ADVERTISEMENT

ಗಡಿ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಹೋರಾಟ!

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 23:30 IST
Last Updated 3 ಜೂನ್ 2023, 23:30 IST
ಹುಳಿಯಾರು ಹೋಬಳಿ ಗಾಣಧಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಎರುಡು ವರ್ಷದಿಂದ ಪಾಳು ಬಿದ್ದಿದೆ
ಹುಳಿಯಾರು ಹೋಬಳಿ ಗಾಣಧಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಎರುಡು ವರ್ಷದಿಂದ ಪಾಳು ಬಿದ್ದಿದೆ   

ಆರ್.ಸಿ. ಮಹೇಶ್‌

ಹುಳಿಯಾರು: ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗುತ್ತಿದ್ದು, ಹೋಬಳಿ ವ್ಯಾಪ್ತಿಯ ಬಹುತೇಕ ಶಾಲೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ. ಸರ್ಕಾರಿ ಶಾಲೆಗಳ ಸೊರಗುವಿಕೆಯಿಂದ ಪೋಷಕರಿಗೆ ಹೊರೆಯಾಗುತ್ತಿದೆ.

ಹೋಬಳಿ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಶಾಲೆಗಳಿದ್ದರೂ ಗ್ರಾಮೀಣ ಭಾಗದ ಜನರು ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಹುಳಿಯಾರು ಹೋಬಳಿ ಪ್ರದೇಶ ಜಿಲ್ಲೆಯ ಗಡಿ ಭಾಗವಾಗಿದ್ದು ಮೂರು ಜಿಲ್ಲೆಗಳ ಗಡಿ ಹಂಚಿಕೊಂಡಿದೆ. ಇಲ್ಲಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚು. ಗಡಿ ಭಾಗದ ಶಾಲೆಗಳಿಗೆ ಒತ್ತಾಯ ಪೂರ್ವಕವಾಗಿ ಶಿಕ್ಷಕರು ಬಂದರೂ ಒಂದೆರಡು ವರ್ಷಗಳಲ್ಲಿ ಮತ್ತೆ ಶಿಕ್ಷಕರ ಕೊರತೆ ಎದುರಾಗುತ್ತದೆ. ಮುಖ್ಯವಾಗಿ ಭಾಷಾವಾರು ಶಿಕ್ಷಕರ ಕೊರತೆ ಜತೆ ಉಳಿದ ಶಿಕ್ಷಕರ ಕೊರತೆಯೂ ಇದೆ.

ADVERTISEMENT

ಬಹುತೇಕ ಸರ್ಕಾರಿ ಶಾಲೆಗಳು ತುಂಬಾ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡಗಳಾಗಿದ್ದು ಸಂಪೂರ್ಣ ಶಿಥಿಲಗೊಂಡಿವೆ. ಕೆಲ ಶಾಲೆಗಳಲ್ಲಿ ನಾಲ್ಕೈದು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸುವ ಸ್ಥಿತಿಯೂ ಇದೆ. ಬಹುತೇಕ ಶಾಲಾ ಕಟ್ಟಡಗಳು ಇರುವ ಸ್ಥಳದ ದಾಖಲೆಯಿಲ್ಲದಿರುವುದು ಒಂದೆಡೆಯಾದರೆ ಆಟದ ಮೈದಾನದ ಕೊರತೆಯಿದೆ. ಇನ್ನೂ ಅಕ್ಷರ ದಾಸೋಹದ ಕಟ್ಟಡಗಳ ಸ್ಥಿತಿ ಕೆಲ ಶಾಲೆಗಳಲ್ಲಿ ಚಿಂತಾಜನಕವಾಗಿದೆ.

ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಪಾಠ ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಶಾಲೆಯಲ್ಲಿಯೇ ಮಕ್ಕಳ ಕೊರತೆ ಇದೆ. ಸಮುದಾಯದ ಸಹಭಾಗಿತ್ವ ಇರುವ ಗ್ರಾಮಗಳ ಶಾಲೆಗಳು ಮಾತ್ರವೇ ಸ್ವಲ್ಪ ಚೇತರಿಕೆ ಕಾಣುತ್ತಿವೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 305 ಸರ್ಕಾರಿ ಪ್ರಾಥಮಿಕ ಶಾಲೆ, 19 ಪ್ರೌಢಶಾಲೆಗಳಿವೆ. ಪ್ರತಿ ಶಾಲೆಗಳಲ್ಲಿಯೂ ಶಾಲಾ ಕೊಠಡಿ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳನ್ನು ಕೂರಿಸುವ ಸ್ಥಿತಿಯಿಲ್ಲ.

