿಸಬೇಕು. ಸುಪ್ರೀಂ ಕೋರ್ಟ್ ಆದೇಶವೂ ಇದಕ್ಕೆ ಪೂರಕವಾಗಿದೆ. ಇದೇ ವೇದಿಕೆಯ ಮೂಲಕ ಮುಖ್ಯಮಂತ್ರಿಗಳಿಗೆ ಈ ಕುರಿತ ಒತ್ತಾಯ ಮಾಡಲಿದ್ದೇವೆ’ ಎಂದರು.

ADVERTISEMENT

ಉಳುವವನೇ ಭೂಮಿಯ ಒಡೆಯ ಕಾಯ್ದೆಯ ಮೂಲಕ ದೇವರಾಜ ಅರಸು ರಾಜ್ಯದ ಜನರಿಗೆ ಭೂಮಿ ಹಂಚಿಕೆ ಮಾಡಿದರೆ, ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿ ರೈತರಿಗೆ ಬಂಗಾರಪ್ಪ ಅವರು ನೆರವಾದರು ಎಂದು ಲಾಡ್ ಸ್ಮರಿಸಿದರು.

ಬಡವರು, ರೈತರ ಪರ ಇದ್ದ ನಾಯಕ ಬಂಗಾರಪ್ಪ. ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸದಂತೆ ಒತ್ತಡ ಹೇರಲು ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಬಳಿಗೆ 23 ಶಾಸಕರ ನಿಯೋಗ ಕೊಂಡೊಯ್ದಿದ್ದೆ. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

‘ತೆಲುಗು ಮಾತಾಡುತ್ತಿದ್ದ ಕಾರಣಕ್ಕೆ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರೊಂದಿಗೆ ನನಗೆ ವಿಶೇಷ ಸಲುಗೆ ಇತ್ತು. ಅದನ್ನು ಬಳಸಿಕೊಂಡು ಬಂಗಾರಪ್ಪ ಅವರನ್ನು ಯಾವುದೇ ಕಾರಣಕ್ಕೂ ಆ ಸ್ಥಾನದಿಂದ ತೆಗೆಯದಂತೆ ಒತ್ತಡ ಹಾಕಿದ್ದೆನು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಾಮಾನ್ಯ ತಾಲ್ಲೂಕು ಬೋರ್ಡ್ ಮೆಂಬರ್ ಆಗಿದ್ದವ ನಾನು. ರಾಜೀವ್ ಗಾಂಧಿಗೆ ಮಾತುಕೊಟ್ಟಿದ್ದೇನೆ ಎಂದು ನನ್ನಪರ ಪ್ರಚಾರ ಮಾಡಿ ಗೆಲ್ಲಿಸಿದರು. ಅವರ ಋಣ ನನ್ನ ಮೇಲಿದೆ’‌ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ, ಮೈಸೂರಿನ ಕಾಳೇಗೌಡ ನಾಗವಾರ, ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಪರವಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್.ರೇವಣಸಿದ್ದಯ್ಯ, ಬೆಳಗಾವಿಯ ಚೌಡಿಕೆ ಕಲಾವಿದೆ ರಾಧಾಬಾಯಿ ಮಾದರ್ ಹಾಗೂ ಕಲಬುರ್ಗಿಯ ರಂಗಕಲಾವಿದ ಜೇವರ್ಗಿ ರಾಜಣ್ಣ ಅವರಿಗೆ ‘ಬಂಗಾರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಸಚಿವ ಮಧು ಎಸ್.ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್ ಕುಮಾರ್, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಸಂಸದರಾದ ಆಯನೂರು ಮಂಜುನಾಥ್, ಚಂದ್ರಪ್ಪ, ಬಂಗಾರಪ್ಪ ವಿಚಾರ ವೇದಿಕೆಯ ವೇಣುಗೋಪಾಲ್ ನಾಯಕ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಇದ್ದರು.

ಮಾತನ್ನು ಕೃತಿಯಲ್ಲಿ ತಂದವರು ಬಂಗಾರಪ್ಪ. ಪೊಲೀಸರೊಂದಿಗೆ ಊಟ ಹಂಚಿಕೊಳ್ಳುತ್ತಿದ್ದರು. ಪೊಲೀಸರ ಕೆಲಸದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನೇರವಾಗಿ ಹೇಳುತ್ತಿದ್ದರು
-ಎಲ್.ರೇವಣಸಿದ್ದಯ್ಯ, ನಿವೃತ್ತ ಡಿಜಿಪಿ
ಕಲಬುರ್ಗಿಯ ರಂಗಕಲಾವಿದ ಜೇವರ್ಗಿ ರಾಜಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಸಾಹಿತಿ ಮೈಸೂರಿನ ಕಾಳೇಗೌಡ ನಾಗವಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೆಂಗಳೂರಿನ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಪರವಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್.ರೇವಣಸಿದ್ದಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.