ADVERTISEMENT

ತುಮಕೂರು | GST ನೋಟಿಸ್: UPI ಬೇಡ, ನಮಗೇಕೆ ರಾಮಾಯಣ: ವ್ಯಾಪಾರಸ್ಥರ ಆಕ್ರೋಶ

ಜಿಎಸ್‌ಟಿ ನೋಟಿಸ್‌ಗೆ ವ್ಯಾಪಾರಸ್ಥರು, ವರ್ತಕರು ಹೈರಾಣ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 6:01 IST
Last Updated 23 ಜುಲೈ 2025, 6:01 IST
ಕುಣಿಗಲ್‌ನ ಅಂಗಡಿಯೊಂದರಲ್ಲಿ ಫೋನ್ ಪೇ, ಗೂಗಲ್ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ
ಕುಣಿಗಲ್‌ನ ಅಂಗಡಿಯೊಂದರಲ್ಲಿ ಫೋನ್ ಪೇ, ಗೂಗಲ್ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ    

ತುಮಕೂರು: ‘ಫೋನ್ ಪೇ, ಗೂಗಲ್ ಪೇ ಮಾಡಬೇಡಿ, ಬೇಕಿದ್ದರೆ ಹಣ ಕೊಟ್ಟು ಸಾಮಗ್ರಿ ಖರೀದಿಸಿ. ಇಲ್ಲದಿದ್ದರೆ ವಾಪಸ್‌ ಹೋಗಿ, ನಮಗೇಕೆ ಬೇಕು ಈ ರಾಮಾಯಣ’ ಎಂದು ಅಂತರಸನಹಳ್ಳಿ ಮಾರುಕಟ್ಟೆ ವ್ಯಾಪಾರಸ್ಥರು ಗ್ರಾಹಕರ ಮೇಲೆ ಸಿಟ್ಟಾದ ಪರಿ ಇದು.

ವಾಣಿಜ್ಯ ತೆರಿಗೆ ಇಲಾಖೆಯು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಟಿಸ್‌ ಜಾರಿ ಮಾಡಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ. ತರಕಾರಿ, ಈರುಳ್ಳಿ ಮಂಡಿ ನಡೆಸುವ ಮಾಲೀಕರಿಗೂ ನೋಟಿಸ್‌ನ ಬಿಸಿ ತಟ್ಟಿದೆ. ಹಲವು ಕಡೆಗಳಲ್ಲಿ ಯುಪಿಐ ಪಾವತಿ ನಿಲ್ಲಿಸಿ, ಈ ಹಿಂದಿನಂತೆ ನಗದು ಪಡೆಯುತ್ತಿದ್ದಾರೆ.

ಅಂತರಸನಹಳ್ಳಿ ಮಾರುಕಟ್ಟೆಯ ಬೆಳ್ಳುಳ್ಳಿ, ಶುಂಠಿ ವ್ಯಾಪಾರಿ ಟಿ.ಎಸ್‌.ರಾಜಣ್ಣ ಪುತ್ರ ವರುಣ್‌ ಅವರಿಗೆ ₹15 ಲಕ್ಷ, ಈರುಳ್ಳಿ ಮಳಿಗೆ ನಡೆಸುತ್ತಿರುವ ಕುಮಾರ್‌ ಅವರಿಗೆ ₹14 ಲಕ್ಷ ವಹಿವಾಟಿನ ದಾಖಲೆ ಸಲ್ಲಿಸುವಂತೆ ನೋಟಿಸ್‌ ನೀಡಲಾಗಿದೆ.

ADVERTISEMENT

‘ಇಷ್ಟು ದಿನ ಯಾವುದೇ ದಾಖಲಾತಿ ಕೇಳಿರಲಿಲ್ಲ. ಈಗ ಏಕಾಏಕಿ ನೋಟಿಸ್‌ ಜಾರಿ ಮಾಡಿದ್ದಾರೆ. ಐದು ವರ್ಷಗಳಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆಯಾದ ಬಗ್ಗೆ ದಾಖಲೆ ಸಲ್ಲಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇಷ್ಟು ವರ್ಷಗಳ ದಾಖಲೆ ಎಲ್ಲಿಂದ ಜೋಡಿಸಬೇಕು. ರೈತರಿಗೆ ಸುಲಭವಾಗಲಿ ಎಂಬ ಉದ್ದೇಶದಿಂದ ಫೋನ್‌ ಪೇ ಮೂಲಕ ಹಣ ನೀಡಿ ಕಳುಹಿಸುತ್ತೇವೆ. ಹೀಗಾದರೆ ವಹಿವಾಟು ನಡೆಸುವುದು ಕಷ್ಟವಾಗುತ್ತದೆ’ ಎಂದು ಟಿ.ಎಸ್‌.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ರಾಜಣ್ಣ 30 ವರ್ಷಗಳಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಮೆಣಸಿನಕಾಯಿ, ಆಲೂಗಡ್ಡೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ವಹಿವಾಟು ಮಾಡುತ್ತಿದ್ದಾರೆ. ಈಗಾಗಲೇ ಜಿಎಸ್‌ಟಿ ನೋಂದಣಿ ಮಾಡಿಸಿಕೊಂಡಿದ್ದು, ಅವರ ಮಗ ವರುಣ್‌ ಹೆಸರಿಗೆ ಈಗ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್‌ ಜಾರಿಯಾಗಿದೆ. ವರುಣ್‌ ಸಹ ತಂದೆಯ ಜತೆಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಲಾಖೆಗೆ ಅಗತ್ಯ ದಾಖಲೆ ಸಲ್ಲಿಸಲು ರಾಜಣ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಮಳಿಗೆಯಲ್ಲಿ ಯುಪಿಐ ವ್ಯವಸ್ಥೆ ರದ್ದು ಮಾಡಿ, ಹಣದ ಮೂಲಕವೇ ವಹಿವಾಟು ನಡೆಸುತ್ತಿದ್ದಾರೆ.

