ADVERTISEMENT

ಕಾಲೇಜಿಗೂ ಬಿಸಿಯೂಟ ವಿಸ್ತರಣೆ: ಸರ್ಕಾರ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 1:04 IST
Last Updated 25 ಜನವರಿ 2021, 1:04 IST
ಚಿಕ್ಕನಾಯಕನಹಳ್ಳಿಯಲ್ಲಿ ವಿಧಾನಸಭಾ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಸುದ್ದಿಗೋಷ್ಠಿ ನಡೆಸಿದರು
ಚಿಕ್ಕನಾಯಕನಹಳ್ಳಿಯಲ್ಲಿ ವಿಧಾನಸಭಾ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಸುದ್ದಿಗೋಷ್ಠಿ ನಡೆಸಿದರು   

ಚಿಕ್ಕನಾಯಕನಹಳ್ಳಿ: ಮುಂದಿನ ದಿನಗಳಲ್ಲಿ ಬಿಸಿಯೂಟವನ್ನು ಪಿಯುಸಿ ಕಾಲೇಜ್‌ಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅದರ ಸಾಧಕ- ಬಾಧಕಗಳ ಕುರಿತು ಚಿಂತನೆ ನಡೆದಿದೆ ಎಂದು ವಿಧಾನ ಸಭಾ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇನ್ನೂ ಎರಡು, ಮೂರು ತಿಂಗಳಲ್ಲಿ ಖಾಸಗಿ ಶಿಕ್ಷಕರಿಗೆ ಒಂದು ಪ್ಯಾಕೇಜ್ ನೀಡುವ ಸಾಧ್ಯತೆಯಿದೆ. ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ‌’ ಎಂದರು.

ಸರ್ಕಾರ ಎನ್‌ಪಿಎಸ್ ಪದ್ಧತಿ ತೆಗೆದು, ಒಪಿಎಸ್ ಪದ್ಧತಿ ತರುತ್ತಿದೆ. ಶಿಕ್ಷಕರಿಗೂ ಆಯುಷ್ಮಾನ್ ಭಾರತ್, ಆರೋಗ್ಯ ವಿಮೆ ಕೊಡಲು ಚಿಂತಿಸಿದೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಗೌಡ ಮಾತನಾಡಿ, ‘ತಾಲ್ಲೂಕಿನ ವಕೀಲರು, ಉಪನ್ಯಾಸಕರು, ಶಿಕ್ಷಕರು, ವೈದ್ಯರು, ಎಂಜನಿಯರ್, ನಿರುದ್ಯೋಗಿ ಯುವಕರು ಸಹಕರಿಸಿದ್ದರಿಂದ ತಾಲ್ಲೂಕಿನಿಂದ ಹೆಚ್ಚು ಮತಗಳು ದೊರಕಿ ಗೆಲುವು ಸಾಧ್ಯವಾಯಿತು. 7,184ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಪಡೆದಿದ್ದೇನೆ’ ಎಂದರು.

ರಾಜ್ಯ ಸರ್ಕಾರ ಪದವೀಧರ ನಿರುದ್ಯೋಗಿಗಳಿಗೆ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ಬಜೆಟ್‌ನಲ್ಲಿ 10ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 2 ಸಾವಿರ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಲು ಸರ್ಕಾರ ಯೋಚಿಸುತ್ತಿದೆ ಎಂದರು.

ಪ್ರತಿ ತಾಲ್ಲೂಕಿನಲ್ಲೂ ಒಂದೊಂದು ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು ಮೂಲ ಸೌಕರ್ಯ ಒದಗಿಸುವ ಆಸೆ ಇದೆ. ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ದತ್ತು ತೆಗೆದುಕೊಂಡಿದ್ದೇನೆ. 6 ರಿಂದ 12ನೇ ತರಗತಿ ಮಕ್ಕಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಇದಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ದಾನಿಗಳಿಂದ ಸಂಗ್ರಹಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.