ADVERTISEMENT

ಉಡುಪಿ: ಜಮೀನು, ಭೂ ಪರಿವರ್ತನೆ ಗೊಂದಲಕ್ಕೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:46 IST
Last Updated 14 ಡಿಸೆಂಬರ್ 2025, 7:46 IST
ಕೆ.ಜಯಪ್ರಕಾಶ್ ಹೆಗ್ಡೆ
ಕೆ.ಜಯಪ್ರಕಾಶ್ ಹೆಗ್ಡೆ   

ಕುಂದಾಪುರ: ಹೆದ್ದಾರಿ ಸಮೀಪ ವಸತಿ– ವಸತಿಯೇತರ ಉದ್ದೇಶದ ಜಮೀನಿನ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದಾಗ ಲೋಕೋಪಯೋಗಿ ಇಲಾಖೆಯಿಂದ ನಿರಕ್ಷೇಪಣಾ ಪತ್ರ ಬೇಕು ಎಂಬ ಕಾರಣಕ್ಕೆ ಯೋಜನಾ ಪ್ರಾಧಿಕಾರದಿಂದ ಆಗುತ್ತಿದ್ದ ವಿಳಂಬವನ್ನು ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿ ಸರಳೀಕರಿಸಿದ್ದಾರೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಿಂದ ತಾಂತ್ರಿಕ ಅನುಮೋದನೆಗೆ ನಗರ, ಗ್ರಾಮಾಂತರ ಯೋಜನಾ ಕಚೇರಿ, ಉಡುಪಿ ಕಚೇರಿಗೆ ಕಳುಹಿಸಲಾಗುತ್ತದೆ. ತಾಂತ್ರಿಕ ಅನುಮೋದನೆಗೂ ಮೊದಲು ಲೋಕೋಪಯೋಗಿ, ಕರಾವಳಿ ನಿಯಂತ್ರಣ, ಅರಣ್ಯ ಇಲಾಖೆ, ಇತರ ಸಂಬಂಧಿತ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಲಾಗುತ್ತಿತ್ತು.

ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಜಿಲ್ಲಾ ಮುಖ್ಯ ರಸ್ತೆ, ಹೆದ್ದಾರಿಗಳು, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಹಾದು ಹೋಗಿರುವುದರಿಂದ, ದಾಖಲಿತ ರಸ್ತೆಯ ಭೂ ಗಡಿಯ ಅಂಚಿನಿಂದ ಕಟ್ಟಡ ರೇಖೆಯ ಅಂತರ ನಮೂದಿಸುವಲ್ಲಿ ಗೊಂದಲವಾಗಿ ವಿಳಂಬವಾಗುತ್ತಿತ್ತು.

ADVERTISEMENT

ಈ ಸಮಸ್ಯೆಯನ್ನು ಮನಗೊಂಡ ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಮತ್ತು ಆನಗಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ್ ಅವರು, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರಿಂದ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸಮಸ್ಯೆಯ ಗಂಭೀರತೆ ಹಾಗೂ ನಿಯಮಾವಳಿ ಸರಳೀಕರಣಗೊಳಿಸಲು ಜಿಲ್ಲಾಧಿಕಾರಿ, ಲೋಕೋಪಯೋಗಿ ಎಇ, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರು ಹಾಗೂ ಇತರ ಅಧಿಕಾರಿಗಳೊಂದಿಗೆ ಜಯಪ್ರಕಾಶ್ ಹೆಗ್ಡೆ ಸಭೆ ನಡೆಸಿದ್ದರು. ನಗರ ಯೋಜನಾ ವಿಭಾಗದಿಂದ ಭೂ ಪರಿವರ್ತನೆಯ ಉದ್ದೇಶದ ಪ್ರಸ್ತಾವನೆಗಳನ್ನು ಶೀಘ್ರವಾಗಿ ಅನುಮೋದಿಸುವ ಅಥವಾ ತಿರಸ್ಕರಿಸುವ ಕಾಲಮಿತಿಯೊಳಗೆ ನಿಯಮಾನುಸಾರವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ನೀಡುವಾಗ, ಲೋಕೋಪಯೋಗಿ ಇಲಾಖೆಯ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇಲ್ಲದಿರುವುದನ್ನು ಗಮನಕ್ಕೆ ತಂದು, ಕರಾವಳಿ ಭಾಗದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸರಳ ನಿಯಮ ಅಳವಡಿಸುವಂತೆ ಸಲಹೆ ನೀಡಿದ್ದರು.

ಈ ಸಭೆಯ ಅಭಿಪ್ರಾಯದಂತೆ ಈ ಹಿಂದೆ ಇದ್ದ ಷರತ್ತುಗಳನ್ನು ಹೊರತು ಪಡಿಸಿ, ಸರಳೀಕೃತವಾಗಿ ಅನುಮತಿ ನೀಡಲು ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದು  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.