ADVERTISEMENT

ಕೇಂದ್ರದಿಂದ ನೆರೆ ಪರಿಹಾರಕ್ಕೆ ಅನುದಾನ ಬಂದಿಲ್ಲ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 13:54 IST
Last Updated 1 ಅಕ್ಟೋಬರ್ 2019, 13:54 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ತುಮಕೂರು: ರಾಜ್ಯದ ನೆರೆ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಬರುವುದು ತಡ ಆಗಿದೆ. ಮಹಾರಾಷ್ಟ್ರ ಸೇರಿದಂತೆ ನೆರೆ ಪೀಡಿತ ಬೇರೆ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಿಂದ ಅನುದಾನ ದೊರೆಯದಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಸುಮ್ಮನೆ ಕುಳಿತಿಲ್ಲ. ನೆರೆ ಪೀಡಿತರಿಗೆ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ₹ 1,500 ಕೋಟಿ ಪರಿಹಾರ ಬಿಡುಗಡೆ ಮಾಡಿದೆ’ ಎಂದು ಹೇಳಿದರು.

‘ಯಾವ ಕಾರಣಕ್ಕೆ ಅನುದಾನ ಬಂದಿಲ್ಲ ಎನ್ನುವ ಉತ್ತರ ನನ್ನಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರಿಹಾರ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ’ ಎಂದರು.

ಯಡಿಯೂರಪ್ಪ ಹಿರಿಯ ನಾಯಕರು. ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವುದು ಸುಳ್ಳು ಸುದ್ದಿ. ಬಿಜೆಪಿ ಪಾಲಿಗೆ ಕರ್ನಾಟಕವು ದಕ್ಷಿಣ ಭಾರತದ ಹೆಬ್ಬಾಗಿಲು. ಈ ಭಾಗದಲ್ಲಿ ಪಕ್ಷವು ಬಲಗೊಳ್ಳಬೇಕು ಅಂದರೆ ಯಡಿಯೂರಪ್ಪ ಅವರು ಮೂರೂವರೆ ವರ್ಷ ಆಡಳಿತ ಕೊಡಬೇಕು ಎನ್ನುವ ಅಪೇಕ್ಷೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲಿ ಇದೆ ಎಂದರು.

ಅನರ್ಹ ಶಾಸಕರು ಬಿಜೆಪಿ ಸೇರಿಲ್ಲ. ಅವರು ಸೇರುತ್ತಾರೆ ಎನ್ನುವ ಸಂದರ್ಭ ಸೃಷ್ಟಿ ಆದಾಗ ಕೇಂದ್ರ ಮತ್ತು ರಾಜ್ಯದ ಹಿರಿಯ ನಾಯಕರು ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸುವರು ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.