ADVERTISEMENT

ಜೊಯಿಡಾ | ಹುಲಿ ಸಂರಕ್ಷಿತಾರಣ್ಯದಲ್ಲಿ ಕರಡಿ ಭಯ

ಮನೆಗಳಿಗೆ ನುಗ್ಗುವ ಆತಂಕ: ಒಬ್ಬಂಟಿ ರೈತರ ಮೇಲೆ ಹೆಚ್ಚುತ್ತಿರುವ ದಾಳಿ

ಗಣಪತಿ ಹೆಗಡೆ
Published 6 ಆಗಸ್ಟ್ 2025, 3:10 IST
Last Updated 6 ಆಗಸ್ಟ್ 2025, 3:10 IST
ಜೊಯಿಡಾ ತಾಲ್ಲೂಕಿನ ಅವೇಡಾದಲ್ಲಿ ಬಸ್ ತಂಗುದಾಣವೊಂದರಲ್ಲಿ ಕುಳಿತಿದ್ದ ಕರಡಿ
ಜೊಯಿಡಾ ತಾಲ್ಲೂಕಿನ ಅವೇಡಾದಲ್ಲಿ ಬಸ್ ತಂಗುದಾಣವೊಂದರಲ್ಲಿ ಕುಳಿತಿದ್ದ ಕರಡಿ   

ಕಾರವಾರ: ಜೊಯಿಡಾ ತಾಲ್ಲೂಕಿನ ವಾಗೇಲಿಯಲ್ಲಿ ಕೆಲ ದಿನಗಳ ಹಿಂದೆ ಮನೆ ಅಂಗಳದಲ್ಲಿ ಇರಿಸಿದ್ದ ಜೇನುಪೆಟ್ಟಿಗೆ ತೆರೆದು ಅದರಲ್ಲಿದ್ದ ಜೇನುತುಪ್ಪ ತಿನ್ನುತ್ತಿದ್ದ ಕರಡಿ ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಅಂತದ್ದೇ ಸ್ಥಿತಿ ಪಟ್ಟೇಗಾಳಿ ಗ್ರಾಮದಲ್ಲೂ ನಡೆದಿದೆ. ಇಲ್ಲಿನ ಮನೆಯೊಂದಕ್ಕೆ ನುಗ್ಗಿದ ಕರಡಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿಸಿ ತೆರಳಿದೆ.

ಇಂತಹ ಘಟನೆ ಕಾಳಿ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯ, ಅದರಂಚಿನ ಗ್ರಾಮಗಳಲ್ಲಿ ಈಚೆಗೆ ಹೆಚ್ಚುತ್ತಿದೆ. ಕಳೆದ ಮೂರು ತಿಂಗಳಲ್ಲಿ 6ಕ್ಕೂ ಹೆಚ್ಚು ಕರಡಿ ದಾಳಿ ಘಟನೆಗಳು ನಡೆದಿವೆ. ಒಂದಿಬ್ಬರು ರೈತರು ಗಂಭೀರವಾಗಿ ಗಾಯಗೊಂಡು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಜೊಯಿಡಾದ ವಾಗೇಲಿ, ಡೇರಿಯಾ, ಹುಡಸಾ, ಪಟ್ಟೇಗಾಳಿ, ಅವೇಡಾ ಸೇರಿದಂತೆ ಹಲವೆಡೆಗಳಲ್ಲಿ ಕರಡಿ ದಾಳಿಯ ಭಯ ಗ್ರಾಮಸ್ಥರಲ್ಲಿ ಮನೆಮಾಡಿದೆ. ಕೃಷಿ ಚಟುವಟಿಕೆ ಗರಿಗೆದರಿದ ಸಮಯದಲ್ಲೇ ಕರಡಿ ದಾಳಿಗಳ ಅಪಾಯ ಹೆಚ್ಚು ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ADVERTISEMENT

‘ಮಳೆಗಾಲ ಬಿರುಸುಗೊಂಡು, ಈಗ ಕಡಿಮೆಯಾಗಿದೆ. ಕಾಡಿನಲ್ಲಿ ಅಣಬೆಗಳ ಲಭ್ಯತೆ ಹೆಚ್ಚುತ್ತಿದೆ. ಅವುಗಳನ್ನು ಕಿತ್ತು ತರಲು ಒಬ್ಬಂಟಿಯಾಗಿ ಕಾಡಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಹೀಗೆ ಸಾಗುವವರ ಮೇಲೆ ಕರಡಿ ದಾಳಿಯ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಅಜಿತ್ ಮಿರಾಶಿ.

