ADVERTISEMENT

ಉಡುಪಿ | ಹವಾಮಾನ ವೈಪರೀತ್ಯ: ಅವಧಿಗೆ ಮುನ್ನವೇ ದೋಣಿಗಳು ದಡಕ್ಕೆ

ಬೇಸಿಗೆ ಕೊನೆ ದಿನಗಳ ಮೀನುಗಾರಿಕೆಗೆ ಬರೆ

ನವೀನ್ ಕುಮಾರ್ ಜಿ.
Published 22 ಮೇ 2025, 6:07 IST
Last Updated 22 ಮೇ 2025, 6:07 IST
<div class="paragraphs"><p>ಮಲ್ಪೆಯ ದಕ್ಕೆಯಲ್ಲಿ ಲಂಗರು ಹಾಕಿರುವ ಮೀನುಗಾರಿಕಾ ದೋಣಿಗಳು ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ</p></div>

ಮಲ್ಪೆಯ ದಕ್ಕೆಯಲ್ಲಿ ಲಂಗರು ಹಾಕಿರುವ ಮೀನುಗಾರಿಕಾ ದೋಣಿಗಳು ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ

   

ಉಡುಪಿ: ಸಾಮಾನ್ಯವಾಗಿ ಜೂನ್ 1ರಿಂದ ಟ್ರಾಲಿಂಗ್‌ ನಿಷೇಧ ಜಾರಿಗೆ ಬರುವಾಗ ದಡ ಸೇರುವ ಆಳಸಮುದ್ರ ಮೀನುಗಾರಿಕಾ ದೋಣಿಗಳು ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಅವಧಿಗೆ ಮುನ್ನವೇ ದಡ ಸೇರಿವೆ.

ಭಾರಿ ಮಳೆ, ಸಮುದ್ರದಲ್ಲಿ ತೂಫಾನ್‌ ಏಳುವ ಸಾಧ್ಯತೆ ಇರುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮೀನುಗಾರಿಕಾ ದೋಣಿಗಳು ಮಲ್ಪೆ ಬಂದರಿಗೆ ವಾಪಾಸಾಗಿವೆ.

ADVERTISEMENT

ಈ ವರ್ಷವಿಡೀ ಮತ್ಸಕ್ಷಾಮದಿಂದಾಗಿ ಮೀನುಗಾರರಿಗೆ ನಷ್ಟ ಉಂಟಾಗಿತ್ತು. ಆದರೆ ಏಪ್ರಿಲ್‌, ಮೇ ತಿಂಗಳಲ್ಲಿ ಬಂಗುಡೆ, ಬೂತಾಯಿ ಸೇರಿದಂತೆ ಹಲವು ಬಗೆಯ ಮೀನುಗಳು ಸಿಗುತ್ತಿದ್ದವು. ಇನ್ನೂ ಸುಮಾರು ಹತ್ತು ದಿನ ಮೀನುಗಾರಿಕೆ ನಡೆಸಲು ಅವಕಾಶವಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಬೇಗನೆ ದಡ ಸೇರುವಂತಾಯಿತು ಎನ್ನುತ್ತಾರೆ ಮಲ್ಪೆಯ ಮೀನುಗಾರರು.

ಈಗ ದಡ ಸೇರಿರುವ ದೋಣಿಗಳು ಇನ್ನು ಮಳೆ ನಿಂತರೂ ಮೀನುಗಾರಿಕೆಗೆ ತೆರಳುವುದಿಲ್ಲ. ಹೊನ್ನಾವರ ಮೊದಲಾದೆಡೆ ಲಂಗರು ಹಾಕಿರುವ ಮಲ್ಪೆಯ ದೋಣಿಗಳು ಇಲ್ಲಿನ ದಕ್ಕೆಗೆ ವಾಪಸಾಗಲಿವೆ ಎಂದು ಅವರು ಹೇಳಿದ್ದಾರೆ.

ಕಳೆದ ಮಳೆಗಾಲದಲ್ಲಿ ಟ್ರಾಲಿಂಗ್‌ ನಿಷೇಧ ತೆರವಾದ ಬಳಿಕವೂ ಪದೇ ಪದೇ ಚಂಡಮಾರುತ ಎದ್ದಿದ್ದ ಪರಿಣಾಮವಾಗಿ ಮೀನುಗಾರಿಕಾ ದೋಣಿಗಳು ಆಗಾಗ ದಕ್ಕೆಗೆ ಮರಳುತ್ತಿದ್ದವು. ಇದರಿಂದ ಮೀನುಗಾರರಿಗೆ ನಷ್ಟ ಉಂಟಾಗಿತ್ತು. ಕಳೆದ ಮಳೆಗಾಲದಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ ನಾಡ ದೋಣಿಗಳಿಗೂ ಸಮುದ್ರಕ್ಕೆ ಇಳಿದು ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ.

‘ಈ ತಿಂಗಳ ಕೊನೆಯವರೆಗೆ ಮೀನುಗಾರಿಕೆ ಉತ್ತಮವಾಗಿ ನಡೆಯುವ ನಿರೀಕ್ಷೆ ಇತ್ತು ಆದರೆ. ಮುಂಗಾರು ಪೂರ್ವ ಮಳೆಯೇ ಅಬ್ಬರದಿಂದ ಸುರಿದಿರುವ ಕಾರಣ ಸಮಸ್ಯೆ ಉಂಟಾಗಿದೆ’ ಎಂದು ಮಲ್ಪೆಯ ಮೀನುಗಾರ ರತನ್‌ ತಿಳಿಸಿದರು.

