ADVERTISEMENT

ಮನೆಪಾಠ: ಕಲಿಕೆಯ ಹೊಸ ನೋಟ

ಹೋಂ ವರ್ಕ್ ಮೂಲಕ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ

ಸಂಧ್ಯಾ ಹೆಗಡೆ
Published 17 ಜುಲೈ 2020, 19:45 IST
Last Updated 17 ಜುಲೈ 2020, 19:45 IST
ಶಿರಸಿ ತಾಲ್ಲೂಕಿನ ಬಕ್ಕಳ ಶಾಲೆಗೆ ಪಾಲಕರು ಮಕ್ಕಳ ನೋಟ್‌ಬುಕ್ ತೋರಿಸಲು ಬಂದಿರುವುದು
ಶಿರಸಿ ತಾಲ್ಲೂಕಿನ ಬಕ್ಕಳ ಶಾಲೆಗೆ ಪಾಲಕರು ಮಕ್ಕಳ ನೋಟ್‌ಬುಕ್ ತೋರಿಸಲು ಬಂದಿರುವುದು   

ಶಿರಸಿ: ಶಾಲೆಗಳಲ್ಲಿ ತರಗತಿಗಳು ಪ್ರಾರಂಭವಾಗಿಲ್ಲ. ಆದರೂ, ಈ ಗ್ರಾಮೀಣ ಮಕ್ಕಳು ಪ್ರತಿದಿನ ಚಾಚೂ ತಪ್ಪದೆ ಹೋಂವರ್ಕ್ ಮಾಡುತ್ತಾರೆ. ನೋಟ್‌ಬುಕ್‌ಗಳನ್ನು ಅಪ್ಪ–ಅಮ್ಮಂದಿರ ಮೂಲಕ ಶಿಕ್ಷಕರಿಗೆ ತಲುಪಿಸಿ, ಮತ್ತೆ ಮರುದಿನದ ಹೋಂವರ್ಕ್‌ಗೆ ಸಿದ್ಧರಾಗುತ್ತಾರೆ.

ತಾಲ್ಲೂಕಿನ ಬಕ್ಕಳ, ಹುಲೇಕಲ್ ಮೊದಲಾದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂತಹದೊಂದು ಪ್ರಯೋಗ ತಿಂಗಳಿನಿಂದ ನಡೆಯುತ್ತಿದೆ. ಮಕ್ಕಳು ಕಲಿತಿರುವ ಪಾಠಗಳನ್ನು ಮರೆಯಬಾರದೆಂಬ ಕಾರಣಕ್ಕೆ ಶಿಕ್ಷಕರು ವಿಶೇಷ ಕಾಳಜಿ ವಹಿಸಿ, ಮನೆಯಲ್ಲಿರುವ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸುತ್ತಿದ್ದಾರೆ.

‘ಜೂನ್‌ನಲ್ಲಿ ನಡೆದ ಪಾಲಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ, ಮಕ್ಕಳ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿ ಸಾಗಲು, ಪರ್ಯಾಯ ಮಾರ್ಗ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ಅಂದಿನಿಂದ ನಾವು ನಾಲ್ವರು ಶಿಕ್ಷಕರು ಆನ್‌ಲೈನ್ ಪಾಠ ಶುರುಮಾಡಿದೆವು. ಗ್ರಾಮೀಣ ಭಾಗದಲ್ಲಿ ಎಲ್ಲರ ಬಳಿ ಆ್ಯಂಡ್ರಾಯ್ಡ್‌ಮೊಬೈಲ್ ಫೋನ್‌ ಇರುವುದಿಲ್ಲ. ಆದ್ದರಿಂದ, ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂಬ ಕಾರಣಕ್ಕೆ ಹೋಂವರ್ಕ್ ಕಾರ್ಯಕ್ಕೆ ಹೆಚ್ಚು ಒತ್ತು ನೀಡಿದೆವು’ ಎನ್ನುತ್ತಾರೆ ಬಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಭಟ್ಟ.

ADVERTISEMENT

‘ಎರಡರಿಂದ ಏಳನೇ ತರಗತಿವರೆಗಿನ ಎಲ್ಲ 42 ಮಕ್ಕಳನ್ನು ಹೋಂವರ್ಕ್ ಕಾರ್ಯದಲ್ಲಿ ತೊಡಗಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿ ನಿತ್ಯವೂ ಕನ್ನಡ ಹಾಗೂ ಇಂಗ್ಲಿಷ್ ಶುದ್ಧಬರಹ ಬರೆಯುವುದು ಕಡ್ಡಾಯ. 2ರಿಂದ 8ರವರೆಗೆ ಪ್ರತಿಯೊಂದು ತರಗತಿಗೆ ಪ್ರತ್ಯೇಕ ವಾಟ್ಸ್‌ಆ್ಯಪ್ ಗ್ರೂಪ್‌ ಇದೆ. ಅದರಲ್ಲಿ 10ರಿಂದ 15 ನಿಮಿಷಗಳ ಪಾಠ, ಎಲ್ಲ ವಿಷಯಗಳ ಹೋಂವರ್ಕ್ ಕಳುಹಿಸುತ್ತೇವೆ. ಕೆಲವು ಮಕ್ಕಳು ಅದನ್ನು ಮೊಬೈಲ್‌ ಫೋನ್‌ನಲ್ಲಿ ಕಳುಹಿಸುತ್ತಾರೆ. ಮೊಬೈಲ್ ಇಲ್ಲದವರ ಪಾಲಕರು ಎರಡು ದಿನಕ್ಕೊಮ್ಮೆ ಶಾಲೆಗೆ ಬಂದು ಹೋಂವರ್ಕ್ ಬರೆಯಿಸಿಕೊಂಡು ಹೋಗುತ್ತಾರೆ’ ಎಂದರು.

‘ಪ್ರತಿ ಮಗು ಒಂದು ನೋಟ್‌ಬುಕ್ ಭರ್ತಿ ಮಾಡಿದೆ. ಶಾಲೆ ಆರಂಭವಾದ ಮೇಲೆ ಇದೇ ಪಾಠಗಳನ್ನು ಮತ್ತೊಮ್ಮೆ ಕಲಿಸುವುದರಿಂದ ಮಗುವಿಗೆ ವಿಷಯ ಹೆಚ್ಚು ಮನದಟ್ಟಾಗುತ್ತದೆ’ ಎಂದು ಅವರು ತಿಳಿಸಿದರು.

‘ಶಿಕ್ಷಕರು ಹೋಂವರ್ಕ್ ಕೊಡುವುದರಿಂದ ಬರುವ ದಿನಗಳಲ್ಲಿ ಮತ್ತೆ ಶಾಲೆಗೆ ಹೋಗಬೇಕು ಎಂಬ ಭಾವ ಮಕ್ಕಳಲ್ಲಿ ಇರುತ್ತದೆ’ ಎಂದು ವಿದ್ಯಾರ್ಥಿಯ ತಾಯಿ ದಾಕ್ಷಾಯಿಣಿ ಮರಾಠಿ ಹೇಳಿದರು.

**

ಶಿರಸಿ ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ಆನ್‌ಲೈನ್ ಪಾಠ, ಹೋಂವರ್ಕ್ ನೀಡುವ ಮೂಲಕ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿಸುವ ಪ್ರಯತ್ನಗಳು ನಡೆಯುತ್ತಿವೆ.
-ಎಂ.ಎಸ್.ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.