ADVERTISEMENT

ಶಾಸಕ ಸ್ಥಾನಕ್ಕೆ ಆಯ್ಕೆ ಅಸಿಂಧು | ಗೌರಿಶಂಕರ್‌ಗೆ ಆಘಾತ ನೀಡಿದ ಹೈಕೋರ್ಟ್ ತೀರ್ಪು

ಕೆ.ಜೆ.ಮರಿಯಪ್ಪ
Published 30 ಮಾರ್ಚ್ 2023, 19:30 IST
Last Updated 30 ಮಾರ್ಚ್ 2023, 19:30 IST
ಡಿ.ಸಿ.ಗೌರಿಶಂಕರ್‌
ಡಿ.ಸಿ.ಗೌರಿಶಂಕರ್‌   

ತುಮಕೂರು: ಕಳೆದ 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ನಕಲಿ ವಿಮಾ ಬಾಂಡ್ ಹಂಚಿದ್ದ ಆರೋಪದ ಮೇಲೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ. ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿರುವುದು ಅವರಿಗೆ ಒಂದು ರೀತಿಯಲ್ಲಿ ಆಘಾತ ನೀಡಿದಂತಾಗಿದೆ.

ಈ ತೀರ್ಪಿಗೆ ಕೋರ್ಟ್ ಒಂದು ತಿಂಗಳ ಕಾಲ ತಡೆ ನೀಡಿದೆ. ಅಷ್ಟರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆದುಕೊಂಡರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಬಹುದು. ತಡೆಯಾಜ್ಞೆ ಸಿಗದಿದ್ದರೆ ಸ್ಪರ್ಧೆ ಕಷ್ಟಕರ ಎಂದೇ ಹೇಳಲಾಗುತ್ತಿದೆ. ಆಯ್ಕೆಯನ್ನು ಅಸಿಂಧು ಗೊಳಿಸಿರುವುದರಿಂದ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಅವಕಾಶಗಳಿವೆ.

ಚುನಾವಣೆ ದಿನಾಂಕ ಘೋಷಣೆಯಾದ ಹೊತ್ತಿನಲ್ಲೇ ಇಂತಹದೊಂದು ತೀರ್ಪು ಬಂದಿರುವುದನ್ನು ಅರಗಿಸಿಕೊಳ್ಳಲು ಗೌರಿಶಂಕರ್ ಹಾಗೂ ಜೆಡಿಎಸ್‌ಗೆ ಸಾಧ್ಯವಾಗುತ್ತಿಲ್ಲ. ಅತ್ಯುತ್ಸಾಹದಲ್ಲೇ ಚುನಾವಣೆ ಗೆಲುವಿನ ತಂತ್ರಗಾರಿಕೆಯಲ್ಲಿ ದಳಪತಿಗಳು ತೊಡಗಿಸಿಕೊಂಡಿದ್ದರು. ಈ ತೀರ್ಪು ಬರ ಸಿಡಿಲಿನಂತೆ ಎದುರಾಗಿದ್ದು, ನುಂಗಲಾರದ ತುತ್ತಾಗಿದೆ. ಈಗಿನ ಸವಾಲುಗಳ ಜತೆಗೆ ಹೊಸದೊಂದು ಸಮಸ್ಯೆ ಹೆಗಲೇರಿದ್ದು, ಜಿಲ್ಲೆ ಹಾಗೂ ಕ್ಷೇತ್ರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ರಾಜಕೀಯ ಲೆಕ್ಕಾಚಾರಗಳು ನಡೆದಿವೆ. ಈ ತೀರ್ಪನ್ನು ಯಾವ ರೀತಿ ‘ಬಳಸಿಕೊಳ್ಳಬೇಕು’, ಜನರ ಮುಂದೆ ಹೇಗೆ ವ್ಯಾಖ್ಯಾನಿಸಬೇಕು ಎಂದು ಚರ್ಚಿಸಲಾಗುತ್ತಿದೆ. ದೊಡ್ಡಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಒಂದಷ್ಟು ಮಾರ್ಗದರ್ಶನ ಮಾಡಿದ್ದು, ಅದರ ಪರಿಣಾಮವನ್ನು ಎದುರಿಸಲು ಸಜ್ಜಾಗಿದ್ದಾರೆ.

