ADVERTISEMENT

ತುಮಕೂರು ರಸ್ತೆ ಅಪಘಾತ: ತಂದೆ, ತಾಯಿ, ಪುತ್ರ ಸೇರಿ 9 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 8:11 IST
Last Updated 25 ಆಗಸ್ಟ್ 2022, 8:11 IST
   

ತುಮಕೂರು: ರಾಷ್ಟ್ರೀಯ ಹೆದ್ದಾರಿ 4ರ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹತ್ತಿರದ ಬಾಳೇನಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ನಡೆದ ಕ್ರೂಸರ್ ಅಪಘಾತದಲ್ಲಿ 9 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.

ಕ್ರೂಸರ್‌ ವಾಹನದ ಟೈರ್‌ ಸಿಡಿದು, ಉರುಳಿ ಬಿದ್ದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಲಾರಿ ಕ್ರೂಸರ್‌ಗೆ ಗುದ್ದಿದ್ದರಿಂದ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ.

ಕ್ರೂಸರ್‌ ವಾಹನದಲ್ಲಿ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದರು. 12 ಜನಕ್ಕೆ ಅವಕಾಶವಿದ್ದ ಸ್ಥಳದಲ್ಲಿ 24 ಮಂದಿ ಸಂಚರಿಸುತ್ತಿದ್ದರು. ವಾಹನ ಚಾಲಕ ಮದ್ಯ ಸೇವನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿದೆ. ಹಿರಿಯೂರು ಸಮೀಪ ಚಹಾ ಸೇವಿಸಲು ನಿಲ್ಲಿಸಿದ್ದ ಸಮಯದಲ್ಲಿ ಚಾಲಕ ಮದ್ಯ ಸೇವಿಸಿ ಬಂದಿದ್ದ. ಆಗಾಗ ಸ್ಟೇರಿಂಗ್ ಮೇಲೆಯೇ ನಿದ್ದೆ ಮಾಡುತ್ತಿದ್ದ ಎಂದು ಅಪಘಾತದಲ್ಲಿ ಗಾಯಗೊಂಡವರು ದೂರಿದರು.

ADVERTISEMENT

ಕ್ರೂಸರ್ ವಾಹನ ಸುಸ್ಥಿತಿಯಲ್ಲಿ ಇರಲಿಲ್ಲ, ಟೈರ್‌ಗಳು ಸವೆದಿದ್ದವು. ಸಾಮರ್ಥ್ಯಕ್ಕಿಂತ ಹೆಚ್ಚು ಜನರಿದ್ದ ಭಾರವನ್ನು ತಾಳಲಾರದೆ ಸವೆದಿದ್ದ ಟೈರ್ ಸಿಡಿದಿರುವ ಸಾಧ್ಯತೆ ಇದೆ. ಚಾಲಕ ಸಹ ಮದ್ಯ ಸೇವಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.

ರಾಯಚೂರು ಜಿಲ್ಲೆಯ ಸಿರಿವಾರ ತಾಲ್ಲೂಕಿನ ಕುರಕುಂದ ಗ್ರಾಮದ ಒಂದೇ ಕುಟುಂಬದ ಪ್ರಭು (30), ಪತ್ನಿ ಸುಜಾತ (25), ಪುತ್ರ ವಿನೋದ್‌ (3) ಹಾಗೂ ಮೀನಾಕ್ಷಿ, ಕಸನದೊಡ್ಡಿಯ ಬಸಮ್ಮ (50), ವಾಹನ ಚಾಲಕ ಕೃಷ್ಣಪ್ಪ ಮೃತಪಟ್ಟಿದ್ದಾರೆ. ಇನ್ನೂ ಮೂವರ ಹೆಸರು ಗೊತ್ತಾಗಬೇಕಿದೆ.

ಗಾಯಾಳುಗಳು: ಸಿರಿವಾರ ತಾಲ್ಲೂಕಿನ ಮಲ್ಕಿ ಗ್ರಾಮದ ದುರ್ಗಮ್ಮ (52), ಶಿವರಾಜು (16), ವೈಷ್ಣವಿ (12), ನವಿಲುಕಲ್ಲು ಗ್ರಾಮದ ಮೋನಿಕಾ (40), ಬಾಲಾಜಿ (6), ಅನಿಲ್‌ (8), ಕುರುಕುಂದ ಗ್ರಾಮದ ಲಲಿತಾ (30), ವಿರೂಪಾಕ್ಷಿ (30), ಸಂದೀಪ್‌ (5), ದೇವದುರ್ಗ ತಾಲ್ಲೂಕಿನ ಗುಡನಾಳು ಗ್ರಾಮದ ದೇವರಾಜು (6), ಶ್ಯಾಮತ್‌ಗಲ್‌ನ ನಾಗಮ್ಮ (55), ಮಾನ್ವಿ ತಾಲ್ಲೂಕಿನ ಮಾಡಗಿರಿ ಗ್ರಾಮದ ಉಮೇಶ್‌ (30), ಯಲ್ಲಮ್ಮ (25), ನಾಗಪ್ಪ (65), ನೆರವಾಣಿ ಗ್ರಾಮದ ವಸಂತ (40) ಅಪಘಾತದಲ್ಲಿ ಗಾಯಗೊಂಡವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.