ಕಾರವಾರ: ಅತಿವೃಷ್ಟಿಯ ಪರಿಣಾಮ ಕೋಟ್ಯಂತರ ಮೊತ್ತದ ಫಸಲು ನಷ್ಟವಾದರೂ ಜಿಲ್ಲೆಯ ರೈತರಿಗೆ ಕೈಗೆಟಕುವ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಮಾತ್ರ ಅಲ್ಪ ಪ್ರಮಾಣದ್ದು! ಹೀಗೆ ವಿಮೆ ಪರಿಹಾರ ಸಿಗದಿರಲು ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳೇ ಕಾರಣ ಎಂಬುದು ರೈತರ ದೂರು.
ಜಿಲ್ಲೆಯಲ್ಲಿ 220 ಕಡೆಗಳಲ್ಲಿ ಮಳೆ ಮಾಪನ ಯಂತ್ರಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಳವಡಿಸಿದೆ. ಬಹುತೇಕ ಯಂತ್ರಗಳು ಗ್ರಾಮ ಪಂಚಾಯಿತಿ ಕಚೇರಿ ಆವರಣ ಇಲ್ಲವೇ ಕೃಷಿ ಇಲಾಖೆಯ ಕಚೇರಿಗಳ ಆವರಣದಲ್ಲಿವೆ. ಅವುಗಳ ಪೈಕಿ ತುಕ್ಕು ಹಿಡಿದು ಹಾಳಾದ ಯಂತ್ರಗಳ ಸಂಖ್ಯೆಯೇ ಹೆಚ್ಚಿವೆ.
ಹವಾಮಾನ ಆಧಾರಿತ ಬೆಳೆವಿಮೆ ಮಂಜೂರಾತಿಗೆ ಆಯಾ ಗ್ರಾಮದಲ್ಲಿ ಒಟ್ಟಾರೆ ಫಸಲಿನ ಪ್ರಮಾಣದಲ್ಲಿ ಅತಿವೃಷ್ಟಿಗೆ ಅಥವಾ ಅನಾವೃಷ್ಟಿಗೆ ಅರ್ಧಕ್ಕಿಂತಲೂ ಹೆಚ್ಚು ನಷ್ಟವಾಗಿರಬೇಕು. ಮಳೆ ವಾಡಿಕೆಗಿಂತ ಹೆಚ್ಚು ಬಿದ್ದಿರಬೇಕು. ಇವೆಲ್ಲ ಅಂಶಗಳನ್ನು ಆಧರಿಸಿ ವಿಮೆ ಕಂಪನಿ ಪರಿಹಾರ ನೀಡಲು ನಿರ್ಧರಿಸುತ್ತದೆ. ಆದರೆ, ಮಳೆ ಮಾಪನ ಯಂತ್ರಗಳೇ ಸರಿ ಇಲ್ಲದ ಕಾರಣದಿಂದ ನಿಖರ ಮಳೆ ಮಾಹಿತಿ ರವಾನೆ ಆಗುತ್ತಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ವಿಮೆ ಪರಿಹಾರ ಮಂಜೂರಾತಿ ತಡೆಹಿಡಿಯಲಾಗುತ್ತಿದೆ ಎಂಬುದು ರೈತರ ಆರೋಪ.
ಶಿರಸಿ ತಾಲ್ಲೂಕಿನ 15ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿರುವ ಮಳೆ ಮಾಪನ ಯಂತ್ರಗಳು ಇಂದಿಗೂ ದುರಸ್ತಿ ಕಂಡಿಲ್ಲ. ಮಳೆ ಮಾಪನ ಕೇಂದ್ರಗಳ ದುರಸ್ತಿ ಇಲ್ಲವೇ ಬದಲಾವಣೆ ವಿಷಯದ ಬಗ್ಗೆ ಹಲವು ಗ್ರಾಮ ಪಂಚಾಯಿತಿಗಳು ಠರಾವು ಮಾಡಿ ಸರ್ಕಾರಕ್ಕೆ ಸಲ್ಲಿಸಿವೆ. ಈವರೆಗೆ ಸ್ಪಂದನೆ ಇಲ್ಲ ಎಂಬುದು ಹಲವು ಗ್ರಾಮ ಪಂಚಾಯಿತಿ ಸದಸ್ಯರ ದೂರು.
