ADVERTISEMENT

ಶಿವಮೊಗ್ಗ | ಉರ್ದು ಅಕಾಡೆಮಿಗೆ ಅನುದಾನ ಹೆಚ್ಚಿಸಿ: ಮೊಹಮ್ಮದ್ ಆಲಿ ಖಾಜಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:43 IST
Last Updated 15 ಫೆಬ್ರುವರಿ 2026, 3:43 IST
<div class="paragraphs"><p>ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆದ ‘ಅಫ್ಸಾನಾ-ಸಮತ್ ಔರ್ ರಫ್ತಾ’ ಕಾರ್ಯಾಗಾರವನ್ನು ಮೌಲಾನಾ ಮುಫ್ತಿ ಮೊಹಮ್ಮದ್ ಆಲಿ ಖಾಜಿ ಉದ್ಘಾಟಿಸಿದರು</p></div>

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ನಡೆದ ‘ಅಫ್ಸಾನಾ-ಸಮತ್ ಔರ್ ರಫ್ತಾ’ ಕಾರ್ಯಾಗಾರವನ್ನು ಮೌಲಾನಾ ಮುಫ್ತಿ ಮೊಹಮ್ಮದ್ ಆಲಿ ಖಾಜಿ ಉದ್ಘಾಟಿಸಿದರು

   

ಶಿವಮೊಗ್ಗ: ‘ರಾಜ್ಯ ಸರ್ಕಾರ ಉರ್ದು ಅಕಾಡೆಮಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು. ಇದರಿಂದ ಅಕಾಡೆಮಿಯ ಘನತೆ ಹಾಗೂ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮುಫ್ತಿ ಮೊಹಮ್ಮದ್ ಆಲಿ ಖಾಜಿ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ಉರ್ದು ಅಕಾಡೆಮಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಅಫ್ಸಾನಾ-ಸಮತ್ ಔರ್ ರಫ್ತಾ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಉರ್ದು ಭಾರತದಲ್ಲಿ ಪ್ರಮುಖ ಭಾಷೆಯಾಗಿದ್ದು, ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ. ಆದರೆ ಕೆಲವರು ಅಕಾಡೆಮಿಯ ಬಗ್ಗೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಅಕಾಡೆಮಿ ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳಡಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಬರಹಗಾರರು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಉರ್ದು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ. ಉರ್ದು ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ–ಉರ್ದು ಭಾಷೆಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕನ್ನಡದ ಶ್ರೇಷ್ಠ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸುವ ಯೋಜನೆಯಿದೆ. ಇದಕ್ಕೆ ಸರ್ಕಾರದ ಬೆಂಬಲ ಅಗತ್ಯವೆಂದು ಹೇಳಿದರು. ಜ್ಞಾನವು ಸಾಹಿತ್ಯ ಮತ್ತು ಶಿಷ್ಟಾಚಾರದೊಂದಿಗೆ ಕೂಡಿರಬೇಕು. ವ್ಯಕ್ತಿಯ ಪರಿಚಯ ಕೇವಲ ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಸಂಸ್ಕಾರದಿಂದಲೂ ನಿರ್ಧಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ಬಜೆಟ್‌ನಲ್ಲಿ ಹೈಯರ್ ಉರ್ದು ಲರ್ನಿಂಗ್ ಸೆಂಟರ್ ಸ್ಥಾಪನೆಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಉರ್ದು ಸಾಹಿತ್ಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಸಮಸ್ಯೆಗಳಿದ್ದರೆ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಉರ್ದು ಅಕಾಡೆಮಿ ಅಧ್ಯಕ್ಷ ಡಾ. ಹಾಫೀಜ್ ಕರ್ನಾಟಕಿ ಮಾತನಾಡಿದರು. ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಅಹಮದ್, ನಿವೃತ್ತ ಪ್ರಾಂಶುಪಾಲ ಪ್ರೊ. ಡಾ. ಸೈಯದ್ ಸನಾವುಲ್ಲಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಡಾ. ಸೈಯದ್ ಸಜ್ಜದ್ ಹುಸೇನ್, ಪ್ರೊ. ಎಸ್. ಮೊಹಮ್ಮದ್ ಯಾಸಿರ್, ಪ್ರೊ. ರಿಯಾಜ್ ಮೆಹಮೂದ್, ಪ್ರೊ. ಶಫೀವುಲ್ಲಾ, ಮುದಾಸೀರ್ ಅಹಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಉರ್ದು ಅಕಾಡೆಮಿ ಸದಸ್ಯ ಡಾ. ದಾವೂದ್ ಮೌಸಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಬಿನಾ ತಲಾತ್ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಕಾರ್ಯಾಗಾರದಲ್ಲಿ ಹಲವು ಗೋಷ್ಠಿಗಳು ಜರುಗಿದವು. ಪ್ರಮುಖ ಕಥೆಗಾರರು, ಲೇಖಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ವಿಮರ್ಶಕರು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.