ಮಣಿಪಾಲದ ಎಂಜೆಸಿ ಬಸ್ ನಿಲ್ದಾಣದ ಸಮೀಪ ಇಂಟರ್‌ಲಾಕ್ ಮೇಲೆ ಬೀದಿ ಬದಿ ವ್ಯಾಪಾರ
ಉಡುಪಿ: ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುವ ಉಡುಪಿ ನಗರದ ವಿವಿಧೆಡೆ ಸಮರ್ಪಕ ಪಾದಚಾರಿ ಮಾರ್ಗವಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿರುವುದರ ನಡುವೆಯೇ ಬೀದಿ ಬದಿ ವ್ಯಾಪಾರಿಗಳೂ ಅಲ್ಲಲ್ಲಿ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ.
ಕಲ್ಸಂಕದಿಂದ ಕರಾವಳಿ ಜಂಕ್ಷನ್‌ವರೆಗಿನ ರಸ್ತೆ ಬದಿ, ಸಿಟಿ ಬಸ್ ನಿಲ್ದಾಣದ ಬಳಿ, ಮಣಿಪಾಲ, ಗುಂಡಿಬೈಲ್ ರಸ್ತೆ ಸೇರಿದಂತೆ ವಿವಿಧೆಡೆ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲೇ ವ್ಯಾಪಾರ ನಡೆಸುತ್ತಿರುವುದರಿಂದ ಜನರು ರಸ್ತೆಯಲ್ಲೇ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಣಿಪಾಲದ ರಾಷ್ಟ್ರೀಯ ಹೆದ್ದಾರಿ ಬದಿಯ ಎಂ.ಜೆ.ಸಿ. ಬಸ್ ನಿಲ್ದಾಣದ ಸಮೀಪ ಸಂಜೆಯಾಗುತ್ತಿದ್ದಂತೆ ಹಣ್ಣಿನ ವ್ಯಾಪಾರಿಗಳು ಹಾಗೂ ಇತರ ಬೀದಿ ಬದಿ ವ್ಯಾಪಾರಿಗಳು ತಮ್ಮ ವಾಹನಗಳನ್ನು ನಿಲ್ಲಿಸಿ, ಟಾರ್ಪಲ್ ಹರಡಿ ವ್ಯಾಪಾರ ನಡೆಸುತ್ತಾರೆ ಇದರಿಂದ ನಡೆದಾಡಲು ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಮಾತ್ರವಲ್ಲದೆ ರಸ್ತೆ ಬದಿಯ ಇಂಟರ್‌ಲಾಕ್ ಹಾಕಿದ ಜಾಗವನ್ನೂ ಅತಿಕ್ರಮಿಸಿಕೊಳ್ಳುತ್ತಾರೆ. ಇಂತಹ ವ್ಯಾಪಾರಿಗಳಿಂದ ಹಣ್ಣು ಖರೀದಿಸುವ ಸಲುವಾಗಿ ಗ್ರಾಹಕರು ಕಾರು ಸೇರಿದಂತೆ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವ ಕಾರಣ ಅಪಘಾತಗಳೂ ಸಂಭವಿಸುತ್ತಿವೆ ಎಂದೂ ದೂರಿದ್ದಾರೆ.
ಮಣಿಪಾಲದಲ್ಲಿ ಹಣ್ಣು ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡಬೇಕಾಗಿದೆ. ಮಳೆ ಬಂದರೆ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ.
ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಮಸೀದಿ ರಸ್ತೆಗಳಲ್ಲಿ ಹೋಟೆಲ್ ಅಂಗಡಿಗಳ ಬೋರ್ಡ್‌ಗಳನ್ನೂ ಫುಟ್‌ಪಾತ್‌ನಲ್ಲಿ ಇರಿಸುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆಯಾಗುತ್ತಿದೆ.