ಕುಮಟಾ ತಾಲ್ಲೂಕಿನಲ್ಲಿಯೂ ಮಳೆ ಮಾಪನ ಯಂತ್ರಗಳು ಸರಿಯಾಗಿಲ್ಲದ ಪರಿಣಾಮ ಅಡಿಕೆ ಬೆಳೆಗೆ ಕೊಳೆ ರೋಗ ಬಂದು ನಷ್ಟವಾದರೂ ವಿಮೆ ಪರಿಹಾರ ಸಿಗಲು ಅಡ್ಡಿಯಾಗಿದೆ ಎನ್ನುತ್ತಾರೆ ಬೊಗರಿಬೈಲ್ ಗ್ರಾಮದ ರೈತ ನಾರಾಯಣ ನಾಯ್ಕ.
‘ಹವಾಮಾನ ಆಧಾರಿತ ಮಳೆ ಮಾಹಿತಿ ಪಡೆಯಲು ಕೆ.ಎಸ್.ಡಿ.ಎಂ.ಎ ಎನ್ನುವ ಮೊಬೈಲ್ ತಂತ್ರಾಂಶ ಇದೆ. ಅದರ ಮೂಲಕ ಬರುವ ಸ್ಥಳೀಯ ಮಳೆ ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು. ತಾಲ್ಲೂಕಿನ ಮಳೆ ಮಾಹಿತಿ ಈ ತಂತ್ರಾಂಶ ಬಳಸಿ ಪಡೆಬಹುದು’ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ.
ಗೋಕರ್ಣ ಬಂಗ್ಲೆಗುಡ್ಡದಲ್ಲಿ ಜಲಾನಯನ ಇಲಾಖೆ ಮಳೆ ಮಾಪನ ಯಂತ್ರ ಅಳವಡಿಸಿದೆ. ಆದರೆ ಅದಕ್ಕೆ ಸುರಕ್ಷತೆಯೇ ಇಲ್ಲದಾಗಿದೆ. ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದ್ದರೂ, ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ. ಇಲ್ಲಿ 2 ಯಂತ್ರಗಳನ್ನು ಅಳವಡಿಸಲಾಗಿದೆ. ಒಂದು ಸ್ವಯಂ ಚಾಲಿತ ಯಂತ್ರ. ಮತ್ತೊಂದು ಕೈಯಿಂದ ಅಳೆಯುವ ಯಂತ್ರ. ಇಲ್ಲಿಯ ಮಳೆಯ ಮಾಹಿತಿಯನ್ನು ಧಾರವಾಡದಲ್ಲಿರುವ ಮುಖ್ಯ ಕಚೇರಿಗೆ ಕಳುಹಿಸುತ್ತೇವೆ. ಸುತ್ತಲೂ ಹೊಸದಾಗಿ ತಂತಿ ಬೇಲಿ ಅಳವಡಿಸಬೇಕಾಗಿದೆ. ಕೆಲವೊಮ್ಮೆ ಜಾನುವಾರುಗಳು ಒಳಗೆ ಪ್ರವೇಶಿಸಿ ಯಂತ್ರವನ್ನು ಹಾಳು ಮಾಡುತ್ತಿವೆ ಎನ್ನುತ್ತಾರೆ ಯಂತ್ರ ನಿರ್ವಹಿಸುವ ಸಿಬ್ಬಂದಿಯೊಬ್ಬರು.
ಭಟ್ಕಳ ಪ್ರವಾಸಿ ಮಂದಿರದ ಬಳಿ ಇರುವ ಮಳೆಮಾಪನ ಕೇಂದ್ರದಲ್ಲಿರುವ ಮಳೆ ಮಾಪನ ಯಂತ್ರವೂ ಹಳತಾಗಿದ್ದು, ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಭಟ್ಕಳದಲ್ಲಿ ಅತ್ಯಧಿಕ ಮಳೆಯಾದರೂ ಮಳೆಮಾಪನಾ ಯಂತ್ರದಿಂದ ನಿಖರವಾದ ಮಳೆ ವಿವರ ಲಭಿಸುತ್ತಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ.
