ADVERTISEMENT

ಶಿಕಾರಿಪುರ: ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಕೆಎಸ್‌ಆರ್‌ಟಿಸಿ ಬಸ್ ಡಿಪೊ

ನಾಲ್ಕುವರೆ ಎಕರೆ ಪ್ರದೇಶದಲ್ಲಿ ತಲೆಎತ್ತಿದ ಕೆಎಸ್‌ಆರ್‌ಟಿಸಿ ಕಟ್ಟಡ

ಎಚ್.ಎಸ್.ರಘು
Published 9 ನವೆಂಬರ್ 2022, 7:15 IST
Last Updated 9 ನವೆಂಬರ್ 2022, 7:15 IST
ಶಿಕಾರಿಪುರ ಪಟ್ಟಣ ಸಮೀಪದ ಕುಟ್ರಳ್ಳಿ ಪ್ರದೇಶದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದಗೊಂಡಿರುವ ಕೆಎಸ್ ಆರ್ ಟಿಸಿ ಬಸ್ ಡಿಪೊ ದೃಶ್ಯ.
ಶಿಕಾರಿಪುರ ಪಟ್ಟಣ ಸಮೀಪದ ಕುಟ್ರಳ್ಳಿ ಪ್ರದೇಶದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದಗೊಂಡಿರುವ ಕೆಎಸ್ ಆರ್ ಟಿಸಿ ಬಸ್ ಡಿಪೊ ದೃಶ್ಯ.   

ಶಿಕಾರಿಪುರ: ತಾಲ್ಲೂಕಿನ ಜನತೆಯ ಹಲವು ವರ್ಷಗಳ ಬೇಡಿಕೆಯಾದ ಕೆಎಸ್‌ಆರ್‌ಟಿಸಿ ಬಸ್ ಡಿಪೊ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ.

ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಖಾಸಗಿ ಬಸ್‌ಗಳು ಹೆಚ್ಚು ಸೇವೆ ನೀಡುತ್ತಿವೆ. ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಪಟ್ಟಣಕ್ಕೆ ಬರಲು ಹಾಗೂ ಹಿರಿಯ ನಾಗರಿಕರು ಸೌಲಭ್ಯ ಪಡೆಯಲು ಕೆಎಸ್‌ಆರ್‌ಟಿಸಿ ಬಸ್ ತಾಲ್ಲೂಕಿನಲ್ಲಿ ಸಂಚರಿಸಬೇಕು ಹಾಗೂ ಡಿಪೊ ನಿರ್ಮಾಣವಾಗಬೇಕು ಎಂಬುದು ತಾಲ್ಲೂಕಿನ ಜನತೆಯ ಆಶಯವಾಗಿತ್ತು.

ತಡರಾತ್ರಿ ಬೇರೆ ಪಟ್ಟಣಗಳಿಂದ ಶಿಕಾರಿಪುರಕ್ಕೆ ಬರಲು ಹಾಗೂ ಶಿಕಾರಿಪುರದಿಂದ ಹೊನ್ನಾಳಿ, ಮಾಸೂರು, ಸಾಗರ, ಶಿರಾಳಕೊಪ್ಪ, ಶಿವಮೊಗ್ಗ ಸೇರಿ ಗ್ರಾಮಾಂತರ ಪ್ರದೇಶಕ್ಕೆ ತೆರಳಲು ಸಮರ್ಪಕವಾಗಿ ಬಸ್ ಸಂಪರ್ಕವಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಬಸ್ ಡಿಪೊ ನಿರ್ಮಾಣವಾದರೆ ಬಸ್‌ಗಳ ಸಂಚಾರ ಸಮರ್ಪಕವಾಗಿ ಆಗಲಿದೆ ಎಂಬ ನಿರೀಕ್ಷೆಯನ್ನು ತಾಲ್ಲೂಕಿನ ಜನತೆ ಹೊಂದಿದ್ದಾರೆ.

ADVERTISEMENT

ಈ ಬೇಡಿಕೆ ಮುಂದಿಟ್ಟುಕೊಂಡು ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣದಲ್ಲಿ ಸಾರ್ವಜನಿಕರು ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದ್ದರು.

ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಶಿರಾಳಕೊಪ್ಪ ರಸ್ತೆಯ ಕುಟ್ರಳ್ಳಿ ಪ್ರದೇಶದಲ್ಲಿ ಸುಮಾರು ನಾಲ್ಕುವರೆ ಎಕರೆ ಪ್ರದೇಶದಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಡಿಪೊ ನಿರ್ಮಾಣವಾಗಿದೆ. ಜತೆಗೆ ಪಟ್ಟಣದ ಹಳೇ ಸಂತೆಮೈದಾನದ ಪಕ್ಕ ಸುಮಾರು ₹3 ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.