ADVERTISEMENT

ಶಿವಮೊಗ್ಗ | ಹುಲಿರಾಯ ಸಿಗಲಿಲ್ಲ; ಸಿಕ್ಕಿದ್ದು ಹೆಜ್ಜೆ ಜಾಡು, ಮಲ!

ಶಿವಮೊಗ್ಗ ಜಿಲ್ಲೆಯಲ್ಲಿ ಹುಲಿ ಗಣತಿ ಪೂರ್ಣ

ವೆಂಕಟೇಶ ಜಿ.ಎಚ್.
Published 12 ಜನವರಿ 2026, 7:23 IST
Last Updated 12 ಜನವರಿ 2026, 7:23 IST
ಹುಲಿ ಗಣತಿಯ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ 
ಹುಲಿ ಗಣತಿಯ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ    

ಶಿವಮೊಗ್ಗ: ಹುಲಿ ಸಮೀಕ್ಷೆಯ ಮೊದಲ ಹಂತ ಜಿಲ್ಲೆಯಲ್ಲಿ ಬುಧವಾರ ಮುಕ್ತಾಯವಾಯಿತು.‌ ಈ ವೇಳೆ ಹುಲಿರಾಯ ಕಾಣಸಿಗಲಿಲ್ಲ. ಬದಲಿಗೆ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾರ್ಗಲ್ ಬಳಿ ಹುಲಿಯ ಹೆಜ್ಜೆ ಹಾಗೂ ಹಿಕ್ಕೆ (ಮಲ) ದೊರೆತಿದೆ. ಆದರೆ ಬಹುತೇಕ ಎಲ್ಲ ಕಡೆ ಚಿರತೆಗಳು ಹೆಚ್ಚು ಕಾಣಸಿಕ್ಕಿವೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ನೇತೃತ್ವದಲ್ಲಿ ಹುಲಿ ಸಮೀಕ್ಷೆ ಆರಂಭವಾಗಿದೆ. ಈ ಬಾರಿ ಸ್ವಯಂಸೇವಕರ ನೆರವಿಲ್ಲದೆ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ 130 ಸಿಬ್ಬಂದಿ ಸಮೀಕ್ಷಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಸೈನ್ ಸರ್ವೆ ಜ.5ರಿಂದ 7ರವರೆಗೆ ನಡೆದಿದೆ. ಈ ಅವಧಿಯಲ್ಲಿ ಕಾಲ್ನಡಿಗೆ ಮೂಲಕ ಸಮೀಕ್ಷೆ ನಡೆಸಲಾಗಿದೆ. ‌ವನ್ಯಜೀವಿಗಳ ಜಾಡು ಹಾಗೂ ಸಸ್ಯ ವೈವಿಧ್ಯತೆಯ ಬಗ್ಗೆ ಮಾಹಿತಿ ದಾಖಲಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದ 395 ಚದರ ಕಿ.ಮೀ ಹಾಗೂ ಶರಾವತಿ ಅಭಯಾರಣ್ಯದ ವ್ಯಾಪ್ತಿಯ 440 ಚದರ ಕಿ.ಮೀ ಪ್ರದೇಶದ ಪ್ರತೀ ಅರಣ್ಯ ಬೀಟ್‌ನಲ್ಲಿ ಹುಲಿ ಗಣತಿಯ ಮೊದಲ ಹಂತ ನಡೆಯಿತು. ಕೋರ್ ಅರಣ್ಯ ಪ್ರದೇಶಗಳಲ್ಲಿ ಹುಲಿಗಳ ಸಂಚಾರ, ಉಗುರು, ಕೂದಲು ಪತ್ತೆ ಹಾಗೂ ಕುರುಹು ಸಂಗ್ರಹಿಸುವ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಹುಲಿ ಹೊರತುಪಡಿಸಿ ಕಿರುಬ, ಕರಡಿ, ಆನೆ, ಚಿರತೆ ಸೇರಿ ಮಾಂಸಾಹಾರಿ ಪ್ರಾಣಿಗಳ ಪತ್ತೆ ಕಾರ್ಯದ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಸಿಬ್ಬಂದಿ ಮುಂಜಾನೆಯಿಂದ ಸಂಜೆಯವರೆಗೆ ಪ್ರಾಣಿಗಳ ಜಾಡು ದಾಖಲಿಸುತ್ತಿದ್ದಾರೆ.

