ಕಾರು ನಜ್ಜುಗುಜ್ಜಾಗಿರುವ ದೃಶ್ಯ
ರಿಪ್ಪನ್ ಪೇಟೆ: ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಬಲೆನೊ ಕಾರು ಕೆರೆಗೆ ಉರುಳಿ ಬಿದ್ದಿದೆ.
ಅಪಘಾತದಲ್ಲಿ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಹುತ್ತದಿಂಬದ ನಿವಾಸಿ ಪಾರ್ವತಮ್ಮ (65) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು.
ಚಾಲಕ ಮಂಜುನಾಥ್ (21) ಹಾಗೂ ಅವರ ಸಹೋದರಿ ಅಕ್ಷತಾ (23) ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆಗೆ ಬಂದಿದ್ದ ಮಂಜುನಾಥ್ ಕುಟುಂಬ, ದೇವಿಯ ದರ್ಶನ ಪಡೆದು ಊರಿಗೆ ತೆರಳುವಾಗ ಸಾಗರ-ಹೊಸನಗರ ರಾಜ್ಯ ಹೆದ್ದಾರಿ ಪಕ್ಕದ ಚಿಪ್ಪಿಗೆರೆ ಕೆರೆಗೆ ಕಾರು ಉರುಳಿ ಬಿದ್ದಿದೆ. ಈ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಸ್ಥಳೀಯ ಯುವಕರಾದ ಗವಟೂರಿನ ಗಿರೀಶ್ ಹಾಗೂ ಇಮ್ರಾನ್ ನೀರಿಗೆ ಧುಮಿಕಿ ಇಬ್ಬರನ್ನು ರಕ್ಷಿಸಿದ್ದಾರೆ.
ವೇಗವಾಗಿ ಬಂದ ಕಾರು ತಡೆಗೋಡೆ ಇಲ್ಲದ ಕೆರೆಗೆ ಉರುಳಿ ಬೀಳುವ ದೃಶ್ಯ ಸಮೀಪದ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.