ADVERTISEMENT

ಕಾರವಾರ | ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಉತ್ಸವ: ಸಚಿವ ಮಂಕಾಳ ವೈದ್ಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:45 IST
Last Updated 23 ಡಿಸೆಂಬರ್ 2025, 7:45 IST
<div class="paragraphs"><p>ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಸಿಂಗಾರ ಅರಳಿಸುವ ಮೂಲಕ ಕರಾವಳಿ ಉತ್ಸವ ಸಪ್ತಾಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.</p></div>

ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಸಿಂಗಾರ ಅರಳಿಸುವ ಮೂಲಕ ಕರಾವಳಿ ಉತ್ಸವ ಸಪ್ತಾಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.

   

ಕಾರವಾರ: ಮುಸ್ಸಂಜೆ ಸೂರ್ಯ ಮರೆಯಾಗುತ್ತಿದ್ದಂತೆ ಟ್ಯಾಗೋರ್ ಕಡಲತೀರದಲ್ಲಿ ಸಾಂಸ್ಕೃತಿಕ ಲೋಕ ಬೆಳಗಿತು. ಕರಾವಳಿಯಲ್ಲಿ ದಕ್ಷಿಣ ಕರ್ನಾಟಕದ ಜಾನಪದ ಕಲೆಗಳ ಪ್ರದರ್ಶನದೊಂದಿಗೆ ಸೋಮವಾರ ಏಳು ವರ್ಷದ ಬಳಿಕ ‘ಕರಾವಳಿ ಉತ್ಸವ ಸಪ್ತಾಹ’ಕ್ಕೆ ಚಾಲನೆ ಸಿಕ್ಕಿತು.

ಮಯೂರ ವರ್ಮ ವೇದಿಕೆಯಲ್ಲಿ ಗಣ್ಯರು ದೀಪ ಬೆಳಗಿ, ಸಿಂಗಾರ ಅರಳಿಸಿ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಪಕ್ಕದಲ್ಲೇ ಇದ್ದ ಸಮುದ್ರದಲ್ಲಿ ಯಾಂತ್ರಿಕೃತ ದೋಣಿಗಳ ಮೂಲಕ ಮೀನುಗಾರರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ADVERTISEMENT

ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಯೋಜನೆ ಮತ್ತು  ಸಾಂಖ್ಯಿಕ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಏಳು ದಿನಗಳ ಕರಾವಳಿ ಉತ್ಸವ ಸಪ್ತಾಹಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ‘ಪ್ರಾದೇಶಿಕ ಕಲೆಗಳ ಉಳಿವಿಗೆ ಸರ್ಕಾರ ಬದ್ಧವಾಗಿದೆ. ಕಲಾವಿದರನ್ನು ಪೋಷಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಏಳು ದಿನದ ಉತ್ಸವ ಆಯೋಜಿಸಲಾಗಿದೆ. ಸ್ಥಳೀಯ ಜನರಿಗೆ ಮನೋರಂಜನೆ ಒದಗಿಸುವ ಜೊತೆಗೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಹೊರಜಗತ್ತಿಗೆ ಪರಿಚಯಿಸಲು ಉತ್ಸವ ವೇದಿಕೆಯಾಗಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ‘ಕರಾವಳಿ ಉತ್ಸವ ಪ್ರತಿ ವರ್ಷ ನಡೆಯಬೇಕು. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರಕ್ಕೆ ಒತ್ತಡ ತರಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಸೈಲ್, ‘ಜನರ ರಂಜನೆಗೆ ಖ್ಯಾತನಾಮ ಕಲಾವಿದರನ್ನು ಕರೆಯಿಸುವ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಯೋಜನೆ ಘೋಷಣೆಯ ಭರವಸೆ ಸಿಕ್ಕಿದೆ. ಒಂದು ವೇಳೆ ಯೋಜನೆ ಸಾಧ್ಯವಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ‘1995ರಿಂದ ಕರಾವಳಿ ಉತ್ಸವ ಆಯೋಜಿಸಲಾಗುತ್ತಿದೆ. ಈ ಹಿಂದೆ 17 ಬಾರಿ ಉತ್ಸವ ನಡೆದಿದೆ. ಏಳು ವರ್ಷಗಳ ಬಳಿಕ ಅದ್ದೂರಿಯಾಗಿ ಉತ್ಸವ ಆಯೋಜಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿಸಿಎಫ್ ಸಿ.ರವಿಶಂಕರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಅತೀಕ್ ಉಲ್ಲಾ, ಉಪವಿಭಾಗಾಧಿಕಾರಿ ಶ್ರವಣಕುಮಾರ, ಪ್ರೋಬೇಷನರಿ ಐಎಎಸ್ ಅಧಿಕಾರಿ ಝೂಫಿಶಾನ್ ಹಕ್ ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸ್ವಾಗತಿಸಿದರು.

ಜಿಲ್ಲೆಯ ಪರಿಸರ ಹಾಳು ಮಾಡದೆ ಪರಿಸರ ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ

ನಡೆಯದ ಮೆರವಣಿಗೆ

ಕರಾವಳಿ ಉತ್ಸವಕ್ಕೆ ಚಾಲನೆ ನೀಡುವ ಮುನ್ನ ಇಲ್ಲಿನ ಸುಭಾಷ್ ವೃತ್ತದಿಂದ ನಡೆಯಬೇಕಿದ್ದ ಮೆರವಣಿಗೆ ರದ್ದುಪಡಿಸಲಾಯಿತು. ಮೆರವಣಿಗೆಯಲ್ಲಿ ಪ್ರದರ್ಶನ ನೀಡಲು ಬಂದಿದ್ದ ಕಲಾತಂಡಗಳಿಗೆ ಮಯೂರ ವರ್ಮ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಗೊರವರ ತಂಡದಿಂದ ಗೊರವ ಕುಣಿತ ಚಿತ್ರದುರ್ಗದ ತಂಡದಿಂದ ಮುಖವಾಡ ಕುಣಿತ‌ ರಾಯಚೂರು ಮಹಾಲಕ್ಷ್ಮಿ  ತಂಡದಿಂದ ಸುಗಮ ಸಂಗೀತ ಜಾನಪದ ನೃತ್ಯ ಶ್ರೀನಿವಾಸ ತಂಡದಿಂದ ಕಹಳೆ ಕಲೆ ಪ್ರದರ್ಶನ ಸೀಮಾ ಭಾಗ್ವತ್ ತಂಡದವರಿಂದ ಭರತನಾಟ್ಯ ಪ್ರದರ್ಶನ ಗಮನಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.