ADVERTISEMENT

‘ಎರಡನೇ ಹಂತದಲ್ಲಿ ಪ್ರತೀ ಬೀಟ್‌ನಲ್ಲಿ ಟ್ರಾನ್ಸಿಟ್‌ ಸರ್ವೆ ನಡೆಯಲಿದೆ. ಈ ಹಂತದಲ್ಲಿ ಸಸ್ಯಾಹಾರಿ ಪ್ರಭೇದಗಳ ಸಂಖ್ಯೆ, ಅವುಗಳ ಸಂಚಾರದ ದಿಕ್ಕು, ಸಸ್ಯ ಸಂಕುಲ, ಕಾಡಿನ ನಮೂನೆಯ ಮಾಹಿತಿ ಸಂಗ್ರಹಿಸಲಾಗುತ್ತದೆ. 2 ಕಿ.ಮೀ ನೇರ ಮಾರ್ಗ ಗುರುತಿಸಿಕೊಂಡು ಅದರ ವ್ಯಾಪ್ತಿಯ ಪ್ರದೇಶಗಳಲ್ಲಿ ಆಯಾ ದಿನದ ಪ್ರಾಣಿ ಸಂಚಾರದ ಮಾಹಿತಿ ದಾಖಲಿಸಿಕೊಳ್ಳಲಾಗುವುದು. 3ನೇ ಹಂತದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಮೂಲಕ ಹುಲಿ ಸಮೀಕ್ಷೆ ಪೂರ್ಣಗೊಳಿಸಲಾಗುತ್ತದೆ’ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ತಿಳಿಸಿದರು. 

‘ಹುಲಿ ಗಣತಿ ವೇಳೆ ಎನ್‌ಟಿಸಿಎ ಮಾರ್ಗಸೂಚಿಯಂತೆ ಮಾಹಿತಿ ದಾಖಲಿಸಲಾಗುತ್ತಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಎಂ ಸ್ಟ್ರೈಪ್ಸ್’ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಕಿರು ತಂತ್ರಾಂಶದ ಮೂಲಕ ದತ್ತಾಂಶ ಅಪ್ಲೋಡ್ ಮಾಡಲಾಗಿದೆ. ಈ ಕಾರ್ಯದಲ್ಲಿ ತರಬೇತಿ ಪಡೆದ ನೌಕರರು ಇದ್ದು, ಖಚಿತ ಮಾಹಿತಿ ಲಭ್ಯವಾಗಲಿದೆ’ ಎಂದರು.

‘ಮೊದಲ ಹಂತದಲ್ಲಿ ಮಾಂಸಾಹಾರಿ ಪ್ರಾಣಿಗಳ ಚಲನವಲನಗಳ ಮಾಹಿತಿ ಸಂಗ್ರಹಿಸಲಾಗಿದೆ. ಜೊತೆಗೆ ವ್ಯಾಘ್ರಗಳ ಹೆಜ್ಜೆ ಗುರುತು, ಮರಗಳ ಮೇಲೆ ಪರಚಿದ ಉಗುರು ಗುರುತು ಸೇರಿದಂತೆ ಹುಲಿಗಳ ಸಂಚಾರ ಮಾಹಿತಿ ಆ್ಯಪ್‌ನಲ್ಲಿ ದಾಖಲಿಸಲಾಗಿದೆ. ಅರಣ್ಯ ಸಿಬ್ಬಂದಿ ನಸುಕಿನಿಂದ ಕಣ್ಗಾವಲಿನಲ್ಲಿದ್ದು ಕನಿಷ್ಠ 5 ಕಿ.ಮೀ ಸಂಚರಿಸಿ ಮಾಹಿತಿ ಕಲೆ ಹಾಕಿದ್ದಾರೆ. ಈಗ ಮಾಗಿಯ ಹೊತ್ತು. ಮಂಜು ಬೀಳುವುದರಿಂದ ವನ್ಯ ಜೀವಿಗಳ ಗೋಚರತೆ ಕಡಿಮೆ ಇರುತ್ತದೆ. ಇಂತಹ ಸಮಯದಲ್ಲಿ ಎಚ್ಚರಿಕೆಯಿಂದ ಸಮೀಕ್ಷೆ ನಡೆಸಬೇಕು’ ಎಂದು ಹೇಳಿದರು.

ಸಮೀಕ್ಷೆ ಕಾರ್ಯದ ವೇಳೆ ಕಾಣಸಿಕ್ಕ ಹುಲಿಯ ಜಾಡು
2ನೇ ಹಂತದ ಸಮೀಕ್ಷೆಗೆ ಕಂಪಾಸ್‌ ಸೇರಿದಂತೆ ಅಗತ್ಯ ಉಪಕರಣ ಬೇಕಿವೆ. ಹೀಗಾಗಿ ಸಮೀಕ್ಷೆ ಮುಂದೂಡಿದ್ದು ಫೆ.9ರಿಂದ 12ರವರೆಗೆ ನಡೆಯಲಿದೆ. ನಂತರ 3ನೇ ಹಂತದಲ್ಲಿ 25 ದಿನಗಳವರೆಗೆ ಕ್ಯಾಮೆರಾ ಟ್ರ್ಯಾಪ್ ನಡೆಯಲಿದೆ
–ಪ್ರಸನ್ನಕೃಷ್ಣ ಪಟಗಾರ, ಶಿವಮೊಗ್ಗ ವನ್ಯಜೀವಿ ವಲಯದ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.