ADVERTISEMENT

ವಾರಂಬಳ್ಳಿ ನೆಟ್ವರ್ಕ್‌ ಸಮಸ್ಯೆ: ಪಾದಯಾತ್ರೆಗೆ ಗ್ರಾಮಸ್ಥರು ಸಜ್ಜು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:19 IST
Last Updated 10 ಏಪ್ರಿಲ್ 2025, 14:19 IST
ಹೊಸನಗರ ತಾಲ್ಲೂಕು ವಾರಂಬಳ್ಳಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು
ಹೊಸನಗರ ತಾಲ್ಲೂಕು ವಾರಂಬಳ್ಳಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು   

ಹೊಸನಗರ: ಗ್ರಾಮದಲ್ಲಿ ನೆಟ್ವರ್ಕ್ ಸಮರ್ಪಕವಾಗಿ ಸಿಗದ್ದನ್ನು ಖಂಡಿಸಿ ತಾಲ್ಲೂಕಿನ ವಾರಂಬಳ್ಳಿಯಿಂದ ಹೊಸನಗರದವರೆ ಏ.17ರಂದು ಪಾದಯಾತ್ರೆ ನಡೆಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು.

ತಾಲ್ಲೂಕಿನ ವಾರಂಬಳ್ಳಿ ಸಮುದಾಯ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾದಯಾತ್ರೆ ನಡೆಸುವ ತೀರ್ಮಾನವನ್ನು ಗ್ರಾಮಸ್ಥರು ಕೈಗೊಂಡರು.

ವಾರಂಬಳ್ಳಿ ಸುತ್ತಮುತ್ತಲಿನ ಪ್ರದೇಶಗಳ ದೂರವಾಣಿ ಸಮಸ್ಯೆ ಕುರಿತು ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಪ್ರಧಾನಿ ಅವರಿಗೂ ದೂರು ನೀಡಲಾಗಿದೆ. ನಮ್ಮ ಈ ಹೋರಾಟಕ್ಕೆ 8 ವರ್ಷ ಸಂದಿವೆ. ಆದರೂ ನೆಟ್ವರ್ಕ್ ಸಮಸ್ಯೆ ಬಗೆಹರಿದಿಲ್ಲ ಎಂದು ನೆಟ್ವರ್ಕ್ ಹೋರಾಟ ಸಮಿತಿ ಅಧ್ಯಕ್ಷ ಮೇಲನೂರು ಶ್ರೀನಿವಾಸ್ ತಿಳಿಸಿದರು.

ADVERTISEMENT

17ರಂದು ವಾರಂಬಳ್ಳಿಯಿಂದ ಹೊಸನಗರ ತಾಲ್ಲೂಕು ಕಚೇರಿವರೆಗೆ 10 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಏ.28ರಂದು ವಿದ್ಯಾರ್ಥಿಗಳ ಜತೆಗೂಡಿ ಸಂಸದರ ಮನೆವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ನೆಟ್ವರ್ಕ್ ಸಮಸ್ಯೆಯಿಂದ ಈಗಾಗಲೇ ಹಲವಾರು ಸಾವು ನೋವುಗಳನ್ನು ನಮ್ಮೂರು ಕಂಡಿವೆ. ಎಷ್ಟೋ ಹೆಣ್ಣು ಮಕ್ಕಳು ಕೆಲಸ ಮಾಡಲು ನೆಟ್ವರ್ಕ್ ಸಿಗುವ ಗುಡ್ಡದ ಮೇಲೆ ಹೋಗಿ ಕೆಲಸ ಮಾಡುತ್ತಾರೆ. ಆ ಹೆಣ್ಣು ಮಕ್ಕಳಿಗೆ ರಕ್ಷಣೆ ಯಾರು ಕೊಡುತ್ತಾರೆ? ರಾಜಕಾರಣಿಗಳು ಪ್ರತಿ ಸಲ ಚುನಾವಣೆ ಬಂದಾಗಲೂ ಸುಳ್ಳು ಆಶ್ವಾಸನೆ ನೀಡಿ ತೆರಳುತ್ತಾರೆ. ಹೀಗಾಗಿ ಈ ಹೋರಾಟ ಅನಿವಾರ್ಯ ಎಂದು ಸಮಿತಿಯ ಕಾರ್ಯದರ್ಶಿ ಹರೀಶ್ ವಿ. ಟಿ. ನಾಯ್ಕ ತಿಳಿಸಿದರು.

ಪ್ರಧಾನಿಯ ಪತ್ರಕ್ಕೂ ಕಿಮ್ಮತಿಲ್ಲ: ನೆಟ್ವರ್ಕ್ ಸಮಸ್ಯೆ ಕುರಿತು ಸಂಬಂಧ ಪಟ್ಟ ಇಲಾಖೆಗೆ ಇದುವರೆಗೆ 15 ಬಾರಿ ಪತ್ರ ಬರೆಯಲಾಗಿದೆ. ಆದರೂ ನಮ್ಮ ಸಮಸ್ಯೆ ಹಾಗೆ ಇದೆ. ಯಾವ ಅಧಿಕಾರಿಗಳು ನಮ್ಮತ್ತ ಸುಳಿಯುತ್ತಿಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನಕ್ಕೆ ತರಲಾಗಿದೆ ಆದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಮಿತಿ ಕಾರ್ಯದರ್ಶಿ ವಿನಾಯಕ ಪ್ರಭು ವಾರಂಬಳ್ಳಿ ತಿಳಿಸಿದರು.

ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಗೊರದಳ್ಳಿ, ಸತೀಶ್ ಕೊಳಗಿ, ಸದಸ್ಯರಾದ ಮಂಜುನಾಥ್, ನವೀನ್, ರಮೇಶ್, ಯೋಗೇಂದ್ರ, ಶಂಕರಪ್ಪ ಗೌಡ, ಸತೀಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.