‘ತರಕಾರಿ ವಹಿವಾಟು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ₹15 ಲಕ್ಷ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಲಾಗಿದೆ. ಹೀಗಾದರೆ ವ್ಯಾಪಾರ ನಡೆಸುವುದು ಹೇಗೆ? ಈಗ ಐದು ವರ್ಷಗಳ ವಹಿವಾಟಿನ ದಾಖಲೆ ಎಲ್ಲಿಂದ ತರಬೇಕು? ಎಂದು ಅವರು ಪ್ರಶ್ನಿಸುತ್ತಾರೆ.

‘ಈಚೆಗಷ್ಟೇ ಜಿಎಸ್‌ಟಿ ನೋಂದಣಿ ಮಾಡಿಸಲಾಗಿದೆ. ವ್ಯಾಪಾರಸ್ಥರಿಗೆ ನಿಯಮ ಗೊತ್ತಿರುವುದಿಲ್ಲ. ಹೀಗೆ ಇದ್ದಕ್ಕಿದ್ದಂತೆ ನೋಟಿಸ್‌ ಕೊಟ್ಟರೆ ಸಮಸ್ಯೆಯಾಗುತ್ತದೆ. ನಮ್ಮಲ್ಲಿ ಶೇ 80ರಷ್ಟು ವಹಿವಾಟು ಯುಪಿಐ ಮೂಲಕ ಆಗುತ್ತದೆ. ಉಳಿದ ಶೇ 20ರಷ್ಟು ಜನ ಮಾತ್ರ ಹಣ ಕೊಡುತ್ತಾರೆ. ವ್ಯಾಪಾರಕ್ಕೆ ಅನುಕೂಲವಾಗಿತ್ತು. ಮುಂದಿನ ದಿನಗಳಲ್ಲಿ ವಹಿವಾಟು ನಡೆಸುವುದು ಕಷ್ಟವಾಗಬಹುದು’ ಎಂದು ವ್ಯಾಪಾರಿ ಕುಮಾರ್‌ ಪ್ರತಿಕ್ರಿಯಿಸಿದರು.

ಯುಪಿಐ 

300ಕ್ಕೂ ಹೆಚ್ಚು ಜನರಿಗೆ ನೋಟಿಸ್‌

ಸೇವೆಗೆ ಸಂಬಂಧಿಸಿದ ವಹಿವಾಟಿನ ಮೊತ್ತ ₹20 ಲಕ್ಷ ಮೀರಿದ ವಾರ್ಷಿಕ ಸರಕು ವಹಿವಾಟಿನ ಮೊತ್ತ ₹40 ಲಕ್ಷ ದಾಟಿದ ವ್ಯಾಪಾರಸ್ಥರಿಗೆ ನೋಟಿಸ್‌ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಆದಾಯದ ಮಿತಿ ಮೀರಿದ ವರ್ತಕರು ವ್ಯಾಪಾರಸ್ಥರಿಗೆ ನೋಟಿಸ್‌ ಕಳುಹಿಸಲಾಗಿದೆ. ವಹಿವಾಟಿನ ದಾಖಲೆ ಸಲ್ಲಿಸುವಂತೆ ತಿಳಿಸಲಾಗಿದೆ. ಅಗತ್ಯ ದಾಖಲೆ ನೀಡಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ದಾಖಲೆ ಸಲ್ಲಿಕೆ ಕಷ್ಟ

2021ರಿಂದ 2025ರ ವರೆಗೆ ನಡೆದ ವಹಿವಾಟಿನ ದಾಖಲೆ ಸಲ್ಲಿಸುವಂತೆ ಕೇಳಿದ್ದಾರೆ. ರೈತರಿಂದ ಯಾವುದೇ ಬಿಲ್‌ ಪಡೆದಿರುವುದಿಲ್ಲ. ಈಗ ಒಮ್ಮೆಲೆ ಎಲ್ಲ ದಾಖಲೆ ಕೇಳಿದರೆ ಎಲ್ಲಿಂದ ಜೋಡಿಸಬೇಕು. ಅಧಿಕಾರಿಗಳು ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು.
ಟಿ.ಎಸ್‌.ರಾಜಣ್ಣ ಅಂತರಸನಹಳ್ಳಿ

ಸಮಸ್ಯೆ ಇಲ್ಲ

ಹಣ ವರ್ಗಾವಣೆ ಬಗ್ಗೆ ದಾಖಲೆ ಇದ್ದರೆ ಸಮಸ್ಯೆ ಇಲ್ಲ. ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಹಣದ ವಹಿವಾಟಿನ ಕುರಿತು ದಾಖಲೆ‌ ಸಲ್ಲಿಸಲಾಗುವುದು.
ಕುಮಾರ್‌ ಅಂತರಸನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.