ADVERTISEMENT

‘ಕೆನಾಲ್‌: ಜಿಲ್ಲೆಗೆ ಅನ್ಯಾಯ ಮಾಡಲು ಹೊರಟ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 4:54 IST
Last Updated 8 ಜೂನ್ 2025, 4:54 IST
   

ಕೊರಟಗೆರೆ: ಜಿಲ್ಲೆಯ ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ನೀರಾವರಿ ಹೋರಾಟ ನಡೆಸಿದ ಮುಖಂಡರು ಹಾಗೂ ಸ್ವಾಮೀಜಿಗಳ ವಿರುದ್ಧ ಪೊಲೀಸ್ ಇಲಾಖೆ ಬಳಸಿಕೊಂಡು ಕ್ರಿಮಿನಲ್ ಮೊಕ್ಕದ್ದಮೆ ಹೂಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಮುಖಂಡ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಜಿಲ್ಲೆಗೆ ನಿಗದಿಯಾಗಿರುವ ಹೇಮಾವತಿ ನೀರು ಇಲ್ಲಿಯವರೆಗೂ ಸರಿಯಾಗಿ ಬಂದಿಲ್ಲ. ಅಂತಹದರಲ್ಲಿ ಅದೇ ನೀರನ್ನು ಕೆನಾಲ್ ಮೂಲಕ ಕುಣಿಗಲ್ ತಾಲ್ಲೂಕಿಗೆ ಹರಿಸುವ ನೆಪದಲ್ಲಿ ಮಾಗಡಿ ಹಾಗೂ ರಾಮನಗರಕ್ಕೆ ತೆಗೆದುಕೊಂಡು ಹೋಗುವ ಹುನ್ನಾರದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ. ಬಯಲು ಸೀಮೆ ಪ್ರದೇಶಗಳಾದ ಕೊರಟಗೆರೆ, ಮಧುಗಿರಿ, ಪಾವಗಡ ಭಾಗಕ್ಕೆ ನೀರಿನ ಅವಶ್ಯಕತೆ ಇದ್ದು, ಈ ಭಾಗಕ್ಕೆ ನೀರು ಕಡಿತಗೊಳಿಸಲು ಬಿಡುವುದಿಲ್ಲ. ಇದರ ವಿರುದ್ಧ ರೈತರು, ಮುಖಂಡರು ಹಾಗೂ ಸ್ವಾಮೀಜಿಗಳು ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವ. ಅದನ್ನು ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆಪಾದಿಸಿದರು.

ADVERTISEMENT

ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ತುಂಬಾಡಿ ಲಕ್ಷ್ಮೀಶ ಮಾತನಾಡಿ, ಮಾಗಡಿ, ರಾಮನಗರಕ್ಕೆ ನೀರು ತರಲು ಪರ್ಯಾಯ ಯೋಜನೆ ಜಾರಿ ರೂಪಿಸಲಿ. ಅದನ್ನು ಬಿಟ್ಟು ಇಲ್ಲಿನ ನೀರು ಹರಿಸಲು ಬಿಡುವುದಿಲ್ಲ. ಈ ಯೋಜನೆಯಿಂದ ಈ ಭಾಗದ ರೈತರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕರು ದ್ವಿಮುಖ ನೀತಿ ಅನುಸರಿಸಬಾರದು. ಜಿಲ್ಲೆ ಜನರಿಗೆ ಅನ್ಯಾಯವಾಗದಂತೆ ಅವರ ಹಿತ ಕಾಪಾಡಬೇಕು ಎಂದರು.

ಮುಖಂಡ ವಿಶ್ವನಾಥ ಅಪ್ಪಾಜಪ್ಪ ಮಾತನಾಡಿ, ಜಿಲ್ಲೆಯ ಇಬ್ಬರು ಸಚಿವರಾದ ಪರಮೇಶ್ವರ ಹಾಗೂ ಕೆ.ಎನ್.ರಾಜಣ್ಣ ಅವರ ಜಾಣನಡೆ ಜಿಲ್ಲೆಯ ಜನರಲ್ಲಿ ಬೇಸರ ತರಿಸಿದೆ. ಯಾರನ್ನೋ ಮೆಚ್ಚಿಸಲು ಜಿಲ್ಲೆಯ ಜನರ ಹಿತಾಸಕ್ತಿ ಬಲಿಕೊಡುವುದು ಒಳಿತಾಗುವುದಿಲ್ಲ ಎಂದರು.

ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ರುದ್ರೇಶ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ದರ್ಶನ್, ದಾಡಿ ವೆಂಕಟೇಶ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.