ಮಳೆ ಮಾಪನ ಯಂತ್ರದಿಂದ ನಿಖರ ಮಾಹಿತಿ ಸಿಗದ ರೈತರ ದೂರಿನ ಹಿನ್ನೆಲೆಯಲ್ಲಿ ಈಚೆಗಷ್ಟೆ ಸಚಿವ ಮಂಕಾಳ ವೈದ್ಯ ಕೆಡಿಪಿ ಸಭೆಯಲ್ಲಿ ಯಂತ್ರ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಅಂಕೋಲಾ ತಾಲ್ಲೂಕಿನ ಬಹುತೇಕ ಮಳೆ ಮಾಪನ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಯಲ್ಲಾಪುರ ತಾಲ್ಲೂಕಿನಲ್ಲಿ 6 ಮಳೆಮಾಪನಗಳು ಮಾತ್ರ ಸುಸ್ಥಿತಿಯಲ್ಲಿದ್ದು, ಹಾಸಣಗಿ, ಮಂಚಿಕೇರಿ, ಉಮ್ಮಚಗಿ, ಕಿರವತ್ತಿ, ಮದನೂರು, ಕಣ್ಣಿಗೇರಿ, ಆನಗೋಡು, ವಜ್ರಳ್ಳಿಯಲ್ಲಿರುವ ಮಳೆ ಮಾಪನಗಳು ಸರಿಯಾಗಿಲ್ಲ.
ಸಿದ್ದಾಪುರ ತಾಲ್ಲೂಕಿನಲ್ಲಿ ಐದಾರು ಯಂತ್ರಗಳ ಹೊರತಾಗಿ ಬಹುತೇಕ ಕಡೆ ಯಂತ್ರಗಳು ಕೆಟ್ಟು ನಿಂತಿವೆ. ಸಮೀಪದ ಇನ್ನೊಂದು ಯಂತ್ರದ ಮಾಪನ ಮಾಹಿತಿ ಅವಲಂಬಿಸಲಾಗುತ್ತಿದ್ದು, ಸ್ಥಳದಿಂದ ಸ್ಥಳಕ್ಕೆ ಮಳೆಯ ಪರಿಮಾಣ ವ್ಯತ್ಯಯವಾಗುವುದರಿಂದ ರೈತರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದು ರೈತರ ದೂರು.
ಹಳಿಯಾಳ ತಾಲ್ಲೂಕಿನಲ್ಲಿ ಒಟ್ಟು ಮೂರು ಹೋಬಳಿ ಮಟ್ಟದಲ್ಲಿ ಮಳೆ ಮಾಪನ ಯಂತ್ರಗಳನ್ನು ಅಳವಡಿಸಲಾಗಿದ್ದು ದಾಂಡೇಲಿಯಲ್ಲಿ ಒಂದು ಮಳೆಮಾಪನ ಕೇಂದ್ರ ಅಳವಡಿಸಲಾಗಿದೆ. ಯಂತ್ರಗಳು ಸುಸ್ಥಿತಿಯಲ್ಲಿದ್ದು ಆನ್‌ಲೈನ್ ಮೂಲಕ ಮಾಹಿತಿ ಪಡೆಯಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಆರ್.ಹೇರಿಯಾಳ್ ಹೇಳಿದರು.
