ADVERTISEMENT

ಉಡುಪಿ | ಸರ್ವಿಸ್‌ ರಸ್ತೆಗಳಲ್ಲಿ ಬೃಹತ್‌ ಹೊಂಡಗಳ ನಿರ್ಮಾಣ: ಮುಗಿಯದ ಕಾಮಗಾರಿಗಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:48 IST
Last Updated 8 ಸೆಪ್ಟೆಂಬರ್ 2025, 5:48 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಮುಗಿಯದ ಕಾಮಗಾರಿ, ಹೊಂಡಮಯ ರಸ್ತೆಯಿಂದಾಗಿ ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಉಡುಪಿ ನಗರ ವ್ಯಾಪ್ತಿಯ ಸಂತೆಕಟ್ಟೆ ಅಂಡರ್‌ ಪಾಸ್‌, ಇಂದ್ರಾಳಿ ರೈಲ್ವೆ ಮೇಲ್ಸೇತುವೆ, ಅಂಬಲಪಾಡಿ ಮೇಲ್ಸೇತುವೆ, ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ದಡ ಮುಟ್ಟದೆ ಜನರು ಸಂಕಷ್ಟ ಅನುಭವಿಸುಂತಾಗಿದೆ.

ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಸಂತೆಕಟ್ಟೆ ಕಲ್ಯಾಣಪುರ ಅಂಡರ್‌ಪಾಸ್ ಕಾಮಗಾರಿ ಇನ್ನೂ ಮುಗಿಯುವ ಹಂತಕ್ಕೆ ತಲುಪಿಲ್ಲ. ಇಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿ ತಡೆಗೋಡೆ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ವಾಹನ ಸವಾರರಿಗೆ ಗೋಳು ತಪ್ಪಿಲ್ಲ.

ADVERTISEMENT

ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್‌ ರಸ್ತೆಗಳಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಬಿಸಿಲಿನ ವಾತಾವರಣವಿದ್ದರೂ ಸಂಬಂಧಪಟ್ಟವರು ರಸ್ತೆ ಹೊಂಡ ಮುಚ್ಚುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಜನರು ದೂರುತ್ತಾರೆ. ಸಂತೆಕಟ್ಟೆ ಅಂಡರ್‌ಪಾಸ್‌ ಕಾಮಗಾರಿ ಶೀಘ್ರ ಮುಗಿಸಲಾಗುವುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಹಲವು ತಿಂಗಳ ಹಿಂದೆಯೇ ಭರವಸೆ ನೀಡಿದ್ದರೂ ಇನ್ನೂ ಅದು ಈಡೇರಿಲ್ಲ ಎನ್ನುತ್ತಾರೆ ಜನರು.

ಇಂದ್ರಾಳಿ ರೈಲ್ಪೆ ಮೇಲ್ಸೇತುವೆ ಕಾಮಗಾರಿ ಗರ್ಡರ್‌ ಅಳವಡಿಸಿ ತಿಂಗಳುಗಳು ಕಳೆದರೂ ಇನ್ನೂ ಮುಗಿದಿಲ್ಲ. ಗರ್ಡರ್‌ ಅಳವಡಿಸಿದ ಬಳಿಕ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಜನಪ್ರತಿನಿಧಿಗಳು ಈ ಹಿಂದೆ ಭರವಸೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿ 169 ಎ ಕೆಳಪರ್ಕಳದಲ್ಲಿ ತೀರಾ ಹದಗೆಟ್ಟಿದ್ದು ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದೆ. ತಾತ್ಕಾಲಿಕವಾಗಿ ಹೊಂಡ ಮುಚ್ಚಿದರೂ ಕೆಲವೇ ದಿನಗಳಲ್ಲಿ ಅದು ಎದ್ದು ಹೋಗುತ್ತಿದೆ. ಇದರಿಂದಾಗಿ ಮಣಿಪಾಲ ಆಸ್ಪತ್ರೆಗೆ ಬರುವವರಿಗೂ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಹೇಳ ತೀರದಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಇನ್ನೂ ಚುರುಕುಗೊಂಡಿಲ್ಲ. ಈ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿರುವುದರಿಂದ ವಾಹನಗಳು ತೆವಳಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಮಲ್ಪೆಯ ಸರ್ವ ಋತು ಮೀನುಗಾರಿಕಾ ಬಂದರಿಗೆ ಹಾಗೂ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಅಧ್ವಾನದಿಂದ ಸಾಗಬೇಕಾದ ಸ್ಥಿತಿ ಇದೆ. ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳನ್ನು ಮುಚ್ಚುವ ಕೆಲಸಕ್ಕೂ ಸಂಬಂಧಪಟ್ಟವರು ಮುಂದಾಗಿಲ್ಲ. ಇದರಿಂದ ನಿತ್ಯ ಸಂಕಷ್ಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ಅಂಬಲಪಾಡಿಯಲ್ಲಿ ಮೇಲ್ಸೇತುವೆ ನಡೆಯುವ ಸ್ಥಳದಲ್ಲಿ ಸರ್ವಿಸ್‌ ರಸ್ತೆಗಳು ಹೊಂಡಗಳಿಂದ ಆವೃತವಾಗಿದ್ದರೂ ಸಂಬಂಧಪಟ್ಟವರು ಹೊಂಡ ಮುಚ್ಚಲು ಮುಂದಾಗಿಲ್ಲ. ಕೆಲ ದಿನಗಳ ಹಿಂದೆ ರಸ್ತೆ ಹೊಂಡದಿಂದಾಗಿ ಬೈಕ್‌ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದರು.