ಕಲ್ಸಂಕದಿಂದ ಬನ್ನಂಜೆ ವರೆಗಿನ ರಸ್ತೆ ಬದಿಯಲ್ಲಿ ಸಂಜೆಯಾಗುತ್ತಲೇ ತಳ್ಳುಗಾಡಿಯವರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಗಾಡಿಗಳನ್ನು ಇರಿಸುವುದರಿಂದ ಪಾದಚಾರಿಗಳಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ವಾಹನ ದಟ್ಟಣೆಗೂ ಇದು ಕಾರಣವಾಗುತ್ತಿದೆ ಎಂಬ ದೂರುಗಳೂ ಕೇಳಿ ಬರುತ್ತಿವೆ.
ಇದೇ ರಸ್ತೆಯಲ್ಲಿ ಜನರು ವಾಹನಗಳನ್ನು ನಿಲ್ಲಿಸುವುದರಿಂದಲೂ ಸಮಸ್ಯೆಯಾಗುತ್ತಿದೆ. ನಗರಸಭೆ ಕಚೇರಿಯ ಮುಂಭಾಗದ ರಸ್ತೆಗಳಲ್ಲೂ ವಾಹನಗಳನ್ನು ನಿಲ್ಲಿಸುವುದರಿಂದಲೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ.
ನಗರದ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿಡುವುದರಿಂದಲೂ ಪಾದಚಾರಿಗಳಿಗೆ ದಾರಿ ಇಲ್ಲದಂತಾಗಿದೆ. ಇದರಿಂದ ಪಾದಚಾರಿಗಳು ಜೀವಭಯದಿಂದ ರಸ್ತೆಯಲ್ಲೇ ನಡೆದಾಡಬೇಕಾದ ಪರಿಸ್ಥಿತಿ ಇದೆ.
ಸಂಬಂಧಪಟ್ಟವರು ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಪ್ರತ್ಯೇಕ ಜಾಗವನ್ನು ಗುರುತಿಸಿ, ಅವರನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
'ಮಣಿಪಾಲದಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಸ್ವಂತ ಜಾಗದಲ್ಲಿ ಅಥವಾ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವಂತೆ ಹೆದ್ದಾರಿ ಬದಿಯಲ್ಲಿ ತಮ್ಮ ವಾಹನಗಳನ್ನು ಬಳಸಿ, ಟಾರ್ಪಾಲ್ ಹಾಕಿ ವ್ಯಾಪಾರ ಮಾಡುತ್ತಾರೆ. ಮಧ್ಯಾಹ್ನದ ನಂತರ ಅಧಿಕಾರಿಗಳು ಬರುವುದಿಲ್ಲ. ಈ ಕಾರಣಕ್ಕೆ ವ್ಯಾಪಾರ ಜೋರಾಗುತ್ತದೆ’ ಎಂದು ಮಣಿಪಾಲದ ಹಿರಿಯ ನಾಗರಿಕರೊಬ್ಬರು ಅಳಲು ತೋಡಿಕೊಂಡರು.
ಉಡುಪಿ ನಗರದಲ್ಲಿ ಫುಟ್‌ಪಾತ್‌ನಲ್ಲೇ ಅಂಗಡಿ ಹೋಟೆಲ್‌ಗಳ ಫಲಕಗಳನ್ನು ಇರಿಸುವುದರಿಂದ ನಡೆದಾಡಲು ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.ಶ್ರೀನಿವಾಸ್ ಆದಿ ಉಡುಪಿ
‘ವೆಂಡರ್ ಝೋನ್ ನಿರ್ಮಾಣ’ ಬೀದಿ ಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವುದರ ಬಗ್ಗೆ ನಮಗೂ ದೂರುಗಳು ಬಂದಿವೆ. ನಾವು ಆಗಾಗ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಜಾಗದಲ್ಲಿ ವೆಂಡರ್ ಝೋನ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು. ಬ್ರಹ್ಮಗಿರಿ ಸಂತೆಕಟ್ಟೆ ಆದಿ ಉಡುಪಿ ಮಣಿಪಾಲ ಮೊದಲಾದೆಡೆ ಇಂತಹ ವೆಂಡರ್ ಝೋನ್‌ಗಳನ್ನು ನಿರ್ಮಿಸಲಾಗುವುದು. ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನೂ ಅಲ್ಲಿ ವ್ಯಾಪಾರಿಗಳಿಗೆ ಕಲ್ಪಿಸಲಾಗುವುದು ಎಂದೂ ಅವರು ಹೇಳಿದರು.