ಬೆಳೆ ವಿಮೆ ಪರಿಹಾರ ವಿತರಣೆ ಕುರಿತಂತೆ ಹೆಚ್ಚಿನ ರೈತರಿಗೆ ಸಮಾಧಾನವಿಲ್ಲ. ಪರಿಹಾರದ ಮೊತ್ತದಲ್ಲಿ ಅನಿರೀಕ್ಷಿತ ಏರುಪೇರುಗಳಾಗುತ್ತಿರುವುದರಿಂದ ಇದೊಂದು ‘ಲಾಟರಿ ತಾಗಿದಂತೆ’ ಎಂಬ ನಂಬಿಕೆ ಅನೇಕರಲ್ಲಿದೆ. ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದೂ ಕೆಲ ಅಡಿಕೆ ಬೆಳೆಗಾರರು ದೂರಿದ್ದಾರೆ. ಅತಿವೃಷ್ಟಿಯಿಂದ ಬೆಳೆ ನಷ್ಟವಾದರೂ ನಿಗದಿತ ಪರಿಹಾರವನ್ನು ವಿಮೆ ಕಂಪನಿಗಳು ಪಾವತಿಸದಿರುವುದಕ್ಕೆ ಮಳೆಮಾಪನ ಕೇಂದ್ರಗಳ ಅಸಮರ್ಪಕ ಕಾರ್ಯವಿಧಾನ ಕಾರಣ ಎನ್ನುವುದಕ್ಕೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೆಟ್ಟುನಿಂತಿರುವ ಮಳೆಮಾಪನ ಕೇಂದ್ರಗಳು ಸಾಕ್ಷಿಯಾಗಿವೆ. ಕೆಕ್ಕಾರ ಮಾಗೋಡ ಮಾವಿನಕುರ್ವ ಕಡ್ಲೆ ಕರ್ಕಿ ಕಾಸರಕೋಡ ಹಳದೀಪುರ ಕುದ್ರಗಿ ಉಪ್ಪೋಣಿ ಕೆಳಗಿನೂರು ಸೇರಿದಂತೆ ಒಟ್ಟೂ 10 ಕಡೆಗಳಲ್ಲಿ ಮಳೆಮಾಪನ ಕೇಂದ್ರಗಳು ಮಳೆ ಪ್ರಮಾಣವನ್ನು ತಪ್ಪಾಗಿ ದಾಖಲಿಸುತ್ತಿರುವ ದೂರುಗಳಿವೆ. ‘ಅತಿವೃಷ್ಟಿಯಲ್ಲೂ ದಾಖಲಾಗುವ ಮಳೆಯ ಪ್ರಮಾಣ ಕಡಿಮೆಯಾಗುವ ಕರಾಮತ್ತಿನ ಹಿಂದೆ ವಿಮಾ ಕಂಪನಿಗಳ ಕೈವಾಡವಿರಬಹುದು’ ಎಂಬ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
‘ಮಳೆಮಾಪನ ಯಂತ್ರ ಕೆಲವೆಡೆ ಹಾಳಾಗಿದ್ದರೆ ಇನ್ನು ಕೆಲ ಯಂತ್ರಗಳು ತಪ್ಪಾಗಿ ದಾಖಲಿಸುತ್ತಿವೆ. ಕಾರಣ ಕೇಳಿದರೆ ಮಳೆಮಾಪನ ಕೇಂದ್ರ ನಿರ್ವಹಿಸುವ ಕೆಎಸ್ಎನ್‍ಡಿಎಂಸಿ ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ ಹೆಗಡೆ ದೂರಿದರು.
ಮಳೆ ಮಾಪನ ಘಟಕಗಳು ದುರಸ್ತಿಯಾಗದ ಕಡೆ ಹೊಸ ಘಟಕ ನೀಡಲು ಗುತ್ತಿಗೆಯಾಗಿದೆ. ಆದರೂ ಈವರೆಗೆ ಅಳವಡಿಸುವ ಕೆಲಸ ನಡೆದಿಲ್ಲ-ನಾರಾಯಣ ಹೆಗಡೆ, ದೇವನಳ್ಳಿ ಗ್ರಾಮ ಪಂಚಾಯಿತಿ ಸದಸ್ಯ
ಮಳೆ ಮಾಪನ ಯಂತ್ರಗಳ ದುರಸ್ತಿ ಮಾಡದಿರುವುದರಿಂದ ಸರಿಯಾದ ವರದಿ ದೊರಕದೆ ರೈತರಿಗೆ ಸಿಗಬೇಕಾದ ವಿಮೆ ಮೊತ್ತ ದೊರಕುತ್ತಿಲ್ಲ-ಶಾಂತಾರಾಮ ನಾಯಕ, ರೈತ ಮುಖಂಡ
ಪ್ರತಿ ವರ್ಷ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಪಡೆಯಲು ರೈತರು ಹೋರಾಟ ನಡೆಸಬೇಕಾಗುತ್ತಿದೆ. ಮಳೆ ಮಾಪನ ಯಂತ್ರಗಳ ಅಧ್ವಾನ ಇದಕ್ಕೆ ಕಾರಣಗಳಲ್ಲೊಂದು. ಆದರೂ ಸರ್ಕಾರ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.-ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಬಿದ್ರಕಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ಹೆಗಡೆ, ರವಿ ಸೂರಿ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಸುಜಯ್ ಭಟ್, ಸಂತೋಷಕುಮಾರ ಹಬ್ಬು, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.