ADVERTISEMENT

ತುಮಕೂರು: ಹೋಂ ಕ್ವಾರಂಟೈನ್‌ ನಿಗಾ, ‘ಜಿಯೊ ಮ್ಯಾಪಿಂಗ್‌’

ಸ್ಮಾರ್ಟ್‌ಸಿಟಿಯ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಮಾಹಿತಿ ದಾಖಲೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 19:45 IST
Last Updated 9 ಏಪ್ರಿಲ್ 2020, 19:45 IST
ಜಿಯೊ ಮ್ಯಾಪಿಂಗ್‌ ಮಾದರಿ
ಜಿಯೊ ಮ್ಯಾಪಿಂಗ್‌ ಮಾದರಿ   

ತುಮಕೂರು: ‘ತುಮಕೂರು ಸ್ಮಾರ್ಟ್ ಸಿಟಿ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ‘ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್’ (ಐಸಿಎಂಸಿಸಿ) ಕೊರೊನಾ ಸೋಂಕು ತಡೆ ವಿಚಾರದಲ್ಲಿ ಮುಖ್ಯ ಪಾತ್ರವಹಿಸುತ್ತಿದೆ.

ಈಗಾಗಲೇ ಶಂಕಿತರು ಎಂದು ಗುರುತಿಸಿ ಹೋಂ ಕ್ವಾರಂಟೈನ್‍ನಲ್ಲಿರುವವರನ್ನು ಐಸಿಎಂಸಿಸಿ ಸಹಾಯದಿಂದ ಜಿಯೊ (geo) ಮ್ಯಾಪಿಂಗ್ ಮಾಡಲಾಗಿದೆ. ಪ್ರಮುಖವಾಗಿ ವಿದೇಶದಿಂದ ಹಿಂದಿರುಗಿದವರು ಹಾಗೂ ಕೊರೊನಾ ಸೋಂಕು ತಗುಲಿದವರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ವಿವರಗಳನ್ನು ಮ್ಯಾಪಿಂಗ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಕ್ವಾರಂಟೈನ್ ಆದವರ ವಿವರಗಳನ್ನು ಭೌಗೋಳಿಕ ಗುರುತು ಮಾಹಿತಿ ಸ್ತರದ (ಜಿಐಎಸ್‌ ಲೇಯರ್‌) ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

ADVERTISEMENT

ವ್ಯಕ್ತಿಗಳ ಆರೋಗ್ಯ ಸ್ಥಿತಿ ಹಾಗೂ ಕ್ವಾರಂಟೈನ್‍ನಲ್ಲಿ ಕಳೆದಿರುವ ದಿನಗಳ ಪ್ರಮಾಣ ಆಧರಿಸಿ ಜಿಯೊ ಮ್ಯಾಪಿಂಗ್ ಮಾಡಲಾಗಿದೆ.
ಬಣ್ಣದ ಸಂಕೇತ (ಕಲರ್ ಕೋಡ್) ಉಪಯೋಗಿಸಿ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳ ವಿವಿಧ ಹಂತಗಳನ್ನು ಪತ್ತೆ ಸಹ ಮಾಡಬಹುದು.

1ರಿಂದ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಹಳದಿ, 15 ರಿಂದ 28 ದಿನಗಳ ಕ್ವಾರಂಟೈನ್ ಅವಧಿಯನ್ನು ಕಿತ್ತಳೆ,
ಕ್ವಾರಂಟೈನ್ ಅವಧಿ ಮುಗಿದಿದ್ದರೆ ಕಂದು, ಪತ್ತೆ ಹಚ್ಚಲು ಸಾಧ್ಯವಿಲ್ಲದಿದ್ದರೆ ನೀಲಿ, ಕೊರೊನಾ ಪಾಸಿಟಿವ್ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಕೆಂಪು, ಪಾಸಿಟಿವ್ ಹಾಗೂ ಗುಣಮುಖರಾದರೆ ಹಸಿರು ಹೀಗೆ ಬಣ್ಣಗಳ ಮೂಲಕ ಗುರುತು ಮಾಡಲಾಗುತ್ತಿದೆ.

ವ್ಯಕ್ತಿಯು ಎಷ್ಟು ದಿನ ಕ್ವಾರಂಟೈನ್‌ನಲ್ಲಿ ಇದ್ದಾನೆ ಎಂಬ ಆಧಾರದಲ್ಲಿ ಬಣ್ಣ ಬದಲಾಗುತ್ತದೆ. ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳಲ್ಲಿ ಯಾರಾದರೂ ಪಾಸಿಟಿವ್ ಎಂದು ದೃಢಪಟ್ಟಲ್ಲಿ ಜಿಐಎಸ್‌ ಸಾಫ್ಟ್‌ವೇರ್‌ನಿಂದ ಪತ್ತೆ ಹಚ್ಚಿ ನಿಷೇಧಿತ ಮತ್ತು ನಿರ್ಬಂಧಿತ ಪ್ರದೇಶ ಎಂದು ಘೋಷಿಸಲು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ನಿಗಾವಹಿಸಲು ಅನುಕೂಲವಾಗಿದೆ.

ಪಾಸಿಟಿವ್ ಎಂದು ಕಂಡು ಬಂದ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕುವಲ್ಲಿಯೂ ಈ ಮ್ಯಾಪಿಂಗ್ ನೆರವಾಗಲಿದೆ.ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಮ್ಯಾಪಿಂಗ್‌ಗೆ ಒಳಪಟ್ಟಿವೆ.

ಸ್ಮಾರ್ಟ್ ಸಿಟಿ ಯೋಜನೆಯ ಈ ಕೇಂದ್ರದ ಸೇವೆಯು ತುಮಕೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದರೂ, ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿ ಸೇವೆಯನ್ನು ಜಿಲ್ಲೆಗೂ ವಿಸ್ತರಿಸಲಾಗಿದೆ.

‘ಮೈ ಮ್ಯಾಪ್’ನಲ್ಲಿ ಮಾಹಿತಿ
ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಆಗಿರುವ ಪ್ರತಿಯೊಬ್ಬ ವ್ಯಕ್ತಿಯ ಮ್ಯಾಪಿಂಗ್ ಅನ್ನು ‘ಮೈ ಮ್ಯಾಪ್ಸ್’ (my maps) ಮೊಬೈಲ್ ಅಪ್ಲಿಕೇಶನ್‍ನಲ್ಲಿ ಮ್ಯಾಪ್ ಮಾಡಿದ್ದಾರೆ.

ಕ್ವಾರಂಟೈನ್ ಆದ ವ್ಯಕ್ತಿ ವಯಸ್ಸು, ವಿಳಾಸ, ದೂರವಾಣಿ ಸಂಖ್ಯೆ, ಯಾವ ದೇಶದಿಂದ ಬಂದಿದ್ದಾರೆ ಎನ್ನುವ ಮಾಹಿತಿ, ವಿದೇಶದಿಂದ ಬಂದಿರುವ ದಿನಾಂಕ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ವಾರಂಟೈನ್‍ನಲ್ಲಿ ಕಳೆದಿರುವ ದಿನಗಳ ವಿವರಗಳು ನಮೂದಾಗಿರುತ್ತವೆ.

ತಂತ್ರಜ್ಞಾನ ಬಳಕೆ; ವೈದ್ಯಕೀಯ ಪರಿಹಾರ
‘ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್’ನ ತಂತ್ರಜ್ಞಾನ ಬಳಸಿಕೊಂಡು ಕೋವಿಡ್–19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಬಹುದು. ತಂತ್ರಜ್ಞಾನ ಬಳಸಿಕೊಂಡು ವೈದ್ಯಕೀಯ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.