‘ಸಂಬಂಧಪಟ್ವರು ಕ್ರಮ ಕೈಗೊಳ್ಳಿ’ ಮಣಿಪಾಲದ ಎಂಜೆಸಿ ಬಸ್ ನಿಲ್ದಾಣದ ಸಮೀಪ ಹೆದ್ಧಾರಿ ಬದಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದಾಗಿ ಜನರಿಗೆ ನಡೆದಾಡಲೂ ಸಮಸ್ಯೆಯಾಗುತ್ತಿದೆ. ಮಧ್ಯಾಹ್ನದ ನಂತರ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಆರಂಭಿಸುತ್ತಾರೆ. ಫುಟ್‌ಪಾತನ್ನೂ ದಾಟಿ ಇಂಟರ್‌ಲಾಕ್ ಹಾಕಿದ ಸ್ಥಳದಲ್ಲಿ ಇವರ ವ್ಯಾಪಾರ ಚಟುವಟಿಕೆಗಳು ಗರಿಗೆದರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಣಿಪಾಲದ ಹಿರಿಯ ನಾಗರಿಕರಾದ ಸುರೇಶ್ ರಾವ್ ಮತ್ತಿತರರು ಒತ್ತಾಯಿಸಿದ್ದಾರೆ.
‘ಫುಟ್‌ಪಾತ್ ನುಂಗುವವರಿಗೆ ಎಚ್ಚರಿಕೆ ನೀಡಿ’ ‘ಉಡುಪಿ ನಗರದಲ್ಲಿ ಫುಟ್‌ಪಾತ್‌ಗಳಲ್ಲಿ ಬೀದಿ ವ್ಯಾಪಾರ ವಿಪರೀತವಾಗಿದೆ. ಟ್ರಾಫಿಕ್ ಪೊಲೀಸರಾಗಲಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ನೇೂಡಿದರೂ ಕಣ್ಣು ಮುಚ್ಚಿಕೊಂಡೆ ತಿರುಗಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ. ದೊಡ್ಡ ಅಂಗಡಿಗಳ ಸರಕುಗಳನ್ನು ಚಾಚಿಕೊಂಡು ಫುಟ್‌ಪಾತ್ ಅನ್ನೇ ಬೀದಿ ಬದಿ ವ್ಯಾಪಾರಿಗಳು ನುಂಗಿ ಬಿಟ್ಟಿದ್ದಾರೆ. ಇಂದ್ರಾಳಿಯ ರೈಲ್ವೆ ಬ್ರಿಡ್ಜ್ ಮುಂದೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪಾದಚಾರಿಗಳು ಸಾಗುವ ಪ್ರಮುಖ ರಸ್ತೆಯ ಬದಿಯಲ್ಲಿಯೇ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಪ್ರದಶ೯ನಕ್ಕೆ ಇಟ್ಟಿರುವುದನ್ನು ನೇೂಡಿದರೆ ನಮ್ಮ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. ಬರೇ ಸಣ್ಣಪುಟ್ಟ ಬೀದಿ ವ್ಯಾಪಾರಿಗಳನ್ನು ಎಬ್ಬಿಸುವ ಮೊದಲು ಇಂತಹ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡಬೇಕು ಆಗ ಮಾತ್ರ ಸರಿ ದಾರಿಗೆ ಬರಬಹುದು’ ಎಂದು ಉಡುಪಿಯ ನಿವೃತ್ತ ಪ್ರಾಧ್ಯಾಪಕ ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.