‘ಕಳೆದ ವರ್ಷವಿಡೀ ಮಲ್ಪೆಯಲ್ಲಿ ಶೇ 20ರಷ್ಟು ದೋಣಿಗಳು ದಕ್ಕೆಯಲ್ಲೇ ಉಳಿದಿದ್ದವು. ಮೀನುಗಾರಿಕೆಗೆ ತೆರಳಿದ್ದ ಕೆಲವರಿಗಷ್ಟೇ ಲಾಭ ಸಿಕ್ಕಿದೆ. ಹೆಚ್ಚಿವರಿಗೆ ನಷ್ಟ ಉಂಟಾಗಿದೆ. ಹವಾಮಾನ ವೈಪರೀತ್ಯದ ಜೊತೆಗೆ ಮತ್ಸ್ಯಕ್ಷಾಮವೂ ಮೀನುಗಾರರನ್ನು ಹೈರಾಣು ಮಾಡಿತ್ತು’ ಎಂದು ಮಲ್ಪೆಯ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್‌ ತಿಳಿಸಿದರು.

ಊರಿಗೆ ಮರಳುತ್ತಿರುವ ಕಾರ್ಮಿಕರು

ಮಲ್ಪೆಯ ದಕ್ಕೆಯಲ್ಲಿ ಹಾಗೂ ಮೀನುಗಾರಿಕಾ ದೋಣಿಗಳಲ್ಲಿ ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿ‌ದ್ದಾರೆ. ಪ್ರತಿ ವರ್ಷ ಟ್ರಾಲಿಂಗ್‌ ನಿಷೇಧ ಜಾರಿಗೆ ಬಂದ ಬಳಿಕ ಅವರು ಊರಿಗೆ ಮರಳುತ್ತಿದ್ದರು. ಈ ವರ್ಷ ಅರ್ಧಕ್ಕಿಂತಲೂ ಹೆಚ್ಚು ಉತ್ತರ ಭಾರತದ ಕಾರ್ಮಿಕರು ಈಗಾಗಲೇ ಊರಿಗೆ ಮರಳಿದ್ದಾರೆ. ಬಲೆ ದುರಸ್ತಿ, ಹೊಸ ಬಲೆ ಸಿದ್ಧಪಡಿಸುವ ಕಾರ್ಯದಲ್ಲೂ ಉತ್ತರ ಭಾರತದ ಕಾರ್ಮಿಕರು ನುರಿತರಾಗಿರುವುದರಿಂದ ಅವರಲ್ಲಿ ಕೆಲವರು ಈ ಕೆಲಸಗಳಿಗಾಗಿ ಮಳೆಗಾಲದಲ್ಲೂ ಮಲ್ಪೆಯಲ್ಲಿ ಉಳಿದುಕೊಳ್ಳುತ್ತಾರೆ. ಬಹುತೇಕರು ತಮ್ಮ ಊರಿಗೆ ಮರಳುತ್ತಾರೆ.

ಇನ್ನೇನು ಟ್ರಾಲಿಂಗ್‌ ನಿಷೇಧಕ್ಕೆ ಕೆಲವೇ ದಿನಗಳಿರುವುದರಿಂದ ದೊಡ್ಡ ದೋಣಿಗಳೆಲ್ಲವೂ ಶೀಘ್ರ ಮಲ್ಪೆ ದಕ್ಕೆ ಸೇರಲಿವೆ. ಈಗಾಗಲೇ ಹಲವು ದೋಣಿಗಳು ದಕ್ಕೆಗೆ ಬಂದು ಲಂಗರು ಹಾಕಿವೆ.
- ರತನ್‌, ಮೀನುಗಾರ ಮಲ್ಪೆ
ಟ್ರಾಲಿಂಗ್‌ ನಿಷೇಧ ಸಂದರ್ಭ 9.9 ಎಚ್‌.ಪಿ. ಸಾಮರ್ಥ್ಯದ ಎಂಜಿನ್ ಹೊಂದಿರುವ ದೋಣಿಗಳ‌ಷ್ಟೇ ಮೀನುಗಾರಿಕೆ ನಡೆಸಬಹುದು. ಹವಾಮಾನ ಇಲಾಖೆ ಮುನ್ಸೂಚನೆಯನ್ನು ಪಾಲಿಸಬೇಕಿದೆ
-ವಿವೇಕ್‌, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ
ಹೆಚ್ಚಿನ ದೋಣಿಗಳು ಈಗಾಗಲೇ ಮಲ್ಪೆ ದಕ್ಕೆಗೆ ಬಂದಿವೆ. ಬಿಸಿಲಿನ ವಾತಾವರಣ ಬಂದರೂ ಅವು ಮತ್ತೆ ಮೀನುಗಾರಿಕೆಗೆ ತೆರಳುವ ಸಾಧ್ಯತೆ ಕಡಿಮೆ
-ಸಾಧು ಸಾಲ್ಯಾನ್‌, ಮಲ್ಪೆಯ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.