ಕಾರವಾರ: ಸರ್ಕಾರದ ವೇತನ ಪಡೆಯುತ್ತಿದ್ದರೂ ಕೆಲಸದ ಅವಧಿಯಲ್ಲಿ ನಗರದ ಖಾಸಗಿ ಕ್ಲಿನಿಕ್‌ಗಳಲ್ಲಿ ಲಭ್ಯರಾಗುತ್ತಿದ್ದ ವೈದ್ಯರಿಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಡಿವಾಣ ಬಿದ್ದಿದೆ. ದಿನಕ್ಕೆ ನಾಲ್ಕು ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವ ಮೂಲಕ ಈ ಕ್ರಮಕ್ಕೆ ಮುಂದಾಗಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯ ಜಾರಿಯಲ್ಲಿದ್ದರೂ ಕ್ರಿಮ್ಸ್‌ನಲ್ಲಿ ಪಾಲನೆಗೆ ಕೆಲ ವೈದ್ಯರು, ಇತರ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರು ಎಂಬ ಆರೋಪವಿತ್ತು. ಕ್ರಿಮ್ಸ್ ಅಧೀನದ ಜಿಲ್ಲಾಸ್ಪತ್ರೆಯಲ್ಲಿ ಕೆಲಸದ ಅವಧಿಯಲ್ಲೂ ವೈದ್ಯರು ಲಭ್ಯರಾಗದ ಬಗ್ಗೆ ಸಾರ್ವಜನಿಕರಿಂದ ದೂರು ವ್ಯಾಪಕವಾಗಿತ್ತು.
‘ಆಸ್ಪತ್ರೆಯ ಕೆಲ ವಿಭಾಗಗಳಲ್ಲಿ ತಜ್ಞ ವೈದ್ಯರು ಸಮಯಕ್ಕೆ ಸರಿಯಾಗಿ ಲಭ್ಯರಾಗುತ್ತಿರಲಿಲ್ಲ. ಕೆಲವರನ್ನು ಭೇಟಿ ಮಾಡಲು ಖಾಸಗಿ ಕ್ಲಿನಿಕ್‌ಗಳಿಗೆ ಹೋಗುವ ಸ್ಥಿತಿ ಇತ್ತು’ ಎಂಬುದು ಜನರ ಆರೋಪವಾಗಿತ್ತು.
‘ಆಸ್ಪತ್ರೆಯ ಕೆಲಸದ ಅವಧಿಯಲ್ಲಿ ಗೈರಾಗುವುದನ್ನು ತಡೆಯಲು ವೈದ್ಯರು, ಇತರ ಸಿಬ್ಬಂದಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕ ಹಾಜರಿ ಹಾಕುವಂತೆ ಸೂಚಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ವೈದ್ಯರು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಮಧ್ಯಾಹ್ನ ಮತ್ತು ಸಂಜೆ ಅವಧಿಯಲ್ಲೂ ಅವರು ಹೊರಹೋಗುವುದಾದರೆ ಬಯೋಮೆಟ್ರಿಕ್‌ನಲ್ಲಿ ಮಾಹಿತಿ ದಾಖಲಿಸಿ ಹೊರಹೋಗಬೇಕಾಗುತ್ತದೆ. ಇವುಗಳನ್ನು ಗಮನಿಸಲು ಸಿಬ್ಬಂದಿ ನೇಮಿಸಿದ್ದೇವೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ ತಿಳಿಸಿದರು.
‘ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು 204 ವೈದ್ಯರ ಅಗತ್ಯವಿದೆ. ಆದರೆ, ಸದ್ಯ 93 ವೈದ್ಯರಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಇರುವ ಸೀಮಿತ ಸಿಬ್ಬಂದಿಯ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ಆಸ್ಪತ್ರೆ ನಿಭಾಯಿಸಬೇಕಾಗುತ್ತಿದೆ. ವೈದ್ಯರ ಕೊರತೆ ಸಮಸ್ಯೆ ನಡುವೆ ಇರುವ ಸಿಬ್ಬಂದಿಯೂ ಗೈರಾದರೆ ಸಮಸ್ಯೆ ಎದುರಾಗಬಹುದು ಎಂಬ ಕಾರಣದಿಂದ ಕಟ್ಟುನಿಟ್ಟಾಗಿ ಹಾಜರಿ ವ್ಯವಸ್ಥೆ ಜಾರಿಗೆ ತಂದಿದ್ದೇವೆ’ ಎಂದರು.
‘ಕ್ರಿಮ್ಸ್‌ಗೆ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ ಕಟ್ಟಡ ಹಸ್ತಾಂತರ ಪ್ರಕ್ರಿಯೆ ಬಾಕಿ ಇದೆ. ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಖರೀದಿಗೆ ಸರ್ಕಾರ ಮಂಜೂರಾತಿ ನೀಡಿದೆ. ಕ್ಯಾನ್ಸರ್ ಘಟಕ ಟ್ರಾಮಾ ಸೆಂಟರ್ ಸೇರಿದಂತೆ ವಿವಿಧ ವಿಭಾಗಕ್ಕೆ ತಜ್ಞ ವೈದ್ಯರ ನೇಮಕಾತಿ ಹಾಗೂ ಕಾರ್ಯನಿರ್ವಹಣೆಗೆ ಎ ದರ್ಜೆಯಿಂದ ಡಿ ದರ್ಜೆಯವರೆಗೆ ಹೆಚ್ಚುವರಿ 600 ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.