ADVERTISEMENT

ಮಾರ್ಚ್ 22ರಂದು ಕಾರವಾರ ಮಾರುಕಟ್ಟೆ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 11:30 IST
Last Updated 20 ಮಾರ್ಚ್ 2020, 11:30 IST
ಜಿತೇಂದ್ರ ತನ್ನಾ
ಜಿತೇಂದ್ರ ತನ್ನಾ   

ಕಾರವಾರ:‘ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್ 22ರಂದು ನಗರದ ಮಾರುಕಟ್ಟೆಯನ್ನು ಮುಚ್ಚಲಾಗುವುದು. ವರ್ತಕರು 12 ತಾಸುಗಳ ಅವಧಿಯಲ್ಲಿ ಮನೆಯಲ್ಲೇ ಇದ್ದು, ಸೋಂಕು ತಡೆಗೆ ಸಹಕರಿಸಲಿದ್ದಾರೆ’ ಎಂದು ಕಾರವಾರ ವಾಣಿಜ್ಯ ವ್ಯವಹಾರಗಳ ಒಕ್ಕೂಟದ ಅಧ್ಯಕ್ಷ ಜಿತೇಂದ್ರ ತನ್ನಾ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ನಗರದ ಹೋಟೆಲ್‌ಗಳು, ಎಲ್ಲ ರೀತಿಯ ವ್ಯಾಪಾರ, ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗುವುದು. ಸಾಂಕ್ರಾಮಿಕ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಉದ್ಯಮಿಗಳು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲಿದೆ’ ಎಂದು ತಿಳಿಸಿದರು.

ಕಾರವಾರ ಹೋಟೆಲ್ ಮತ್ತು ರೆಸ್ಟೊರೆಂಟ್ ಸಂಘದ ಅಧ್ಯಕ್ಷ ಶಾಮಸುಂದರ ಬಸ್ರೂರು ಮಾತನಾಡಿ, ‘ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಆರಂಭವಾದಾಗಿನಿಂದ ಶೇ 80ರಷ್ಟು ವ್ಯವಹಾರ ಕಡಿಮೆಯಾಗಿದೆ. ಸೋಂಕು ಹರಡದಂತೆ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ. ನಾವು 12 ತಾಸುಗಳ ಅವಧಿಯಲ್ಲಿ ಸಂಚಾರ ಮಾಡದೇ ಇದ್ದರೆ ಹರಡುವ ಕೊಂಡಿಯನ್ನು ಕತ್ತರಿಸಲು ಸಾಧ್ಯವಿದೆ. ಹಾಗಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಮ್ಮ ಸಂಸ್ಥೆಗಳ ಎಲ್ಲ ನೌಕರರಿಗೆ ಮುಖಗವಸು ನೀಡಲಾಗಿದೆ. ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳಲು ಸ್ಯಾನಿಟೈಸರ್‌ಗಳು, ಸಾಬೂನನ್ನು ವ್ಯವಹಾರ ಕೇಂದ್ರಗಳಲ್ಲಿ ಇಡಲಾಗಿದೆ. ನಮ್ಮ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಲು ಗರಿಷ್ಠ ಕ್ರಮಗಳನ್ನು ಅನುಸರಿಸಲಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಭರಣ ಮಳಿಗೆಗಳು, ಜವಳಿ ವರ್ತಕರು, ಕಿರಾಣಿ ವರ್ತಕರು, ವೇದಿಕೆ ಅಲಂಕಾರ ವ್ಯವಹಾರಸ್ಥರು ಸೇರಿದಂತೆ ಹತ್ತಾರು ಕ್ಷೇತ್ರಗಳ ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.