ಎರಡು ವರ್ಷದಿಂದ ಪಾಳು ಬಿದ್ದ ಕೊಠಡಿ: ಗಾಣಧಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಶಾಲೆಗಳ ಸೊರಗುವಿಕೆಗೆ ನಿದರ್ಶನ. ಶತಮಾನಕ್ಕೆ ಕೆಲವೇ ವರ್ಷಗಳು ಬಾಕಿಯಿರುವ ಇತಿಹಾಸ ಹೊಂದಿರುವ ಶಾಲೆ ಮುಚ್ಚುವ ಹಂತ ತಲುಪಿದೆ. 9 ಕೊಠಡಿಗಳಿದ್ದು ಒಂದು ಮಾತ್ರ ವಿದ್ಯಾರ್ಥಿಗಳನ್ನು ಕೂರಿಸುವಂತಿದೆ. ಉಳಿದವುಗಳಲ್ಲಿ ಎರಡು ಕೊಠಡಿಗಳ ಗೋಡೆ ಬಿದ್ದು ವರ್ಷಗಳೇ ಕಳೆದಿದೆ. ಇನ್ನೂ ತೆರವುಗೊಳಿಸಿಲ್ಲ. ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಇಬ್ಬರು ವಿದ್ಯಾರ್ಥಿಗಳು ಒಂದನೇ ತರಗತಿಗೆ ದಾಖಲಾಗಿದ್ದು, 7ನೇ ತರಗತಿಗೆ ವಿದ್ಯಾರ್ಥಿಗಳೇ ಇಲ್ಲ. ಒಟ್ಟು ಶಾಲೆಯಲ್ಲಿ 26 ವಿದ್ಯಾರ್ಥಿಗಳು ಮಾತ್ರ ಇದ್ದು ಮುಂದಿನ ದಿನಗಳಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದರೂ ಆಶ್ಚರ್ಯ ಪಡಬೇಕಾಗಿಲ್ಲ.

ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳಿಲ್ಲದೆ ವಿದ್ಯಾರ್ಥಿಗಳು ಮರದ ಕೆಳಗೆ ಪಾಠ ಕೇಳುತ್ತಾರೆ. ಇವುಗಳ ಮಧ್ಯೆ ಗಣಿಬಾಧಿತ ಪ್ರದೇಶಗಳ ಅನುದಾನ ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆ ಅಭಿವೃದ್ಧಿ ಮಾತು ಎರಡು ವರ್ಷಗಳಿಂದ ಕೇಳಿ ಬರುತ್ತಿದೆ. ಈಗಿನ ಶೈಕ್ಷಣಿಕ ವರ್ಷದಲ್ಲಿ ಶಿಥಿಲಗೊಂಡಿರುವ ಕೊಠಡಿಗಳ ಪಟ್ಟಿ ಮಾಡಿಕೊಂಡು ಹೋಗಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಕಡತ ದಾಖಲೆಯಲ್ಲಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ.

ಹುಳಿಯಾರು ಹೋಬಳಿ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆ ಕೊಠಡಿ ಸ್ಥಿತಿ

31 ಕೊಠಡಿ ಮಂಜೂರು

‘ತಾಲ್ಲೂಕಿನಲ್ಲಿ ಪ್ರಸ್ತುತ ವಿವೇಕ ಶಾಲೆ ಅನುದಾನದಲ್ಲಿ 31 ಶಾಲಾ ಕೊಠಡಿಗಳ ಮಂಜೂರಾತಿ ದೊರೆತಿದೆ. ಶಿಥಿಲ ಕೊಠಡಿಗಳ ಪಟ್ಟಿ ಮಾಡಿ ಕಳುಹಿಸಲಾಗಿದೆ. ಶಿಕ್ಷಕರ ಕೊರತೆ ಇರುವೆಡೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ‘ ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್‌ ಹೇಳಿದರು.

‘ಸರ್ಕಾರಿ ಶಾಲೆ ಉಳಿಸುವ ಹೋರಾಟ ಸರ್ಕಾರಿ ಶಾಲೆ ಸಬಲೀಕರಣಕ್ಕಾಗಿ ಸುವರ್ಣ ವಿದ್ಯಾ ಚೇತನದಿಂದ ಮಕ್ಕಳ ಮನೆ(ಪೂರ್ವ ಪ್ರಾಥಮಿಕ ಶಿಕ್ಷಣ) ತರಗತಿಗಳನ್ನು ಐದು ವರ್ಷಗಳಿಂದ ಐದು ಶಾಲೆ ತೆರೆಯಲಾಗಿತ್ತು. ಕೊರೊನಾ ಸಂಕಷ್ಟದಿಂದ ಸ್ಥಗಿತವಾಗಿದ್ದ ಪ್ರಕ್ರಿಯೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿದೆ. ಆದರೆ ಸರ್ಕಾರಿ ಶಾಲೆಗಳಿಗೆ ಸಮುದಾಯದ ಸಹಬಾಗಿತ್ವದ ಕೊರತೆಯಿಂದ ಸರ್ಕಾರಿ ಶಾಲೆ ಸಾಯುತ್ತಿವೆ. ಪ್ರತಿ ಶಾಲೆಗಳಲ್ಲಿ ಮಕ್ಕಳಮನೆ ತೆರೆದು ಅಲ್ಲಿಂದಲೇ ಸರ್ಕಾರಿ ಶಾಲೆಗೆ ಸೇರಿಸುವ ಪ್ರಕ್ರಿಯೆ ಆರಂಭವಾಗಬೇಕು‘ ಎಂದು ವೃತ್ತ ಶಕ್ಷಕ ಹಾಗೂ ಸರ್ಕಾರಿ ಶಾಲೆ ಉಳಿಸಿ ಹೋರಾಟಗಾರ ರಾಮಕೃಷ್ಣಪ್ಪ ನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.