ಉಡುಪಿ: ಕೇಂದ್ರದ ಎನ್‌ಡಿಎ ಸರ್ಕಾರವು ಕಳೆದ 11 ವರ್ಷಗಳಲ್ಲಿ ಕರ್ನಾಟಕಕ್ಕೆ ನೀಡಿದ ಅನುದಾನದ ಶೇ 25ರಷ್ಟನ್ನು ಕೂಡ ಹಿಂದಿನ ಯುಪಿಎ ಸರ್ಕಾರ ನೀಡಿಲ್ಲ. ಯುಪಿಎ ಸರ್ಕಾರವು ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಉಡುಪಿಯ ರಾಷ್ಟ್ರೀಯ ಹೆದ್ದಾರಿ ‘169ಎ’ಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಬಹುಕಾಲದಿಂದ ವಿಳಂಬವಾಗಿತ್ತು. ಈಗ ಸಾಕಾರವಾಗಿರುವುದರಿಂದ ಈ ಪ್ರದೇಶದಲ್ಲಿ ಸಂಚಾರದ ಅಡಚಣೆಗಳು ಕಡಿಮೆಯಾಗಲಿವೆ ಎಂದು ಹೇಳಿದರು.
ಯಾವುದೇ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದಾರೆ. ರೈಲ್ವೆ ಇಲಾಖೆಯ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳಿಂದಾಗಿ ಇಂದು ಕರಾವಳಿ ಭಾಗದಲ್ಲಿ ಪ್ರಗತಿಯಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ರಾಜ್ಯದಲ್ಲಿ 6 ಸಾವಿರ ಕಿ.ಮೀ. ಇದ್ದ ರಾಷ್ಟ್ರೀಯ ಹೆದ್ದಾರಿ ಇಂದು 10 ಸಾವಿರ ಕಿ.ಮೀ. ಆಗಿ ವಿಸ್ತರಣೆಯಾಗಿದೆ. ಅಮೃತ ಭಾರತ ಸ್ಟೇಷನ್ ಯೋಜನೆಯ ಅಡಿಯಲ್ಲಿ ಚಿಕ್ಕಮಗಳೂರು ರೈಲು ನಿಲ್ದಾಣದಲ್ಲಿ ₹22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಉಡುಪಿ ರೈಲು ನಿಲ್ದಾಣವನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಅರಸೀಕೆರೆ–ತುಮಕೂರು (96 ಕಿ.ಮೀ.) ಡಬ್ಬಲ್ ಲೈನ್ ಕಾಮಗಾರಿ ₹750 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ₹187 ಕೋಟಿ ವೆಚ್ಚದ ಚಿಕ್ಕಬಾಣಾವರ–ಹಾಸನ (165 ಕಿ.ಮೀ.) ಮಾರ್ಗದ ವಿದ್ಯುತೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಕಾರ್ಕಳ–ಧರ್ಮಸ್ಥಳ–ಸುಬ್ರಹ್ಮಣ್ಯ ರೈಲು ಮಾರ್ಗದ ಪ್ರಸ್ತಾಪವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚಿಸಲಾಗಿದೆ. ಹುಬ್ಬಳ್ಳಿ–ಅಂಕೋಲಾ ಯೋಜನೆಯ ಅಡೆತಡೆಗಳು ಕೂಡ ಪರಿಹಾರವಾಗಲಿದೆ. ಅರಣ್ಯ ಇಲಾಖೆಯ ಅನುಮತಿ ವಿಚಾರ ಈಗ ಪರಿಹಾರ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ಶಾಸಕರಾದ ವಿ.ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ಶಾಸಕ ಲಾಲಾಜಿ ಮೆಂಡನ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸತೀಶ್ ಕುಂಪಲ ಇದ್ದರು. ಗಿರೀಶ್ ಅಂಚನ್ ಸ್ವಾಗತಿಸಿದರು.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವಾಗಿದ್ದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆಯೇ ಎಫ್‌ಐಆರ್ ಹಾಕಿ ತಾಕೀತು ಮಾಡಿದ್ದೆವು. ಕ್ರಿಬ್ಸ್ ಕೊರತೆ ಬಿದ್ದಾಗ ಹುಬ್ಬಳ್ಳಿಯ ರೈಲ್ವೆ ಇಲಾಖೆಯಿಂದ ತರಿಸಿ ಕಾಮಗಾರಿ ಪೂರ್ಣಗೊಳಿಸಿದ್ದೇವೆಕೋಟ ಶ್ರೀನಿವಾಸ ಪೂಜಾರಿ, ಸಂಸದ
ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡಿರುವುದರಿಂದ ಜನಸಾಮಾನ್ಯರ ಅಗತ್ಯದ ಸಾಮಗ್ರಿಗಳ ದರ ಕಡಿಮೆಯಾಗಲಿದೆ. ಇದು ಆಮೂಲಾಗ್ರ ಬದಲಾವಣೆಗೆ ಕಾರಣವಾಗಲಿದೆವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.