ADVERTISEMENT

ಸ್ಪರ್ಧೆಗೆ ಸುರೇಶ್‌ಗೌಡ ಸಿದ್ಧತೆ ಮಾಡಿಕೊಂಡಿದ್ದಾರೆ. ಗೌರಿಶಂಕರ್ ಅವರಿಗೆ ದಳಪತಿಗಳು ಟಿಕೆಟ್ ಪ್ರಕಟಿಸಿದ್ದು, ಈಗಾಗಲೇ ಸಾಕಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಏ. 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಂತಹ ಸಮಯದಲ್ಲಿ ಹೊರ ಬಿದ್ದ ಕೋರ್ಟ್ ತೀರ್ಪು ಗೌರಿಶಂಕರ್‌ಗೆ ಆಘಾತ ನೀಡಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಒಂದು ಕಡೆ ಪ್ರಚಾರ, ಗೆಲುವಿಗೆ ಬೇಕಾದ ತಂತ್ರಗಾರಿಕೆ ರೂಪಿಸಬೇಕಿದ್ದ ಸಮಯದಲ್ಲಿ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದೊದಗಿದೆ.

ಹೈ ಕೋರ್ಟ್ ತೀರ್ಪು ಜಿಲ್ಲೆ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೂ ಕಾರಣವಾಗಿದೆ. ‘ಹೈ’ ತೀರ್ಪಿಗೆ ತಡೆಯಾಜ್ಞೆ ಸಿಕ್ಕರೆ ಗೌರಿಶಂಕರ್ ಸ್ಪರ್ಧೆಗೆ ದಾರಿ ಸುಗಮವಾಗಲಿದೆ. ಒಂದು ವೇಳೆ ತಡೆಯಾಜ್ಞೆ ಸಿಗದಿದ್ದರೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ. ಗೌರಿಶಂಕರ್ ಸ್ಪರ್ಧೆ ಸಾಧ್ಯವೇ ಇಲ್ಲ ಎಂಬ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ಅವರ ಪತ್ನಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆಗಳು ನಡೆದಿವೆ ಎನ್ನಲಾಗಿದೆ. ಹಾಗಾಗಿ ಎಲ್ಲರ ಚಿತ್ತ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ.

ಗ್ರಾಮಾಂತರ ಕ್ಷೇತ್ರ ಮೊದಲಿನಿಂದಲೂ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿದೆ. ಜೆಡಿಎಸ್‌ನ ಡಿ.ಸಿ. ಗೌರಿಶಂಕರ್ ಹಾಗೂ ಬಿಜೆಪಿಯ ಬಿ.ಸುರೇಶ್‌ಗೌಡ ನಡುವೆ ಹಣಾಹಣಿ ನಡೆದುಕೊಂಡು ಬಂದಿದೆ. ಕಳೆದ ಬಾರಿ ಗೌರಿಶಂಕರ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಸುರೇಶ್‌ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ನಕಲಿ ವಿಮಾ ಬಾಂಡ್ ಹಂಚಿಕೆ ಮಾಡಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದ್ದರು.

ಮೇಲ್ಮನವಿಗೆ ಸಿದ್ಧತೆ
ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ಒಂದೆರೆಡು ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು. ತಕ್ಷಣಕ್ಕೆ ತಡೆಯಾಜ್ಞೆ ಸಿಗುವ ವಿಶ್ವಾಸ ಇದೆ. ಈ ಸಂಬಂಧ ವಕೀಲರ ಜತೆಗೆ ಚರ್ಚಿಸಲಾಗಿದೆ ಎಂದು ಶಾಸಕ ಡಿ.ಸಿ. ಗೌರಿಶಂಕರ್ ತಿಳಿಸಿದರು.

ಹೈಕೋರ್ಟ್ ತೀರ್ಪಿಗೆ ಒಂದು ತಿಂಗಳ ಕಾಲ ತಡೆಯಾಜ್ಞೆ ಸಿಕ್ಕಿದೆ. ಅಷ್ಟರಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗಲಾಗುವುದು. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ. ಪರ್ಯಾಯ ವಿಚಾರಗಳ ಬಗ್ಗೆ ಚಿಂತಿಸಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.