ಸದ್ಯ ಮಳೆ ಕಡಿಮೆಯಾಗಿದ್ದು ರಾಷ್ಟ್ರೀಯ ಹೆದ್ದಾರಿಯ ಹೊಂಡ ಮುಚ್ಚುವ ಕಾರ್ಯವನ್ನು ಸಂಬಂಧಪಟ್ಟವರು ತುರ್ತಾಗಿ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೂರಕ ಮಾಹಿತಿ: ವಾಸುದೇವ ಭಟ್‌, ಹಮೀದ್‌ ಪಡುಬಿದ್ರಿ, ಶೇಷಗಿರಿ ಭಟ್‌

ಹರಿರಾಮ್‌ ಶಂಕರ್‌ 
ಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆ –ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ದಡಮುಟ್ಟದ ಸಂತೆಕಟ್ಟೆ ಅಂಡರ್‌ಪಾಸ್‌ ಕಾಮಗಾರಿ 
ಅಂಬಲಪಾಡಿಯ ಹೊಂಡಮಯ ಸರ್ವಿಸ್‌ ರಸ್ತೆ
ಅಂಬಲಪಾಡಿಯ ಸರ್ವಿಸ್‌ ರಸ್ತೆಗಳು ತೀರಾ ಹದಗೆಟ್ಟಿದ್ದು ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿವೆ. ಈ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಲು ಸಂಬಂಧಪಟ್ಟವರು ಮುಂದಾಗಬೇಕು.
ಶ್ರೀಕಾಂತ್‌ ಅಂಬಲಪಾಡಿ
‘22 ಹೆಚ್ಚುವರಿ ಸ್ಥಳ ಗುರುತು’
ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ 22 ಬ್ಲ್ಯಾಕ್‌ ಸ್ಪಾಟ್‌ಗಳಿವೆ. ಇದಲ್ಲದೆ ಹೆಚ್ಚು ಅಪಘಾತಗಳು ಸಂಭವಿಸುವ 22 ಹೆಚ್ಚುವರಿ ಸ್ಥಳಗಳನ್ನು ಪೊಲೀಸ್‌ ಇಲಾಖೆ ಗುರುತಿಸಿ ಅಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದರು. 22 ಹೆಚ್ಚುವರಿ ಸ್ಥಳಗಳಿಗೆ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದೂ ಅವರು ತಿಳಿಸಿದರು.
‘ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿ’
ಜಿಲ್ಲೆಯ ಬಹುತೇಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಮಳೆಯಿಂದಾಗಿ ಅಡ್ಡಿಯಾಗಿದೆ. ಪರ್ಕಳದಲ್ಲಿ ಹದಗೆಟ್ಟಿರುವ ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಮಳೆ ನಿಂತ ಬಳಿಕ ಈ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಅಧಿಕವಾದ ಕಾರಣ ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇಂದ್ರಾಳಿಯಲ್ಲಿ ಸಂಪರ್ಕ ರಸ್ತೆಯ ಕಾಂಕ್ರಿಟ್‌ ಕಾಮಗಾರಿ ಮುಗಿದಿದೆ. ಈ ತಿಂಗಳ ಅಂತ್ಯದೊಳಗೆ ರೈಲ್ವೆ ಮೇಲ್ಸೇತುವೆ ವಾಹನ ಸವಾರರಿಗೆ ಮುಕ್ತವಾಗಲಿದೆ ಎಂದೂ ಅವರು ಹೇಳಿದರು.

ಜಿಲ್ಲೆಯ ಬಹುತೇಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಮಳೆಯಿಂದಾಗಿ ಅಡ್ಡಿಯಾಗಿದೆ. ಪರ್ಕಳದಲ್ಲಿ ಹದಗೆಟ್ಟಿರುವ ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಮಳೆ ನಿಂತ ಬಳಿಕ ಈ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಅಧಿಕವಾದ ಕಾರಣ ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಇಂದ್ರಾಳಿಯಲ್ಲಿ ಸಂಪರ್ಕ ರಸ್ತೆಯ ಕಾಂಕ್ರಿಟ್‌ ಕಾಮಗಾರಿ ಮುಗಿದಿದೆ. ಈ ತಿಂಗಳ ಅಂತ್ಯದೊಳಗೆ ರೈಲ್ವೆ ಮೇಲ್ಸೇತುವೆ ವಾಹನ ಸವಾರರಿಗೆ ಮುಕ್ತವಾಗಲಿದೆ ಎಂದೂ ಅವರು ಹೇಳಿದರು.

