
ಉಡುಪಿ: ನಿಷೇಧಾಜ್ಞೆ ಉಲ್ಲಂಘಿಸಿ 80 ಬಡಗಬೆಟ್ಟು ಗ್ರಾಮದಲ್ಲಿ ಉಡುಪಿ ಕಂಬಳದ ಕರೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಪದ ಮೇರೆಗೆ ಸಂಸದ, ಶಾಸಕರು ಸೇರಿದಂತೆ 37 ಮಂದಿಯ ವಿರುದ್ಧ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಸುನಿಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜ, ರಾಜೇಶ್ ನಾಯಕ್, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ರಾಜ್ಯ ಕಂಬಳ ಆಸೋಸಿಯೇಶನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮೊದಲಾದವರ ವಿರುದ್ದ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಇಲಾಖೆ ವತಿಯಿಂದ ಉಡುಪಿ ಕಂಬಳದ ಕರೆಯ ಶಂಕುಸ್ಥಾಪನೆಯನ್ನು ಮಾ. 4 ರಂದು ನಡೆಸಲು ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿತ್ತು. ಅದರ ನಡುವೆಯೇ ಬಿಜೆಪಿಯ ಸಂಸದರು–ಶಾಸಕರು ಹಾಗೂ ಕಂಬಳ ಸಮಿತಿಯವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಕಂಬಳ ಕರೆ ಶಂಕುಸ್ಥಾಪನೆ ಕಾರ್ಯಕ್ರಮದ ಕುರಿತು ಗೊಂದಲ ಉಂಟಾದ ಕಾರಣ ಯುವ ಸಬಲೀಕರಣ ಇಲಾಖೆಯ 6.30 ಎಕರೆ ಜಮೀನಿನ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
‘ನಾವು ಶಂಕುಸ್ಥಾಪನೆಯನ್ನು ಫೆ. 28 ರಂದು ನಡೆಸಲು ನಿರ್ಧರಿಸಿದ್ದೆವು. ಮಾರ್ಚ್ 4ರಂದು ದಿನಾಂಕ ನಿಗದಿ ಆಗಿದೆ ಎಂದು ಶುಕ್ರವಾರ ರಾತ್ರಿ ಜಿಲ್ಲಾಡಳಿತ ಸಂದೇಶ ನೀಡಿತು. ಮುಹೂರ್ತ ನಿಗದಿ ಆಗಿದ್ದರಿಂದ ಶನಿವಾರವೇ ನೆರವೇರಿಸಿದ್ದೇವೆ’ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.