‘ಕಾಳಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾಡಿನ ನಡುವೆ ಕೃಷಿ ಭೂಮಿ ಇರುವುದು ಹೆಚ್ಚು. ಗದ್ದೆಗೆ ಸಾಗುವವರು ಕಾಡಿನ ದಾರಿ ದಾಟಿ ಸಾಗಬೇಕು. ಈಚೆಗೆ ಹುಡಸಾದಲ್ಲಿ ಗದ್ದೆಯಿಂದ ಮರಳುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿತ್ತು. ಅಂತದ್ದೇ ಘಟನೆ ಕಾರವಾರ ಮತ್ತು ಜೊಯಿಡಾ ತಾಲ್ಲೂಕು ಗಡಿಭಾಗದ ಲಾಂಡೆ ಗ್ರಾಮದಲ್ಲೂ ನಡೆದಿತ್ತು. ಒಬ್ಬಂಟಿಯಾಗಿ ಸಾಗುತ್ತಿದ್ದವರ ಮೇಲೆ ಮಾತ್ರ ಇಂತಹ ದಾಳಿ ನಡೆದಿದೆ’ ಎಂದು ಅವರು ಹೇಳಿದರು.

ಕಳೆದ 3–4 ವರ್ಷಗಳಿಗಿಂತ ಈ ಬಾರಿ ಕರಡಿ ದಾಳಿ ಘಟನೆಗಳು ಹೆಚ್ಚು ನಡೆದಿವೆ. ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತಿದೆ
ನೀಲೇಶ್ ಶಿಂಧೆ ಕಾಳಿ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್

ದಾಳಿಗೆ ಕಾರಣ ಏನು?

‘ಕರಡಿ ದಾಳಿ ಘಟನೆಗಳು ಜೊಯಿಡಾ ಭಾಗದ ಜನರಿಗೆ ಹೊಸತಲ್ಲ. ಆದರೆ ಕರಡಿ ದಾಳಿಗಳ ಘಟನೆಗಳ ಸ್ವರೂಪ ಗಮನಿಸಿದರೆ ಕರಡಿಗಳಿಗೆ ಮನುಷ್ಯರ ಮೇಲಿನ ಭಯ ಕಡಿಮೆ ಆಗಿದೆ ಎಂಬ ಭಾವನೆ ಮೂಡಿದೆ. ಹಿಂದೆಲ್ಲ ಕೃಷಿ ಚಟುವಟಿಕೆಗೆ ಅಣಬೆ ಕೀಳಲು ಗ್ರಾಮಸ್ಥರು ಗುಂಪಾಗಿ ಸಾಗುತ್ತಿದ್ದರು. ಈಚೆಗೆ ತುಂಡು ಭೂಮಿ ಹೆಚ್ಚಿದೆ. ಗ್ರಾಮದಲ್ಲಿದ್ದು ಬೇಸಾಯ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಒಬ್ಬಂಟಿಯಾಗಿ ಕೃಷಿ ಕೆಲಸಕ್ಕೆ ಸಾಗುವವರು ಹೆಚ್ಚು. ಇದರಿಂದ ಕರಡಿಗಳು ಒಬ್ಬಂಟಿಯಾಗಿ ಸಾಗುವವರ ಮೇಲೆ ದಾಳಿ ನಡೆಸುವ ಘಟನೆ ಹೆಚ್ಚಿದೆ’ ಎನ್ನುತ್ತಾರೆ ಅಜಿತ್ ಮಿರಾಶಿ.

ಗ್ರಾಮಗಳಲ್ಲಿ ಜಾಗೃತಿ ಸಂದೇಶ

ಕರಡಿ ದಾಳಿಗಳು ಹೆಚ್ಚಿರುವ ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿ ಹಳಿಯಾಳ ಅರಣ್ಯ ವಿಭಾಗದ ವ್ಯಾಪ್ತಿಯ ಗ್ರಾಮಗಳಲ್ಲಿ ಕರಡಿ ದಾಳಿ ತಡೆಗೆ ಅರಣ್ಯ ಇಲಾಖೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದೆ. ‘ಅರಣ್ಯ ಮಾರ್ಗದಲ್ಲಿ ಸಾಗುವಾಗ ಗಂಟೆ ಹಿಡಿದು ಶಬ್ದ ಮಾಡುತ್ತ ಸಾಗಬೇಕು. ಮನುಷ್ಯರ ಉಪಸ್ಥಿತಿ ಕರಡಿಯ ಅರಿವಿಗೆ ಬರುವಂತೆ ಮಾಡಬೇಕು. ಕರಡಿಗಳು ಸಮೀಪಿಸಿದರೆ ಅಂಗಾತ ಮಲಗಬೇಕು. ತನಗೆ ಅಪಾಯ ಇಲ್ಲ ಎಂಬುದು ಕರಡಿಗೆ ಖಚಿತವಾಗುವಂತೆ ವರ್ತಿಸಬೇಕು. ಅವುಗಳನ್ನು ಕೆಣಕುವ ಅಥವಾ ಬೆದರಿಸುವ ಕೆಲಸ ಮಾಡಬಾರದು. ಸಾಧ್ಯವಾದಷ್ಟು ಗುಂಪಾಗಿ ಓಡಾಟ ನಡೆಸಬೇಕು’ ಎಂದು ಕರಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.