‘ಅವೈಜ್ಞಾನಿಕ ಕಾಮಗಾರಿ’ ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಿಂದ ಕಾಪುವರೆಗೆ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಜನರು ತಿಳಿಸಿದ್ದಾರೆ. ಹೆಜಮಾಡಿ ಪಡುಬಿದ್ರಿ ಎರ್ಮಾಳು ಉಚ್ಚಿಲ ಮೂಳೂರು ಕೊಪ್ಪಲಂಗಡಿ ಕಾಪು ಉಳಿಯರಗೋಳಿಯ ಹೆದ್ದಾರಿಯಲ್ಲಿ ಬಹುತೇಕ ಕಡೆ ಸರ್ವೀಸ್ ರಸ್ತೆಗಳೇ ಇಲ್ಲ. ಮಳೆ ಬಂದಲ್ಲಿ ಮಳೆ ನೀರು ಹೆದ್ದಾರಿಯಲ್ಲಿಯೇ ಹರಿಯುವುದರಿಂದ ವಾಹನಗಳ ಸಂಚಾರದ ವೇಳೆ ಇನ್ನೊಂದು‌ ವಾಹನಕ್ಕೆ ಅಡಚಣೆ ಉಂಟಾಗಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿದೆ.

‘ದಡ ಸೇರದ ಕಾಮಗಾರಿ’ ಕಾರ್ಕಳ: ತಾಲ್ಲೂಕಿನ ಸಾಣೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ಸಮಸ್ಯೆಗಳು ಹಾಗೇ ಮುಂದುವರಿದಿವೆ. ಇಲ್ಲಿನ ಸುಮಾರು 2 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಇನ್ನೂ ಪ್ರಸ್ತಾವನೆ ಅಂಗೀಕಾರ ಆಗಿಲ್ಲ. ಈ ಕುರಿತು ಹಲವು ಪ್ರತಿಭಟನೆಗಳನ್ನು ಮಾಡಿ ಸಂಬಂಧಪಟ್ಟವರಿಗೆ ವಿನಂತಿಸಿಕೊಂಡರೂ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎನ್ನುತ್ತಾರೆ ಸಾಣೂರಿನ ಗ್ರಾಮಸ್ಥರು. ಸರ್ವಿಸ್ ರಸ್ತೆಗಳಿಲ್ಲದೆ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಅಡ್ಡರಸ್ತೆಯಿಂದ ವಾಹನಗಳು ಮತ್ತು ಜನರು ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದು ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ. ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ‘ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರವುಗೊಳಿಸಿದ ಹಳೆ ಬಸ್‌ ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳ ಬದಲಿಗೆ ಹೊಸ ಬಸ್‌ತಂಗುದಾಣ ಮತ್ತು ರಿಕ್ಷಾ ತಂಗುದಾಣಗಳನ್ನು ಕೂಡಲೇ ನಿರ್ಮಿಸಬೇಕು’ ಎಂದು ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿದ್ದಾರೆ.

ಈಡೇರದ ಬೇಡಿಕೆ ಬ್ರಹ್ಮಾವರದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕ್ಯಾಟಲ್ ಪಾಸ್ ತೆಗೆದು ಫ್ಲೈಓವರ್ ನಿರ್ಮಿಸಬೇಕೆಂಬುದು ಸೇರಿದಂತೆ ವಿವಿಧ  ಬೇಡಿಕೆಗಳ ಕುರಿತು ಸಾಕಷ್ಟು ಬಾರಿ ರಾಷ್ಟ್ರೀಯ ಹೆದ್ದಾರಿ 66 ಹೋರಾಟ ಸಮಿತಿಯ ವತಿಯಿಂದ ಮತ್ತು ಇನ್ನಿತರ ಸಂಘ ಸಂಸ್ಥೆಗಳಿಂದ ಹಲವು ಮನವಿಯನ್ನು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಉಪ್ಪಿನಕೋಟೆಯಿಂದ ರುಡ್‌ಸೆಟ್‌ವರೆಗೆ ಎರಡೂ ಬದಿಯಲ್ಲಿ ಸರ್ವಿಸ್‌ ರಸ್ತೆ ರಚನೆಯ ಬಗ್ಗೆ ಹೋರಾಟ ನಡೆಯುತ್ತಿದೆ. ಹೋರಾಟದ ಫಲವಾಗಿ ಸದ್ಯ ಮಹೇಶ್‌ ಆಸ್ಪತ್ರೆಯಿಂದ ಎಸ್‌.ಎಂ.ಎಸ್‌ ವರೆಗೆ ಸರ್ವಿಸ್‌ ರಸ್ತೆ ನಿರ್ಮಾಣದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆಯಾದರೂ ಅಪಘಾತ ತಾಣವಾದ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.