ADVERTISEMENT

ಕಾರವಾರ: ಹಳಿ ದ್ವಿಪಥ ಕಾಮಗಾರಿ ವಿರುದ್ಧ ಹೋರಾಟಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 2:47 IST
Last Updated 17 ಡಿಸೆಂಬರ್ 2021, 2:47 IST
ಕ್ಯಾಸಲ್ ರಾಕ್ – ಗೋವಾ ರೈಲು ಮಾರ್ಗ.
ಕ್ಯಾಸಲ್ ರಾಕ್ – ಗೋವಾ ರೈಲು ಮಾರ್ಗ.   

ಕಾರವಾರ: ಕ್ಯಾಸಲ್‌ರಾಕ್– ಕುಳೆಂ ನಡುವೆ ರೈಲು ಹಳಿ ದ್ವಿಪಥ ಕಾಮಗಾರಿ ಹಮ್ಮಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರೈಲ್ವೆ ವಿಕಾಸ ನಿಗಮವು ರಾಜ್ಯದ ಹೈಕೋರ್ಟ್‌ ಮೊರೆ ಹೋಗಿದೆ. ಈ ಅರ್ಜಿಯು ಡಿ.20ರಂದು ವಿಚಾರಣೆಗೆ ಬರಲಿದೆ.

ಕಾಮಗಾರಿಗೆ ಅನುಮತಿ ನೀಡುವುದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಪರಿಸರಪ್ರಿಯ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.

ಈ ಯೋಜನೆಯು ಹುಲಿ ಸಂರಕ್ಷಿತ ವಲಯದಲ್ಲಿ ಸಾಗುತ್ತದೆ. ಅಲ್ಲದೇ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಕಾಮಗಾರಿ ನಡೆಸಬೇಕಾಗುತ್ತದೆ. ಇದರಿಂದ ಹುಲಿ ಸಂತತಿಗೆ ತೊಂದರೆಯಾಗಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರವು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿತ್ತು. ಅಲ್ಲದೇ ಕರ್ನಾಟಕ ಅರಣ್ಯ ಇಲಾಖೆಯೂ ಕಾಮಗಾರಿಗೆ ಹಸಿರು ನಿಶಾನೆ ತೋರಿಲ್ಲ. ಅಲ್ಲದೇ ಇದು ಸುಪ್ರೀಂ ಕೋರ್ಟ್‌ನ ಆದೇಶವೊಂದರ ಉಲ್ಲಂಘನೆಯಾಗಲಿದೆ ಎಂದು ‘ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್’ ಸಂಘಟನೆ ತಿಳಿಸಿದೆ.

ADVERTISEMENT

ಹಳಿ ದ್ವಿಪಥ ಕಾಮಗಾರಿಯನ್ನು ಆರಂಭಿಸುವ ಮೊದಲು ಸಂಬಂಧಿತ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯೂ ಸೂಚಿಸಿತ್ತು.

ಈ ವರ್ಷ ಮಳೆಗಾಲದಲ್ಲಿ ಕ್ಯಾಸಲ್‌ರಾಕ್ ಸಮೀಪದ ಅರಣ್ಯದ ನಡುವೆ ಹಳಿಗಳ ಮೇಲೆ ಗುಡ್ಡದ ಮಣ್ಣು ಕುಸಿದಿತ್ತು. ಇದರಿಂದ ಪ್ರಯಾಣಿಕರ ರೈಲೊಂದು ಹಳಿ ತಪ್ಪಿತ್ತು. ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿ, ಹಳಿ ದ್ವಿಪಥ ಕಾಮಗಾರಿಗಾಗಿ ಮತ್ತಷ್ಟು ಗುಡ್ಡ ಕೊರೆಯಬೇಕು. ಮರಗಳನ್ನು ಕಡಿಯಬೇಕು. ಏಳು ದೊಡ್ಡ, 74 ಸಣ್ಣ ಸೇತುವೆಗಳನ್ನು ಹಾಗೂ 23 ಸುರಂಗಗಳನ್ನು ಮಾಡಬೇಕಾಗುತ್ತದೆ. ಇದರಿಂದ ಪರಿಸರ ಸಮತೋಲನದ ಮೇಲೆ ದೊಡ್ಡ ವ್ಯತಿರಿಕ್ತ ಪರಿಣಾಮ ಆಗಲಿದೆ ಎಂದು ಸಂಘಟನೆಯು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.